Home ಜಿಲ್ಲೆ ಕಲಬುರಗಿ ಮಾನವ ಕಲ್ಯಾಣವೇ ಎಲ್ಲದರ ಕೇಂದ್ರ ಬಿಂದು

ಮಾನವ ಕಲ್ಯಾಣವೇ ಎಲ್ಲದರ ಕೇಂದ್ರ ಬಿಂದು

ಕಲಬುರಗಿ,ಜು 29: ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲರ ನುಡಿಯಾದ “ಈ ಭೂಮಿಯ ಮೇಲೆ ನಾವು ಕೈಲಾಸ ಕಾಣಬೇಕಾದರೆ ಎಲ್ಲ ಸಾಧನೆ, ಸಂಶೋಧನೆ, ಸಂವಿಧಾನ, ಜ್ಞಾನ, ವಿಜ್ಞಾನ, ಧರ್ಮ ಮತ್ತು ವ್ಯವಸ್ಥೆಗಳು ಮಾನವ ಕಲ್ಯಾಣದ ಕೇಂದ್ರ ಬಿಂದುಗಳಾಗಬೇಕು” ಎಂಬುದನ್ನು ಸುದೀರ್ಘವಾಗಿ ವಿವರಿಸುತ್ತಾ ನಮ್ಮ ಶಿಕ್ಷಣ ಕೇವಲ ಸ್ವಾರ್ಥಕ್ಕಾಗಿ ಅಲ್ಲ, ಸಮಾಜ ಹಾಗು ರಾಷ್ಟ್ರದ ಅಭಿವೃದ್ಧಿಗಾಗಿ ಮತ್ತು ಮನುಕುಲದ ಏಳ್ಗೆಗಾಗಿ ಎಂಬುದನ್ನು ನ್ಯಾಯಮೂರ್ತಿಗಳು ನಡೆದು ತೋರಿಸಿದ್ದಾರೆ ಎಂದರು.
“ಸ್ವರ್ಗ ಮತ್ತು ನರಕಗಳು ಎಲ್ಲೋ ದೂರದಲ್ಲಿಲ್ಲ, ಅವು ಈ ಭೂಮಿಯ ಮೇಲೆಯೇ ಇವೆ. ಮನುಷ್ಯ ತನ್ನ ಸದಾಚಾರ, ಎಚ್ಚರಿಕೆಯ ಬದುಕು ಹಾಗೂ ಶ್ರದ್ಧೆಯ ಮೂಲಕವೇ ಈ ಧರೆಯನ್ನು ಕೈಲಾಸವನ್ನಾಗಿ ಪರಿವರ್ತಿಸಬಹುದು” ಎಂದು ಕಲ್ಯಾಣ ಆಶ್ರಮದ ಪೂಜ್ಯ ಮಹಾಂತ ಸ್ವಾಮೀಜಿಯವರು ತಿಳಿಸಿದರು.
ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ್ ಪ್ರತಿಷ್ಠಾನ ರಾಯಚೂರು, ಕಲಬುರ್ಗಿಯ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ್ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಹಾಗೂ ಸರ್ವಜ್ಞ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ನ್ಯಾಯಮೂರ್ತಿಗಳ “ಮುಂಜಾವಿಗೊಂದು ನುಡಿ ಕಿರಣ-365ಗಳ ದರ್ಶನ” ಎಂಬ 9 ದಿನಗಳ ವಿಶೇಷ ಉಪನ್ಯಾಸ ಮಾಲಿಕೆಯ ಐದನೇ ದಿನವು ಅರ್ಥಪೂರ್ಣವಾಗಿತ್ತು.
ಸತ್ಯವನ್ನು ನುಡಿಯುವುದು ಹಾಗು ನಮ್ಮ ಒಳ್ಳೆಯ ನಡತೆಯೇ ಸ್ವರ್ಗ, ಕೆಟ್ಟ ನಡತೆಯೇ ನರಕ ಎಂದು ಇಂದಿನ ಯುವ ಪೀಳಿಗೆಗೆ ಮನದಟ್ಟಾಗಬೇಕು. ರಾಷ್ಟ್ರಕವಿ ಕುವೆಂಪು ಅವರು ‘ಪುಣ್ಯದಾಲಯವದು ಪೃಥ್ವಿ, ಸ್ವರ್ಗವದು ಪರದೇಶೀ’ ಎಂದಿದ್ದಾರೆ. ಅಂದರೆ ನಮ್ಮ ಕಣ್ಣಿಗೆ ಕಾಣುವ ಈ ಭೂಮಿಯೇ ನಿಜವಾದ ಪುಣ್ಯದ ಆಲಯ ಮತ್ತು ಸ್ವರ್ಗವಾಗಿದೆ. ಕಣ್ಣಿಗೆ ಕಾಣದೇ ಇರುವುದು ಪರದೇಶೀ ಎಂದು ಹೇಳಿದ್ದಾರೆ.
ಸ್ವಾಮಿ ವಿವೇಕಾನಂದರ “ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ” ಎಂಬ ಜಾಗೃತಿ ಕರೆ ಹಾಗೂ ಉಪನಿಷತ್ತಿನ “ಉತ್ತಿಷ್ಠತ ಜಾಗ್ರತ ಪ್ರಾಪ್ಯ ವರನ್ನಿಬೋಧತ” ಎಂಬ ಮಂತ್ರದ ಮೂಲಕ ನಿರಂತರವಾಗಿ ಎಚ್ಚರದಿಂದಿದ್ದು ಗುರಿಯತ್ತ ಸಾಗಲು ವಿದ್ಯಾರ್ಥಿಗಳಿಗೆ ಪ್ರೇರೇಪಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಪೆÇ್ರ. ಚನ್ನಾರೆಡ್ಡಿ ಪಾಟೀಲ್, ಮುಖ್ಯ ಶೈಕ್ಷಣಿಕ ನಿರ್ದೇಶಕ ಅಭಿಷೇಕ್ ಚನ್ನಾರೆಡ್ಡಿ ಪಾಟೀಲ್, ಗೀತಾ ಚನ್ನಾರೆಡ್ಡಿ ಪಾಟೀಲ, ಪ್ರಾಂಶುಪಾಲ ಪ್ರಶಾಂತ್ ಕುಲಕರ್ಣಿ,ವಿನೂತಾ ಆರ್.ಬಿ., ಅನಿತಾ ಕುಲಕರ್ಣಿ, ಪ್ರಭುಗೌಡ ಸಿದ್ಧಾರೆಡ್ಡಿ, ಕರುಣೇಶ ಹಿರೇಮಠ, ಗುರುರಾಜ ಕುಲಕರ್ಣಿ ಸೇರಿದಂತೆ ಉಪನ್ಯಾಸಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.