
ವಾಷಿಂಗ್ಟನ್ನ.೧೫ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಅವರ ಆಡಳಿತದ ಪ್ರಮುಖ ನಾಯಕರನ್ನು ಗುರಿಯಾಗಿಸಿಕೊಂಡು ಇರಾನ್ ಸ್ಫೋಟಕಗಳನ್ನು ಹೊತ್ತ ಡ್ರೋನ್ಗಳ ಮೂಲಕ ದಾಳಿ ನಡೆಸಲು ಸಂಚು ರೂಪಿಸಿದೆ ಎಂಬ ಆತಂಕ ವ್ಯಕ್ತವಾಗಿದೆ. ಈ ಕುರಿತು ಇಸ್ರೇಲ್ನ ಗುಪ್ತಚರ ಸಂಸ್ಥೆ ಮೊಸಾದ್, ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ ಎಂದು ಇಸ್ರೇಲ್ನ ’ಇಸ್ರೇಲ್ ಹಯೋಮ್’ ಪತ್ರಿಕೆ ವರದಿ ಮಾಡಿದೆ.
ಇಸ್ರೇಲ್ ಮತ್ತು ಅಮೆರಿಕದ ಹಿರಿಯ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಪ್ರಕಟಿಸಿರುವ ಪತ್ರಿಕೆ, ಇರಾನ್ನಿಂದ ಸಂಭವಿಸಬಹುದಾದ ದಾಳಿಯ ಬಗ್ಗೆ ಇಸ್ರೇಲ್ ಗುಪ್ತಚರ ಸಂಸ್ಥೆ ಮಾಹಿತಿ ಸಂಗ್ರಹಿಸಿದ್ದು, ಅಮೆರಿಕದ ಗುಪ್ತಚರ ಸಂಸ್ಥೆಗಳ ಮನವಿಯ ಮೇರೆಗೆ ಅದನ್ನು ಪರಿಶೀಲಿಸಿ ದೃಢಪಡಿಸಿದೆ ಎಂದು ತಿಳಿಸಿದೆ.
ಮೊಸಾದ್ ಮುಖ್ಯಸ್ಥ ರೋಮನ್ ಗೋಫ್ಮನ್ ಪ್ರಸ್ತುತ ಅಮೆರಿಕ ಪ್ರವಾಸದಲ್ಲಿದ್ದು, ಸಿಐಎ ನಿರ್ದೇಶಕ ಜಾನ್ ರಾಟ್ಕ್ಲಿಫ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಟ್ರಂಪ್ ಮತ್ತು ಅಮೆರಿಕದ ಪ್ರಮುಖ ಅಧಿಕಾರಿಗಳ ವಿರುದ್ಧ ಇತ್ತೀಚಿನ ದಿನಗಳಲ್ಲಿ ನಿರ್ದಿಷ್ಟ ಬೆದರಿಕೆಗಳು ವ್ಯಕ್ತವಾಗಿದ್ದು, ಸ್ಫೋಟಕಗಳನ್ನು ಹೊತ್ತ ಡ್ರೋನ್ಗಳ ಮೂಲಕ ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾಗಿದೆ ಎಂದು ವರದಿ ಹೇಳಿದೆ.
ಇರಾನ್ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರು ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ ಹತರಾದ ಬಳಿಕ ಉಭಯ ದೇಶಗಳ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಈ ಬೆಳವಣಿಗೆಗಳ ನಡುವೆಯೇ ಅಮೆರಿಕದ ನಾಯಕರಿಗೆ ಇರಾನ್ನಿಂದ ಬೆದರಿಕೆ ಎದುರಾಗಿದೆ ಎಂಬ ವರದಿ ಆತಂಕ ಮೂಡಿಸಿದೆ.
ಬೆದರಿಕೆಯ ಹಿನ್ನೆಲೆಯಲ್ಲಿ ಟ್ರಂಪ್ ಆಡಳಿತದ ಹಲವು ಪ್ರಮುಖ ಸಚಿವರ ಭದ್ರತಾ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ. ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ಅವರನ್ನು ವಾಷಿಂಗ್ಟನ್ನ ಜಾರ್ಜ್ಟೌನ್ನಲ್ಲಿರುವ ನಿವಾಸದಿಂದ ಸುರಕ್ಷಿತ ಸೇನಾ ನೆಲೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿ ತಿಳಿಸಿದೆ. ಇರಾನ್ ವಿರುದ್ಧದ ಆರ್ಥಿಕ ನಿರ್ಬಂಧಗಳ ಜಾರಿಯಲ್ಲಿ ಬೆಸೆಂಟ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.ಅದೇ ರೀತಿ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಮತ್ತು ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಅವರನ್ನೂ ಸುರಕ್ಷಿತ ಸೇನಾ ನೆಲೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.
ಅಧ್ಯಕ್ಷ ಟ್ರಂಪ್ ಅವರ ಸಾರ್ವಜನಿಕ ಕಾರ್ಯಕ್ರಮಗಳ ಸಂಖ್ಯೆಯನ್ನೂ ಕಡಿಮೆ ಮಾಡಲಾಗಿದೆ. ಅವರು ಹೊರಾಂಗಣ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಹೆಚ್ಚುವರಿ ಭದ್ರತೆ ಹಾಗೂ ಡ್ರೋನ್ ದಾಳಿಗಳನ್ನು ತಡೆಯುವ ವಿಶೇಷ ತಂತ್ರಜ್ಞಾನ ವ್ಯವಸ್ಥೆಗಳನ್ನು ನಿಯೋಜಿಸಲಾಗುತ್ತಿದೆ ಎನ್ನಲಾಗಿದೆ.ಈ ಗುಪ್ತಚರ ಎಚ್ಚರಿಕೆಗಳು ಇರಾನ್ ಜೊತೆಗಿನ ಒಪ್ಪಂದದ ಮಾತುಕತೆಗಳ ಮೇಲೂ ಪರಿಣಾಮ ಬೀರಿವೆ ಎಂದು ವರದಿ ಹೇಳಿದೆ. ಪರಮಾಣು ಕಾರ್ಯಕ್ರಮದ ವಿಚಾರದಲ್ಲಿ ಇರಾನ್ ಕೆಲವು ಸಡಿಲಿಕೆ ತೋರಿದ್ದರೂ, ಅಮೆರಿಕ ತನ್ನ ನೌಕಾ ದಿಗ್ಬಂಧನವನ್ನು ತೆರವುಗೊಳಿಸಬೇಕು, ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕಬೇಕು ಹಾಗೂ ಸ್ಥಗಿತಗೊಂಡಿರುವ ಇರಾನ್ನ ಹಣಕಾಸು ಆಸ್ತಿಗಳನ್ನು ಬಿಡುಗಡೆ ಮಾಡಬೇಕು ಎಂಬ ಷರತ್ತುಗಳನ್ನು ಮುಂದಿಟ್ಟಿದೆ.
ಇದೇ ವೇಳೆ, ಮಾತುಕತೆಗಳಲ್ಲಿ ಒಪ್ಪಂದಕ್ಕೆ ಒಲವು ತೋರಿದ್ದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರನ್ನು ಟ್ರಂಪ್ ಪ್ರಕ್ರಿಯೆಯಿಂದ ದೂರವಿಟ್ಟಿದ್ದಾರೆ ಎನ್ನಲಾಗಿದೆ. ಇರಾನ್ನ ಹಿರಿಯ ಅಧಿಕಾರಿಗಳೊಂದಿಗೆ ನೇರ ಮಾತುಕತೆ ನಡೆಸಲು ವ್ಯಾನ್ಸ್ ಪ್ರಯತ್ನಿಸಿದ್ದರು ಎಂದು ವರದಿ ತಿಳಿಸಿದೆ.
























