
ಕಲಬುರಗಿ : “ಗಾನ ಕೋಗಿಲೆ”, ಎಂದೇ ಪ್ರಸಿದ್ಧರಾದ ಲತಾ ಮಂಗೇಶ್ಕರ್ ಅವರು ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡುವ ಮೂಲಕ ಭಾರತೀಯ ಸಂಗೀತ ಲೋಕದ ದ್ರವತಾರೆಯಾಗಿದ್ದಾರೆ ಎಂದು ಉಪನ್ಯಾಸಕ, ಸಂಗೀತ ಪ್ರೇಮಿ ಎಚ್.ಬಿ.ಪಾಟೀಲ್ ಹೇಳಿದರು. ನಗರದ ಖಾದ್ರಿ ಚೌಕ್ ನ ‘ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ” ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಜನ್ಮ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮಂಗೇಶ್ಕರ್ ಅವರು ಸುದೀರ್ಘ ವೃತ್ತಿಜೀವನ 7 ದಶಕಗಳಿಗೂ ಹೆಚ್ಚು ಕಾಲದ ಸೇವೆ ಅನನ್ಯವಾಗಿದೆ. 1942 ರಿಂದ 2021 ರವರೆಗೆ ಸುಮಾರು 73 ವರ್ಷಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿ ಸಕ್ರಿಯರಾಗಿದ್ದರು. ಹಿಂದಿ, ಮರಾಠಿ, ಬಂಗಾಳಿ ಸೇರಿದಂತೆ ಭಾರತದ 36 ಕ್ಕೂ ಹೆಚ್ಚು ವಿವಿಧ ಭಾಷೆಗಳಲ್ಲಿ ಸುಮಾರು 28 ರಿಂದ 30 ಸಾವಿರಕ್ಕೂ ಹೆಚ್ಚು ಏಕವ್ಯಕ್ತಿ, ಯುಗಳ ಮತ್ತು ಕೋರಸ್ ಗೀತೆಗಳನ್ನು ಹಾಡಿದ್ದಾರೆ. 1974 ರಲ್ಲಿಯೇ ವಿಶ್ವದಲ್ಲೇ ಅತಿ ಹೆಚ್ಚು ಹಾಡುಗಳನ್ನು ರೆಕಾರ್ಡ್ ಮಾಡಿದ ಕಲಾವಿದೆ ಎಂದು ಗಿನ್ನೆಸ್ ಬುಕ್ ಆಫ್ ರೆಕಾಡ್ಸ್ರ್ನಲ್ಲಿ ಇವರ ಹೆಸರು ದಾಖಲಾಗಿತ್ತು ಎಂದರು.
ಕನ್ನಡದಲ್ಲೂ ಲತಾ ಮಂಗೇಶ್ಕರ್ ಅವರು ತಮ್ಮ ಮಧುರ ಧ್ವನಿಯ ಛಾಪು ಮೂಡಿಸಿದ್ದಾರೆ. 1967 ರ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದ “ಬೆಳ್ಳನೆ ಬೆಳಗಾಯಿತು…” ಮತ್ತು “ಎಲ್ಲಾರೆ ಇರತೀರಾ…” ಎಂಬ ಎರಡು ಜನಪ್ರಿಯ ಹಾಡುಗಳನ್ನು ಹಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.ನಂತರದ ದಿನಗಳಲ್ಲಿ ‘ಗಾನ ಚತುರೆ’ ಎಂಬ ಹಾಡಿಗೆ ಅವರು ಯಾವುದೇ ಸಂಭಾವನೆ ಪಡೆಯದೇ ಹಾಡಿ ತಮ್ಮ ಉದಾರತೆ ಮೆರೆದಿದ್ದರು.
ಲೋಕೋಪಕಾರ ಮತ್ತು ಸಮಾಜ ಸೇವೆ: ಸಂಗೀತದ ಜೊತೆಗೆ ಅವರು ಪುಣೆಯಲ್ಲಿ ‘ಲತಾ ಮಂಗೇಶ್ಕರ್ ವೈದ್ಯಕೀಯ ಪ್ರತಿಷ್ಠಾನ’ವನ್ನು ಸ್ಥಾಪಿಸಿ, ಹಿಂದುಳಿದವರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ನೆರವಾದರು. ಕೋವಿಡ್-19 ಸಾಂಕ್ರಾಮಿಕ ಹಾಗೂ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರೆ. ಅವರಿಗೆ ಅನೇಕ ಪ್ರಶಸ್ತಿ-ಗೌರವಗಳು ದೊರೆತಿವೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಅಸ್ಲಾಂ ಶೇಖ್, ಶಿವಯೋಗೆಪ್ಪಾ ಎಸ್. ಬಿರಾದಾರ ಹಾಗೂ ಸಿಬ್ಬಂದಿ, ವಿದ್ಯುತ್ ಭಾಗವಹಿಸಿದ್ದರು.





















