
ಕಲಬುರಗಿ,ಜು.28-ರಟಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟಗಾ ಗ್ರಾಮದಲ್ಲಿ ಈಚೆಗೆ ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಟಗಾ ಗ್ರಾಮದಲ್ಲಿ ಬಾಬು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದಶರಥ ಎಂಬುವವರು ರಟಕಲ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ಪ್ರಕರಣದ ಪತ್ತೆಗೆ ಚಿಂಚೋಳಿ ಉಪ ವಿಭಾಗದ ಡಿಸಿಪಿ, ಸುಲೇಪೇಟ್ ಸಿಪಿಐ ಕೃಷ್ಣಕುಮಾರ ಅವರ ಮಾರ್ಗದರ್ಶನದಲ್ಲಿ ರಟಕಲ್ ಪಿಎಸ್‍ಐ ಶೀಲಾದೇವಿ, ಸಿಬ್ಬಂದಿಗಳಾದ ಮುತ್ತುರಾಜ, ಮೋಹನ್ ರೆಡ್ಡಿ, ಆನಂದ, ಸುನೀಲ, ಪಾಂಡುರಂಗ ಮತ್ತು ಲಕ್ಷ್ಮೀ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು.
ಈ ತಂಡ ತನಿಖೆ ನಡೆಸಿ ಚಿಂಚೋಳಿ ತಾಲ್ಲೂಕಿನ ಕೊಟಗಾ ಗ್ರಾಮದ ಸಂಜು ಅಲಿಯಾಸ್ ಸಂಜೀವಕುಮಾರ ತಂದೆ ಮನೋಹರ ಬಾಜಿ (40), ಶಿರೋಮಣಿ ತಂದೆ ಮಸ್ತಾನಪ್ಪ ಹಲಗೆನೋರ (50), ನಾಗರಾಜ ತಂದೆ ಅಣ್ಣಾರಾವ ಹಲಗೆ (24), ರಘು ತಂದೆ ಜೈವಂತ ವಾಲಿಕಾರ (19) ಮತ್ತು ದೀಪಕ್ ತಂದೆ ದಶರಥ ಹಲಗೆ (18) ಎಂಬುವವರನ್ನು ಬಂಧಿಸಿದೆ.
ಈ ಕ್ಲಿಷ್ಟಕರ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಶ್ಲಾಘಿಸಿದ್ದಾರೆ.





























