
ಆಳಂದ:ಜು.2: ರೈತರ ಜಮೀನು ಖರೀದಿಸುವಲ್ಲಿ ಸರ್ಕಾರ ಬಿಡದಿಗೊಂದು ನ್ಯಾಯ ಆಳಂದಗೊಂದು ನ್ಯಾಯ ಪದ್ಧತಿ ಅನುಸರಿಸುತ್ತಿರುವುದು ಸರಿಯೇ ಎಂದು ಕಲಬುರಗಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಸಿದ್ದು ಹಿರೋಳಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಬುಧುವಾರ ಆಳಂದ ತಹಸೀಲದಾರರ ಮೂಲಕ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ಹಲವು ವಿಷಯ ಪ್ರಸ್ತಾಪಿಸುರುವ ಅವರು, ಆಳಂದ ತಾಲೂಕಿನಲ್ಲಿ ವಿಂಡ್ ಪವರ್ ಕಂಪನಿಗಳಿಂದ ರೈತರಿಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಗಡಿಭಾಗದ ಬಡ ರೈತರಿಗೆ ನ್ಯಾಯ ದೊರಕಿಸಿ ಕೊಡಲು ಒತ್ತಾಯಿಸಿದ್ದಾರೆ.
ಆಳಂದ ತಾಲೂಕಿನಲ್ಲಿ ಸುಮಾರು 2-3 ವರ್ಷಗಳಿಂದ ವಿಂಡ್ ಪವರ್ ಕಂಪನಿಯವರು ರೈತರ ಜಮೀನಿಗಳಲ್ಲಿ ಪವನ ವಿದ್ಯುತ್ ಉತ್ಪಾದನಾ ಘಟಕಗಳನ್ನು ಕೂಡಿಸುತ್ತಿದ್ದಾರೆ. ಒಂದು ಘಟಕಕ್ಕೆ 10.00 ಎಕರೆ ಜಮೀನು ಖರೀದಿಸಬೇಕೆಂಬ ನಿಯಮವಿದ್ದರೂ ಕೂಡ ಕಂಪನಿಯವರು ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ದಲ್ಲಾಳಿಗಳ ಮುಖಾಂತರ ಮನಸೋ ಇಚ್ಚೇ ರೈತರ ಜಮೀನುಗಳನ್ನು ಕಬಳಿಸುತ್ತಿದ್ದಾರೆ. ರೈತರ ಗೋಳು ಕೇಳುವರ್ಯಾರು? ಎಂದು ಪ್ರಶ್ನಿಸಿದ್ದಾರೆ.
ಇತ್ತೀಚಿಗೆ ಬಾಗಲಕೋಟೆ ಉಪಚುನಾವಣೆಗೆ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯರವರು ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆಯಾಗುವ ನೀರಾವರಿ ಜಮೀನಿಗೆ 40.00 ಲಕ್ಷ ರೂ. ಪ್ರತಿ ಎಕರೆಗೆ ಒಣ ಬೇಸಾಯ ಜಮೀನಿಗೆ 30 ಲಕ್ಷ. ರೂ ಪ್ರತಿ ಎಕರೆಗೆ ನೀಡುವುದಾಗಿ ಸರ್ಕಾರದ ನಿರ್ಧಾರವನ್ನು ತಿಳಿಸಿರುತ್ತಾರೆ. ಪ್ರಸ್ತುತ ನಡೆಯುತ್ತಿರುವ ಬಿಡದಿ ಟೌನಶಿಪ್‍ನಲ್ಲಿ ಜಮೀನು ಕಳೆದುಕೊಳ್ಳುತ್ತಿರುವ ರೈತರಿಗೆ ದಯಾಳುಗಳಾದ ತಾವುಗಳು ಒಂದು ಎಕರೆಗೆ 2.07 ಕೋಟಿ ರೂಪಾಯಿಗಳ ಚೆಕ್ಕುಗಳನ್ನು ರೈತರಿಗೆ ನೀಡುತ್ತಿರುವುದು ನೋಡಿ ನಮ್ಮ ಬಾಯಿಗೆ ನೀರು ಬರುತ್ತಿದೆ ಎಂದು ಹೇಳಿದ್ದಾರೆ.
ಹಾಗಾದರೇ ಕಲ್ಯಾಣ ಕರ್ನಾಟಕದ ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಆಳಂದ ತಾಲೂಕಿನ ರೈತರುಗಳಾದ ನಾವುಗಳು ಕೇವಲ 2.00 ಲಕ್ಷ, 4.00 ಲಕ್ಷ ಪ್ರತಿ ಎಕರೆಗೆ ಪಡೆದುಕೊಂಡು ಜಮೀನು ನೀಡಲು ನಾವುಗಳು ಪಾಪಿಗಳೇ, ದಿಕ್ಕಿಲ್ಲದವರೇ ಎಂಬ ವ್ಯಥೆ ನಮ್ಮ ರೈತರನ್ನು ಕಾಡುತ್ತಿದೆ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಭಾಗದ ರೈತರಿಗೆ ಪ್ರತಿ ಎಕರೆಗೆ 2 ಕೋಟಿ ರೂ. ನೀಡುವಂತೆ ವಿನಂತಿಸಿಕೊಂಡಿದ್ದಾರೆ.
ನಿಯೋಗದಲ್ಲಿ ಮುಖಂಡರಾದ ಅಜೀತ ಕುಲಕರ್ಣಿ, ಈರಣ್ಣಾ ಹತ್ತರಕಿ, ಮಹೇಶ ಕೋರಳ್ಳಿ, ಮನೋಜ ಸಿಂಗೆ, ಮಹೇಶ ಪವಾರ, ಶೀರಿಷ್ ವರ್ಧಮಾನೆ, ಮೌಲಾಲಿ ಆಳಂದ, ಬಸವರಾಜ ವಾಡೇದ ಇದ್ದರು.






























