Home ಜಿಲ್ಲೆ ಬೆಂಗಳೂರು ಶೈಕ್ಷಣಿಕ ಅಭಿವೃದ್ದಿಗೆ ಎಸ್‌ಎಲ್‌ಎನ್ ಧರ್ಮ ಸಂಸ್ಥೆಯಿಂದ ಯೋಜನೆ

ಶೈಕ್ಷಣಿಕ ಅಭಿವೃದ್ದಿಗೆ ಎಸ್‌ಎಲ್‌ಎನ್ ಧರ್ಮ ಸಂಸ್ಥೆಯಿಂದ ಯೋಜನೆ

ಮಾಲೂರು,ಜು.೩೧: ದೊಡ್ಡಣ್ಣ ಶೆಟ್ಟರು ೧೨೦ ವರ್ಷಗಳ ಹಿಂದೆಯೇ ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಶೈಕ್ಷಣಿಕ ವಿದ್ಯಾ ಸಂಸ್ಥೆಯನ್ನು ಪ್ರಾರಂಭಿಸಿದ್ದರು.ಇದರಿಂದ ಲಕ್ಷಾಂತರ ಜನ ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳಲ್ಲಿ ಸೇವೆ ಮಾಡುತ್ತಿದ್ದಾರೆ ಎಂದು ಬಿಎಂಟಿಸಿ ಅಧ್ಯಕ್ಷ ವಿ.ಎಸ್. ಆರಾಧ್ಯ ಹೇಳಿದರು .


ನಗರದ ಕೋಟೆಯಲ್ಲಿರುವ ದೊಡ್ಡಣ್ಣ ಶೆಟ್ಟಿರ ಎಸ್‌ಎಲ್‌ಎನ್ ಧರ್ಮ ಸಂಸ್ಥೆ ಆವರಣದಲ್ಲಿ ೨೦೨೬-೨೭ನೇ ಸಾಲಿನ ಎಸ್‌ಎಲ್‌ಎನ್ ಧರ್ಮ ಸಂಸ್ಥೆಯ ಸಮೂಹ ಶಿಕ್ಷಣ ಸಂಸ್ಥೆಗಳ ನೂತನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.


ವಿದ್ಯಾರ್ಥಿಗಳು ತಮ್ಮ ತಂದೆ ತಾಯಿ ಹಾಗೂ ಗುರುಗಳಿಗೆ ಗೌರವ ನೀಡುವುದರ ಜತೆಗೆ ಅವರ ಮಾರ್ಗದರ್ಶನದಲ್ಲೇ ಶಿಕ್ಷಣ ಪಡೆದರೆ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.ಕಲಾಸಿಪಾಳ್ಯಕ್ಕೆ ಬರುವ ಬಿಎಂಟಿಸಿ ಬಸ್ಸುಗಳಲ್ಲಿ ಶ್ರೀ ದೊಡ್ಡಣ್ಣ ಶೆಟ್ಟರ ಭಾವಚಿತ್ರ ಇರುವ ಡಿಜಿಲೀಕರಣ ನಾಮಫಲಕ ಅಳವಡಿಸಲು ಈಗಾಗಲೇ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.


ಮುಖ್ಯ ಅತಿಥಿಯಾಗಿದ್ದ ರಾಜ್ಯ ಕುಸ್ತಿ ಪೆಡರೇಷನ್ ಅಧ್ಯಕ್ಷ ಹಾಗೂ ಜೈಯಕರ್ನಾಟಕ ಜನಪರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬೆಳ್ಳಿಪ್ಪಾಡಿ ಗುಣರಂಜನ್‌ಶೆಟ್ಟಿ ಮಾತನಾಡಿ,ಶ್ರೀ ದೊಡ್ಡಣ್ಣ ಶೆಟ್ಟರು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.ಮಹಾದಾನಿಗಳಾದ ಅವರ ವಿದ್ಯಾ ಸಂಸ್ಥೆಯಲ್ಲಿ ಅಭ್ಯಾಸ ಮಾಡುತ್ತಿರುವವರು ಅದೃಷ್ಠವಂತರು ಎಂದು ತಿಳಿಸಿದರು.


ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಬೇಕು ಎಂದು ತಿಳಿಸಿದರು. ಈ ವಿದ್ಯಾ ಸಂಸ್ಥೆಯಲ್ಲಿ ನುರಿತ ಉಪನ್ಯಾಸಕ ವರ್ಗದಿಂದ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಸಂತೋಷದ ವಿಷಯವಾಗಿದೆ.ಈ ವಿದ್ಯಾ ಸಂಸ್ಥೆಗೆ ಕುಸ್ತಿ ಮ್ಯಾಟ್ ಕೊಡುಗೆಯಾಗಿ ನೀಡುವುದಲ್ಲದೆ ತರಬೇತಿ ಧಾರರನ್ನು ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.


ಎಸ್‌ಎಲ್‌ಎನ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಸ್. ಸುರೇಶ್ ಮಾತನಾಡಿ, ಎಸ್‌ಎಲ್‌ಎನ್ ಧರ್ಮ ಸಂಸ್ಥೆ ಶೈಕ್ಷಣಿಕ ಅಭಿವೃದ್ದಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಬೇಸಿಕ್ ಕಂಪ್ಯೂಟರ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಸಮೂಹ ಶಿಕ್ಷಣ ಸಂಸ್ಥೆಗಳ ಕುರಿತಾದ ವಿಡಿಯೋ ಪ್ರದರ್ಶನ ಮಾಡಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಿತು.ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು.


ಬೆಂಗಳೂರು ಮಾಜಿ ಮೇಯರ್ ರಾಮಚಂದ್ರಪ್ಪ, ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಶ್ರೀನಿವಾಸ್, ಬಿಎಂಟಿಸಿ ಎಜಿಎಂ ಅಂತೋಜಿರಾಜ್, ಎಸ್‌ಎಲ್‌ಎನ್ ಧರ್ಮ ಸಂಸ್ಥೆಯ ಸದಸ್ಯ ಹಾಗೂ ಶಿಕ್ಷಣ ಉಪಸಮಿತಿಯ ಅಧ್ಯಕ್ಷ ಎಂ.ಜಿ ವಿನೋದ್, ಹಾಸ್ಟಲ್ ಉಪಸಮಿತಿ ಅಧ್ಯಕ್ಷ ವಿ.ಎನ್. ಮಂಜುನಾಥ್, ಸಾಹಿತ್ಯ ಶಿಕ್ಷಣ ಉಪಸಮಿತಿ ಜಿ.ಎ ಉಮಾದೇವಿ, ಧರ್ಮಸಂಸ್ಥೆಯ ಕಾರ್ಯದರ್ಶಿ ನಾಗರಾಜ್, ಶಿಕ್ಷಣ ಉಪಸಮಿತಿಯ ಸದಸ್ಯರಾದ ರಾಮಾಂಜನೇಯಪ್ಪ, ಕೆ. ಪ್ರಕಾಶ್, ಶುಭಾ ರಾಜಶೇಖರ್, ಪ್ರಿನ್ಸಿಪಾಲ್‌ಗಳಾದ ಡಾ. ಪವನ್ ಕುಮಾರ್, ಡಾ. ಮಹಾಬಲೇಶ್ವರಗೌಡ, ನಾಗೇಶ್, ಡಾ. ಪ್ರಿಯ ದರ್ಶಿನಿ, ಮುಖ್ಯ ಶಿಕ್ಷಕಿ ರೇಖಾ, ಸೇರಿದಂತೆ ಬೋದಕ ಬೋದಕೇತರ ಸಿಬ್ಬಂದಿ ಹಾಜರಿದ್ದರು.