
ಐಚಿ-ನಗೋಯಾ, ಸೆ.೨೬: ೨೦೨೬ರ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಮಹಿಳಾ ಕಬಡ್ಡಿ ತಂಡವು ಇರಾನ್ ವಿರುದ್ಧ ೩೭-೩೪ ಅಂತರದಲ್ಲಿ ರೋಚಕ ಜಯ ಸಾಧಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.
ಶನಿವಾರ ಟೊಕೈ ಸಿಟಿಜನ್ ಜಿಮ್ನಾಷಿಯಂನಲ್ಲಿ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಅಂತಿಮ ಕ್ಷಣಗಳವರೆಗೂ ಉತ್ತಮ ಹೋರಾಟ ನಡೆಸಿ ಗೆಲುವು ದಾಖಲಿಸಿತು.
ಈ ಗೆಲುವಿನೊಂದಿಗೆ ಭಾರತ ಮಹಿಳಾ ಕಬಡ್ಡಿ ತಂಡವು ಟೂರ್ನಿಯಲ್ಲಿ ಅಜೇಯ ಓಟವನ್ನು ಕಾಯ್ದುಕೊಂಡಿತು. ಮಹಿಳಾ ಕಬಡ್ಡಿ ತಂಡದ ಗೆಲುವಿನೊಂದಿಗೆ ಹಾಲಿ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಗೆದ್ದಿರುವ ಚಿನ್ನದ ಪದಕಗಳ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಇದಕ್ಕೂ ಮೊದಲು ಮಹಿಳಾ ಕ್ರಿಕೆಟ್ ತಂಡ ಹಾಗೂ ೧೦ ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಸುರುಚಿ ಸಿಂಗ್ ಮತ್ತು ಕಮಲ್ಜೀತ್ ಜೋಡಿ ಚಿನ್ನ ಗೆದ್ದಿತ್ತು.
ಭಾರತ ತಂಡವು ‘ಎ’ ಗುಂಪು ಹಂತದಲ್ಲಿ ಬಾಂಗ್ಲಾದೇಶ ಮತ್ತು ಜಪಾನ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಗುಂಪು ಹಂತದಲ್ಲೇ ಇರಾನ್ ತಂಡವನ್ನೂ ಮಣಿಸಿದ್ದ ಭಾರತ, ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿತ್ತು.
ಮಹಿಳಾ ಕಬಡ್ಡಿ ಸ್ಪರ್ಧೆ ೨೦೧೦ರ ಏಷ್ಯನ್ ಗೇಮ್ಸ್ ನಿಂದ ಕ್ರೀಡಾಕೂಟದ ಭಾಗವಾಗಿದೆ. ಈವರೆಗೆ ನಡೆದ ಆವೃತ್ತಿಗಳಲ್ಲಿ ಭಾರತ ಪ್ರತಿ ಬಾರಿಯೂ ಚಿನ್ನದ ಪದಕ ಗೆದ್ದಿತ್ತು. ಆದರೆ ೨೦೧೮ರ ಜಕಾರ್ತಾ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರೆ, ಇರಾನ್ ಚಿನ್ನ ಗೆದ್ದಿತ್ತು.
ಇದಕ್ಕೂ ಮೊದಲು ಸವನ್ ಬರ್ವಾಲ್ ಪುರುಷರ ಮ್ಯಾರಥಾನ್‌ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದರೆ, ಜೋಶ್ನಾ ಚಿನ್ನಪ್ಪ ಮತ್ತು ವೇಲವನ್ ಸೆಂಥಿಲ್‌ಕುಮಾರ್ ಜೋಡಿ ಸ್ಕ್ವಾಷ್‌ನಲ್ಲಿ ಕಂಚಿನ ಪದಕ ಗೆದ್ದಿತ್ತು. ಮಿಶ್ರ ಡಬಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಚಿನ್ನಪ್ಪ ಮತ್ತು ಸೆಂಥಿಲ್ ಸೋಲನುಭವಿಸಿದರು.೪೪ ವರ್ಷಗಳ ನಂತರ ಪುರುಷರ ಮ್ಯಾರಥಾನ್ ನಲ್ಲಿ ಭಾರತದ ಪದಕ ಬರವನ್ನು ನೀಗಿಸುವಲ್ಲಿ ಬರ್ವಾಲ್ ಯಶಸ್ವಿಯಾದರು.
ಏಷ್ಯನ್ ಗೇಮ್ಸ್ ನಲ್ಲಿ ಕಬಡ್ಡಿ ವಿಭಾಗದಲ್ಲಿ ಭಾರತ ಗೆದ್ದಿರುವ ಚಿನ್ನದ ಪದಕಗಳ ಸಂಖ್ಯೆ ಈಗ ೧೨ಕ್ಕೆ ಏರಿಕೆಯಾಗಿದೆ. ಇದರಲ್ಲಿ ಪುರುಷರ ತಂಡವು ೧೯೯೦ರಿಂದ ಎಂಟು ಚಿನ್ನದ ಪದಕಗಳನ್ನು ಗೆದ್ದಿದೆ. ಇಂದು ಪುರುಷರ ಕಬಡ್ಡಿ ತಂಡವೂ ಚಿನ್ನದ ಪದಕಕ್ಕಾಗಿ ನಡೆಯಲಿರುವ ಫೈನಲ್‌ನಲ್ಲಿ ಇರಾನ್ ವಿರುದ್ಧ ಸೆಣಸಲಿದೆ.ಹೀಗಾಗಿ ಭಾರತ ಮತ್ತೊಂದು ಚಿನ್ನದ ನಿರೀಕ್ಷೆಯಲ್ಲಿದೆ.
ಸದ್ಯ ಭಾರತವು ೩ ಚಿನ್ನ, ೧೧ ಬೆಳ್ಳಿ ಮತ್ತು ೧೩ ಕಂಚು ಸೇರಿ ಒಟ್ಟು ೨೭ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ೧೨ನೇ ಸ್ಥಾನದಲ್ಲಿತ್ತು.
ಶೂಟಿಂಗ್ ನಲ್ಲಿ ಮುಂದುವರಿದ ಪದಕ ಬೇಟೆ
ಕರ್ನಾಟಕದ ತಿಲೋತ್ತಮ ಸೇನ್, ವಿದರ್ಸಾ ವಿನೋದ್ ಮತ್ತು ಆಶಿ ಚೌಕ್ಸಿ ಒಳಗೊಂಡ ಭಾರತ ತಂಡ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ೧೧ನೇ ಪದಕ ತಂದುಕೊಟ್ಟರು. ಈ ಮೂವರು ೫೦ ಮೀ. ರೈಫಲ್ ೩ ಪೊಸಿಷನ್ ತಂಡ ಸ್ಪರ್ಧೆಯಲ್ಲಿ ೧೭೬೩ ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನ ಗಳಿಸಿದರು. ಆದರೆ ವೈಯಕ್ತಿಕ ವಿಭಾಗದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಎಡವಿದರು.


























