Home ಮುಖಪುಟ ಸುದ್ದಿ ವಿಪಕ್ಷ ನಾಯಕರ ಭೇಟಿಗೆ ಸಿಜೆಐ ನಕಾರ

ವಿಪಕ್ಷ ನಾಯಕರ ಭೇಟಿಗೆ ಸಿಜೆಐ ನಕಾರ

ನವದೆಹಲಿ, ಅ. ೧೨- ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಸೇರಿದಂತೆ ವಿಪಕ್ಷ ನಾಯಕರ ಭೇಟಿಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವಕಾಶ ನಿರಾಕರಿಸಿದ್ದಾರೆ.


ನವದೆಹಲಿಯಲ್ಲಿಂದು ಎಸ್‌ಐಆರ್ ಹಾಗೂ ಸಿಇಸಿ ವಿರುದ್ಧ ಪ್ರತಿಭಟನೆ ನಡೆಸಿ ಸಂಜೆ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿ ಮಾಡಲು ಕಾಂಗ್ರೆಸ್ ಸೇರಿದಂತೆ ಇಂಡಿ ಒಕ್ಕೂಟ ನಿರ್ಧರಿಸಿದ್ದವು. ಅದರಂತೆ ಸಿಜೆಐರವರನ್ನು ಭೇಟಿ ಮಾಡಲು ಸಮಯ ಕೋರಿ ಪತ್ರ ಬರೆದಿದ್ದರು. ಆದರೆ ವಿಪಕ್ಷ ನಾಯಕರ ಭೇಟಿಗೆ ಸಿಜೆಐ ಒಪ್ಪಿಲ್ಲ. ಇದರಿಂದ ಪ್ರತಿಪಕ್ಷ ನಾಯಕರುಗಳಿಗೆ ನಿರಾಸೆಯಾಗಿದೆ.


ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ರವರ ಕಾರ್ಯವೈಖರಿ ಹಾಗೂ ದೆಹಲಿಯಲ್ಲಿ ಸಿಇಸಿ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರ ನಿಲುವು ಎಲ್ಲವನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರಲು ಪ್ರತಿಪಕ್ಷಗಳು ಮುಂದಾಗಿ ಇಂದು ಸಂಜೆ ಮುಖ್ಯ ನ್ಯಾಯಮೂರ್ತಿಗಳ ಭೇಟಿಗೆ ಸಮಯಾವಕಾಶ ಕೇಳಿದ್ದರು.


ಆದರೆ ಮುಖ್ಯ ನ್ಯಾಯಮೂರ್ತಿಗಳು ಸದ್ಯದ ಸಂದರ್ಭದಲ್ಲಿ ಭೇಟಿ ಸರಿಯಲ್ಲ ಎಂದು ಹೇಳಿ, ವಿಪಕ್ಷ ನಾಯಕರ ಭೇಟಿಗೆ ಅವಕಾಶ ನೀಡಿಲ್ಲ.


ಎಸ್‌ಐಆರ್ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗಳು ಬಾಕಿ ಇವೆ. ಮುಖ್ಯ ನ್ಯಾಯಮೂರ್ತಿಗಳೇ ಕೆಲವು ಅರ್ಜಿಗಳ ವಿಚಾರಣೆಯಲ್ಲಿ ನ್ಯಾಯ ನಿರ್ಣಯದ ಪಾತ್ರ ವಹಿಸಿರುವುದರಿಂದ ವಿಪಕ್ಷ ನಾಯಕರ ಭೇಟಿ ಸದ್ಯದ ಪರಿಸ್ಥಿತಿಯಲ್ಲಿ ಸೂಕ್ತವಲ್ಲ ಎಂಬ ನಿಲುವನ್ನು ಸಿಜೆಐ ತಳೆದಿದ್ದಾರೆ ಎಂದು ಹೇಳಲಾಗಿದೆ.


ನವದೆಹಲಿಯಲ್ಲಿಂದು ಸುಪ್ರೀಂ ಕೋರ್ಟ್ ವರೆಗೂ ಮೆರವಣಿಗೆ ನಡೆಸಿ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿ ಮಾಡಲು ಕಾಂಗ್ರೆಸ್ ಪಕ್ಷ ಮುಂದಾಗಿತ್ತು.


ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸಂವಿಧಾನಾತ್ಮಕ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಆತಂಕಗಳನ್ನು ಸುಪ್ರೀಂ ಕೋರ್ಟ್ ಮುಂದೆ ಮಂಡಿಸಲು ಬಯಸಿದ್ದೇವೆ. ನ್ಯಾಯಾಂಗದ ಮುಖ್ಯಸ್ಥರ ಬಳಿ ಯಾವುದೇ ಬೇಡಿಕೆಗಳನ್ನು ಇಡಲು ಸಾಧ್ಯವಿಲ್ಲ. ಕೈಮುಗಿದು ನಮ್ಮ ಕಳವಳಗಳನ್ನು ವಿವರಿಸಿ, ಮಧ್ಯೆ ಪ್ರವೇಶಿಸುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದ್ದರು.

ಪ್ರಜೆಗಳಿಗೆ ಸುಪ್ರೀಂ ಕೋರ್ಟ್ ಬಾಗಿಲು ತೆರೆದಿದೆ


ತಮ್ಮನ್ನು ಭೇಟಿಯಾಗಲು ಇಂಡಿಯಾದ ಒಕ್ಕೂಟದ ನಾಯಕರು ನೀಡಿದ ಪತ್ರಕ್ಕೆ ಉತ್ತರ ನೀಡಿದ್ದೇನೆ. ಇಂಡಿಯಾ ಒಕ್ಕೂಟದ ನಾಯಕರನ್ನು ಭೇಟಿಯಾಗದಿರಲು ಕಾರಣಗಳನ್ನು ವಿವರಿಸಿ ಅವರ ಮನವಿಗೆ ಪ್ರತಿಕ್ರಿಯೆ ನೀಡಿರುವುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ತಿಳಿಸಿದ್ದಾರೆ.


ಪತ್ರದ ವಿಷಯದ ಬಗ್ಗೆ ಅವರನ್ನೇ ಕೇಳಿ ಪತ್ರದ ಗೌಪ್ಯತೆಯನ್ನು ನಾನು ಕಾಪಾಡಿಕೊಂಡಿದ್ದೇನೆ ಎಂದು ಅವರು ಹೇಳಿದರು. ಸುಪ್ರೀಂಕೋರ್ಟಿನ ಬಾಗಿಲು ಎಲ್ಲರಿಗೂ ತೆರೆದಿದೆ. ಸುಪ್ರೀಂಕೋರ್ಟ್ ಎಲ್ಲರಿಗೂ ಮುಕ್ತವಾಗಿದೆ. ಸಾಮಾನ್ಯ ನಾಗರಿಕರಿಂದ ಹಿಡಿದು ಚುನಾಯಿತ ಸಂಸ್ಥೆಗಳ ಸದಸ್ಯರವರೆಗೆ ಎಲ್ಲರೂ ನ್ಯಾಯಾಲಯವನ್ನು ಸಂಪರ್ಕಿಸಬಹುದು. ಪ್ರತಿಯೊಬ್ಬ ನಾಗರೀಕನಿಗೂ ನಮ್ಮನ್ನು ಸಂಪರ್ಕಿಸುವ ಹಕ್ಕಿದೆ. ಕಾನೂನಿನ ಪ್ರಕಾರ ಅವರ ಅಹವಾಲುಗಳನ್ನು ಆಲಿಸಿದ್ದೇವೆ. ಪರಿಹಾರ ಪಡೆಯಲು ಅರ್ಹರಾಗಿರುವವರಿಗೆ ಅವರ ಹಕ್ಕುಗಳನ್ನ ತೊರೆಯದಂತೆ ನೋಡಿಕೊಳ್ಳುತ್ತೇವೆ ಎಂದು ಸಿಜೆಐ ಸೂರ್ಯಕಾಂತ್ ಹೇಳಿದರು.

ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ


ಎಸ್‌ಐಆರ್ ಅಕ್ರಮದ ವಿರುದ್ಧ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ದೆಹಲಿಯಲ್ಲಿಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು.


ಕಾಂಗ್ರೆಸ್ ಪಕ್ಷ ಈ ಪ್ರತಿಭಟನಾ ಮೆರವಣಿಗೆಗೆ ಚಲೋ ದೆಹಲಿ, ಪ್ರಜಾಪ್ರಭುತ್ವಕ್ಕಾಗಿ ಪಾದಯಾತ್ರೆ ಎಂದು ಹೆಸರಿಟ್ಟಿದೆ.


ಇಂದು ಮಧ್ಯಾಹ್ನ ೧.೩೦ಕ್ಕೆ ದೆಹಲಿಯ ಕನ್ನಾಟ್ ಪ್ಲೇಸ್ – ಬಾರ ಖಂಬ ರಸ್ತೆ ಜಂಕ್ಷನ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಜಮಾವಣೆಗೊಂಡು ಸುಪ್ರೀಂ ಕೋರ್ಟ್ ವರೆಗೂ ಪಾದಯಾತ್ರೆ ನಡೆಸಿದರು.


ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಈ ದೆಹಲಿ ಚಲೋ ಪ್ರಜಾಪ್ರಭುತ್ವಕ್ಕಾಗಿ ಪಾದಯಾತ್ರೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಹಲವು ಸಂಸದರು, ವಿವಿಧ ರಾಜ್ಯಗಳ ಕಾಂಗ್ರೆಸ್ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಶಾಸಕರುಗಳು ಭಾಗಿಯಾಗಿದ್ದರು.


ಡಿಕೆಶಿ-ಸಿದ್ದು ಭಾಗಿ


ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ವಿರುದ್ಧ ದೆಹಲಿಯಲ್ಲಿ ನಡೆದ ಕಾಂಗ್ರೆಸ್‌ನ ಬೃಹತ್ ಪಾದಯಾತ್ರೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೇರಿದಂತೆ ರಾಜ್ಯದ ಹಲವು ಸಚಿವರು, ಶಾಸಕರುಗಳು, ಮುಖಂಡರುಗಳು ಭಾಗಿಯಾಗಿದ್ದರು.