
ಕೆ.ಆರ್.ಪುರ, ಜು.೫- ಮಹದೇವಪುರ ಕ್ಷೇತ್ರದ ವರ್ತೂರಿನಲ್ಲಿರುವ ಚೋಳರ ಕಾಲದ ಪುರಾತನ ಪ್ರಸಿದ್ಧ ಶ್ರೀ ಭೂನೀಳಾ ಸಮೇತ ಶ್ರೀ ಚನ್ನರಾಯಸ್ವಾಮಿಯ ದೇವಾಲಯದ ನೂತನ ರಾಜಗೋಪುರ ಕುಂಭಾಭಿಷೇಕವು ಹೋಮ ಹವನ ದೊಂದಿಗೆ ಶಾಸ್ತ್ರೋಕ್ತವಾಗಿ ನೇರವೇರಿದೆ.
ಕಳೆದ ಮೂರು ದಿನಗಳಿಂದ ದೇವಾಲಯದ ಆವರಣದಲ್ಲಿ ವೈದಿಕ ಸಂಪ್ರದಾಯದಂತೆ ಯಾಗ, ಹೋಮಗಳ ಮಾಡುವ ಮೂಲಕ ವಿವಿಧ ಪೂಜಾ ಕೈಂಕರ್ಯಗಳು ನಡೆದವು.
ವಿವಿಧ ಪವಿತ್ರ ನದಿಗಳಿಂದ ತಂದಿರುವ ನೀರಿನಲ್ಲಿ ಚಿನ್ನ, ಬೆಳ್ಳಿ ಅಥವಾ ತಾಮ್ರದ ಕುಂಭಗಳಲ್ಲಿ (ಕಲಶ) ಇರಿಸಿ, ಮಂತ್ರಗಳನ್ನು ಪಠಿಸಿ ದೈವಿಕ ಶಕ್ತಿಯನ್ನು ಆವಾಹನೆ ಮಾಡಲಾಯಿತು
ಗ್ರಾಮದ ನೂರಾರು ಮಹಿಳೆಯರು ಊರಿನ ಪ್ರಮುಖ ಬೀದಿಗಳಲ್ಲಿ ಕಳಸ ಹೊತ್ತು ದೇವರಿಗೆ ಶ್ರಧ್ದಾಭಕ್ತಿಯಿಂದ ವಿಶೇಷ ಪೂಜೆ ನೆರವೇರಿಸಿದರು.
ಪವಿತ್ರ ಕಲಶಗಳಿಂದ ತುಂಬಿದ ನೀರು ದೇವಸ್ಥಾನದ ಗೋಪುರದ ಮೇಲೆ ಮತ್ತು ಮೂಲ ವಿಗ್ರಹಕ್ಕೆ ಅಭಿಷೇಕ ಮಾಡಲಾಯಿತು.
ರಾಜಗೋಪುರ ನಿರ್ಮಾಣದಿಂದ ದೈವಿಕ ಶಕ್ತಿ ಹೆಚ್ಚಾಗಲಿದ್ದು ಗ್ರಾಮದಲ್ಲಿ ಶಾಂತಿ ನೆಲೆಸಲಿದೆ ಎನ್ನುವ ಪ್ರತೀತಿ ಇದೆ, ಅಲ್ಲದೆ ದೇವಸ್ಥಾನ ಪ್ರಧಾನ ಅರ್ಚಕರಾಗಿದ್ದ ದಿವಂಗತ ಅನಂತ ರವರ ಆಶಯದಂತೆ ವರ್ತೂರು ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ದಾನಿಗಳ ನೆರವಿನಿಂದ ರಾಜಗೋಪುರ ನಿರ್ಮಾಣ ಮಾಡಲಾಗಿದೆ ಎಂದು ಸಮಿತಿಯ ಸದಸ್ಯರು ತಿಳಿಸಿದ್ದಾರೆ.
ದೇವಸ್ಥಾನ ಸಮಿತಿ ವತಿಯಿಂದ ಕುಂಭಾಭಿಷೇಕ ಆಗಮಿಸಿದ ಸಾವಿರಾರು ಭಕ್ತರಿಗೆಅನ್ನದಾನ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಶಾಸಕಿ ಮಂಜುಳಾ ಲಿಂಬಾವಳಿ ಮಾಜಿ ಶಾಸಕರಾದ ಹೆಚ್ ನಾಗೇಶ್, ಅರವಿಂದ ಲಿಂಬಾವಳಿ,ಮುಖಂಡರಾದ ರಾಜರೆಡ್ಡಿ, ಭಂಗಿ ಮಂಜುನಾಥ್, ಕೆ.ಎನ್ ಚಿಕಣ್ಣ, ಕೆ ಮಂಜುನಾಥ್, ಪಿ ಸುಬ್ಬಣ್ಣ, ಸ್ವಾತಿ ಸುರೇಶ್, ಎನ್ ಜಗದೀಶ್, ವೆಂಕಟರೆಡ್ಡಿ, ಪಿ ಕೃಷ್ಣಪ್ಪ, ಶ್ರೀಧರ್, ಎಲ್ ಶ್ರೀನಿವಾಸ್ ರೆಡ್ಡಿ, ಪ್ರಧಾನ ಅರ್ಚಕರಾದ ನಾಗರಾಜ್ ಮತ್ತಿತರು ಇದ್ದರು.































