
ಕಲಬುರಗಿ,ಜು.29: ವಿಶ್ವ ಹೆಪಟೈಟಿಸ್ ದಿನದ ಅಂಗವಾಗಿ ನಗರದ ಎನ್‍ಕೆ ಆಸ್ಪತ್ರೆಯಲ್ಲಿ ಹೆಪಟೈಟಿಸ್ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಎನ್‍ಕೆ ಆಸ್ಪತ್ರೆಯ ಅಧ್ಯಕ್ಷ ಹಾಗೂ ಖ್ಯಾತ ಜಠರ ಮತ್ತು ಕರುಳಿನ ಶಸ್ತ್ರಚಿಕಿತ್ಸಕ ಡಾ. ಆರಿಫ್ ರಝಾ ಅಹ್ಮದ್ ಅವರು ಹೆಪಟೈಟಿಸ್ ಕಾಯಿಲೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಹೆಪಟೈಟಿಸ್‍ನ ವಿವಿಧ ವಿಧಗಳು, ಅದರ ಲಕ್ಷಣಗಳು, ಸೋಂಕು ಹರಡುವ ಮಾರ್ಗಗಳು ಹಾಗೂ ರೋಗವನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎನ್‍ಕೆ ಆಸ್ಪತ್ರೆಯ ಜಠರ ಮತ್ತು ಕರುಳಿನ ತಜ್ಞರಾದ ಡಾ. ಜೀಶಾನ್ ಅಲಿ ಅವರು ಹೆಪಟೈಟಿಸ್ ಸೋಂಕನ್ನು ತಡೆಗಟ್ಟುವ ವಿಧಾನಗಳು, ಸ್ವಚ್ಛತೆ ಕಾಪಾಡಿಕೊಳ್ಳುವ ಮಹತ್ವ, ಸುರಕ್ಷಿತ ಆರೋಗ್ಯ ಕ್ರಮಗಳು ಹಾಗೂ ಸಮಯಕ್ಕೆ ಸರಿಯಾಗಿ ಪರೀಕ್ಷೆ ಮತ್ತು ಚಿಕಿತ್ಸೆಯನ್ನು ಪಡೆಯುವ ಅಗತ್ಯತೆಯ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಎನ್‍ಕೆ ಆಸ್ಪತ್ರೆಯ ಅಧ್ಯಕ್ಷ ಡಾ. ಆರಿಫ್ ರಝಾ ಅಹ್ಮದ್ ಅವರು, ಎನ್‍ಕೆ ಆಸ್ಪತ್ರೆಯ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಗೆ ಉಚಿತ ಹೆಪಟೈಟಿಸ್ ಲಸಿಕಾ ಅಭಿಯಾನವನ್ನು ನಡೆಸಲಾಗುವುದುಎಂದು ಘೋಷಿಸಿದರು. ಆಸ್ಪತ್ರೆಯ ಸಿಬ್ಬಂದಿಯ ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಈ ಲಸಿಕಾ ಅಭಿಯಾನವು ಹೆಪಟೈಟಿಸ್ ತಡೆಗಟ್ಟುವ ನಿಟ್ಟಿನಲ್ಲಿ ಮಹತ್ವದ ಕ್ರಮವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎನ್‍ಕೆ ಆಸ್ಪತ್ರೆಯ ಕ್ರಿಟಿಕಲ್ ಕೇರ್ ವಿಭಾಗದ ಮುಖ್ಯಸ್ಥ ಡಾ. ಹೈದರ್ ರೆಹಮಾನ್, ಹಿರಿಯ ಮೂತ್ರರೋಗ ತಜ್ಞ ಡಾ. ಮೊಹಮ್ಮದ್ ತೈಫ್ ಬೆಂಡಿಗೇರಿ, ಸ್ತ್ರೀರೋಗ ತಜ್ಞರಾದ ಡಾ. ಶ್ರುತಿಕಾ ಗೊಬ್ಬೂರು, ಆಸ್ಪತ್ರೆಯ ಎಲ್ಲಾ ಆಡಳಿತಾಧಿಕಾರಿಗಳು, ವ್ಯವಸ್ಥಾಪಕರು, ವಿವಿಧ ವಿಭಾಗಗಳ ಉಸ್ತುವಾರಿಗಳು, ಶುಶ್ರೂಷಕ ಸಿಬ್ಬಂದಿ ಹಾಗೂ ಹೌಸ್‍ಕೀಪಿಂಗ್ ಸಿಬ್ಬಂದಿ ಉಪಸ್ಥಿತರಿದ್ದರು.































