Home ಮುಖಪುಟ ಸುದ್ದಿ ಮತದಾರರ ಹೆಸರು ಅಳಿಸುವಿಕೆ ಆರೋಪ; ಸುಪ್ರೀಂ ಕೋರ್ಟ್‌ಗೆ ಮೆಟ್ಟಿಲೇರಿದ ರಾಹುಲ್ ಸೇರಿ ೧೧ ನಾಯಕರ ಅರ್ಜಿ

ಮತದಾರರ ಹೆಸರು ಅಳಿಸುವಿಕೆ ಆರೋಪ; ಸುಪ್ರೀಂ ಕೋರ್ಟ್‌ಗೆ ಮೆಟ್ಟಿಲೇರಿದ ರಾಹುಲ್ ಸೇರಿ ೧೧ ನಾಯಕರ ಅರ್ಜಿ

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಹಾಗೂ ಚುನಾವಣಾ ಪ್ರಕ್ರಿಯೆಯಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇಂಡಿಯಾ ಮೈತ್ರಿಕೂಟದ ೧೧ ನಾಯಕರು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಚುನಾವಣಾ ಆಯೋಗದ ವಿರುದ್ಧ ಸಲ್ಲಿಸಿರುವ ಈ ಅರ್ಜಿಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದ ಅಕ್ರಮಗಳ ಕುರಿತು ಪರಿಶೀಲನೆ ನಡೆಸುವಂತೆ ಕೋರಲಾಗಿದೆ. ಅಲ್ಲದೆ, ರಾಜಧಾನಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ವಿಧಿಸಿರುವ ನಿರ್ಬಂಧಗಳ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಅರ್ಜಿಯಲ್ಲಿ ನಿರ್ದಿಷ್ಟವಾಗಿ ಯಾವೆಲ್ಲ ನಿರ್ದೇಶನಗಳನ್ನು ಕೋರಲಾಗಿದೆ ಎಂಬ ಸಂಪೂರ್ಣ ವಿವರಗಳು ಇನ್ನೂ ಬಹಿರಂಗವಾಗಿಲ್ಲ.

ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧದ ಆರೋಪಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ನಡೆಸುತ್ತಿರುವ ಹೋರಾಟದ ಭಾಗವಾಗಿ ಈ ಕಾನೂನು ಕ್ರಮ ಕೈಗೊಳ್ಳಲಾಗಿದೆ.ರಾಹುಲ್ ಗಾಂಧಿ ಅವರೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿವಿಧ ಪ್ರತಿಪಕ್ಷಗಳ ಪ್ರಮುಖ ನಾಯಕರು ಅರ್ಜಿದಾರರಾಗಿದ್ದಾರೆ.

ಅರ್ಜಿಯಲ್ಲಿ ಹೆಸರಿಸಲಾದ ೧೧ ನಾಯಕರು
ರಾಹುಲ್ ಗಾಂಧಿ ಕಾಂಗ್ರೆಸ್
ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷ
ಸೌಗತ ರಾಯ್ ತೃಣಮೂಲ ಕಾಂಗ್ರೆಸ್
ಅಖಿಲೇಶ್ ಯಾದವ್ ಸಮಾಜವಾದಿ ಪಕ್ಷ
ತೇಜಸ್ವಿ ಪ್ರಸಾದ್ ಯಾದವ್ ರಾಷ್ಟ್ರೀಯ ಜನತಾ ದಳ
ಸಂಜಯ್ ರಾವತ್ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ)
ಎಂ.ಎ. ಬೇಬಿ ಸಿಪಿಎಂ
ಡಿ. ರಾಜಾ ಸಿಪಿಐ
ಮಹುವಾ ಮಾಝಿ ಜಾರ್ಖಂಡ್ ಮುಕ್ತಿ ಮೋರ್ಚಾ
ಸುಪ್ರಿಯಾ ಸುಳೆ ಎನ್‌ಸಿಪಿ (ಶರದ್‌ಚಂದ್ರ ಪವಾರ್ ಬಣ)
ಇ.ಟಿ. ಮೊಹಮ್ಮದ್ ಬಶೀರ್ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್

ಭಾರತದ ಚುನಾವಣಾ ಆಯೋಗವನ್ನು ಅರ್ಜಿಯಲ್ಲಿ ಪ್ರತಿವಾದಿಗಳಲ್ಲಿ ಒಬ್ಬರನ್ನಾಗಿ ಹೆಸರಿಸಲಾಗಿದೆ. ಒಟ್ಟು ನಾಲ್ಕು ಪ್ರತಿವಾದಿಗಳಿದ್ದು, ಉಳಿದವರ ವಿವರಗಳು ಮತ್ತು ಅರ್ಜಿಯಲ್ಲಿನ ಸಂಪೂರ್ಣ ಬೇಡಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ.


ಅರ್ಜಿ ಸಲ್ಲಿಸುವುದಕ್ಕೂ ಮೊದಲು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟದ ಸಂಸದರು, ವಿವಿಧ ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರು ‘ಪ್ರಜಾಪ್ರಭುತ್ವಕ್ಕಾಗಿ ಮೆರವಣಿಗೆ’ ನಡೆಸಿದರು.

ಮೆರವಣಿಗೆಯನ್ನು ತಡೆದ ಬಳಿಕ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಸೇರಿದಂತೆ ಕೆಲ ನಾಯಕರು ವಾಹನದ ಮೇಲೆ ಹತ್ತಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಮತದಾರರ ಹಕ್ಕುಗಳ ರಕ್ಷಣೆ ಮತ್ತು ಚುನಾವಣಾ ವ್ಯವಸ್ಥೆಯಲ್ಲಿನ ಪಾರದರ್ಶಕತೆಯನ್ನು ಖಚಿತಪಡಿಸಬೇಕೆಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿತ್ತು.

ಎಸ್‌ಐಆರ್ ಮತ್ತು ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಇಂಡಿಯಾ ಮೈತ್ರಿಕೂಟದ ನಾಯಕರು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರನ್ನು ಭೇಟಿ ಮಾಡಲು ಸಮಯ ಕೋರಿದ್ದರು. ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವ ವಿಷಯಗಳನ್ನು ಈ ರೀತಿಯ ಭೇಟಿಯಲ್ಲಿ ಚರ್ಚಿಸುವುದು ಅಧಿಕಾರ ವಿಭಜನೆಯ ತತ್ವಕ್ಕೆ ವಿರುದ್ಧವಾಗಬಹುದು ಎಂಬ ಕಾರಣ ನೀಡಿ ಭೇಟಿಗೆ ಅವಕಾಶ ನಿರಾಕರಿಸಲಾಯಿತು.

ಇದಾದ ಬಳಿಕ ನ್ಯಾಯಾಲಯದ ಮೂಲಕವೇ ತಮ್ಮ ಅಹವಾಲುಗಳನ್ನು ಮಂಡಿಸಲು ಪ್ರತಿಪಕ್ಷ ನಾಯಕರು ನಿರ್ಧರಿಸಿ ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಅರ್ಜಿಯಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಹಲವು ಅಂಶಗಳು ಮತ್ತು ಶಾಂತಿಯುತ ಪ್ರತಿಭಟನೆಗಳ ಮೇಲಿನ ನಿರ್ಬಂಧಗಳನ್ನು ಪ್ರಶ್ನಿಸಲಾಗಿದೆ ಎಂದು ತಿಳಿಸಿದರು. ವಿವಿಧ ಪ್ರತಿಪಕ್ಷಗಳ ನಾಯಕರು ಅರ್ಜಿಗೆ ಸಹಿ ಹಾಕುವ ಮೂಲಕ ಕಾನೂನು ಹೋರಾಟದಲ್ಲಿ ಭಾಗಿಯಾಗಿದ್ದಾರೆ


ಸಿಜೆಐ ಅವರನ್ನು ಭೇಟಿ ಮಾಡುವ ಮೂಲಕ ನ್ಯಾಯಾಂಗದ ಮೇಲೆ ಒತ್ತಡ ಹೇರುವ ಉದ್ದೇಶ ಪ್ರತಿಪಕ್ಷಗಳಿಗಿತ್ತು ಎಂಬ ಆರೋಪವನ್ನು ಸಿಂಘ್ವಿ ತಳ್ಳಿಹಾಕಿದರು. ನ್ಯಾಯಾಲಯದ ಮುಖ್ಯಸ್ಥರನ್ನು ಭೇಟಿಯಾಗಲು ಮೊದಲು ಪತ್ರ ಬರೆದಿದ್ದೆವು. ಬಳಿಕ ಅರ್ಜಿ ಸಲ್ಲಿಸುವಂತೆ ಸಲಹೆ ಬಂದ ಹಿನ್ನೆಲೆಯಲ್ಲಿ ಕಾನೂನು ಮಾರ್ಗ ಅನುಸರಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದ ಆರೋಪಗಳು, ಚುನಾವಣಾ ಆಯೋಗದ ವಿರುದ್ಧದ ಕಾನೂನು ಹೋರಾಟ ಮತ್ತು ಶಾಂತಿಯುತ ಪ್ರತಿಭಟನೆಗಳ ಹಕ್ಕು?ಈ ಮೂರು ವಿಷಯಗಳನ್ನು ಮುಂದಿಟ್ಟುಕೊಂಡು ಇಂಡಿಯಾ ಮೈತ್ರಿಕೂಟ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದೆ. ಅರ್ಜಿಯ ವಿಚಾರಣೆ ಹಾಗೂ ನ್ಯಾಯಾಲಯದ ಮುಂದಿನ ನಿರ್ದೇಶನಗಳ ಮೇಲೆ ರಾಜಕೀಯ ವಲಯದ ಗಮನ ನೆಟ್ಟಿದೆ.