
ನವದೆಹಲಿ, ಜ.29-ವಿರೋಧ ಪಕ್ಷಗಳ ಭಾರೀ ಗದ್ದಲ, ಕೋಲಾಹಲದ ನಡುವೆ ಲೋಕಸಭೆ ಯಲ್ಲಿಂದು ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆ ಧ್ಬನಿಮತದ ಮೂಲಕ ಅಂಗೀಕಾರಗೊಂಡಿದೆ.
ಜಂತರ್ ಮಂತರ್ ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗ ಮಾಡಲು ಗೃಹ ಸಚಿವ ಅಮಿತ್ ಶಾ ಕುಮ್ಮಕ್ಕು ನೀಡಿದ್ದಾರೆಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಈ ವೇಳೆ ವಿರೋಧ ಪಕ್ಷಗಳು ಗದ್ದಲ,ಕೋಲಾಹಲ ವೆಬ್ಬಿಸಿ ಕಲಾಪಕ್ಕೆ ಅಡ್ಡಿಪಡಿಸಿದರು. ಆದರೂ ಸಭಾಧ್ಯಕ್ಷ ಓಂ ಬಿರ್ಲಾ ಮಸೂದೆ ಧ್ವನಿಮತದಿಂದ ಅಂಗೀಕಾರಗೊಂಡಿದೆ ಎಂದು ಪ್ರಕಟಿಸಿದರು.
ರಾಜ್ಯಸಭೆಯಲ್ಲಿ ಉದ್ದೇಶಿತ ಮಸೂದೆ ಚರ್ಚೆ ನಡೆಸಿ ಅಂಗೀಕಾರ ದೊರೆಯಬೇಕಿದೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತಂತೆ ಸಿಡಿದೆದ್ದ
ವಿದ್ಯಾರ್ಥಿ ಸಮುದಾಯದ ಕಿಚ್ಚಿನ ಬೆನ್ನಲ್ಲೇ ಕೇಂದ್ರ ಸರ್ಕಾರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಎರಡು ತಿಂಗಳಲ್ಲಿ ಇತ್ಯರ್ಥಪಡಿಸಲು ಕೇಂದ್ರ ಸರ್ಕಾರ ತ್ವರಿತ ನ್ಯಾಯಾಲಯ ಸ್ಥಾಪಿಸುವುದಾಗಿ ಘೋಷಿಸಿತ್ತು.
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ದೌರ್ಜನ್ಯ ನಡೆಸಲು ಅಮಿತ್ ಶಾ ಕುಮ್ಮಕ್ಕು ನೀಡಿದ್ದಾರೆ ಎಂದು ರಾಹುಲ್ ಆರೋಪಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆದು ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕೆಂದು ಸಚಿವ ಕಿರಣ್ ರಿಜಿಜು ಒತ್ತಾಯಿಸಿದರು.
ಚರ್ಚೆಯ ನಡುವೆ ಮಧ್ಯ ಪ್ರವೇಶಿಸಿದ ಸಚಿವ ಜಿತೇಂದ್ರ ಸಿಂಗ್ ರಾಹುಲ್ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದರು. ಪ್ರತಿಭಟನಾ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆದಿಲ್ಲ. ಗುಂಡು ಹಾರಿಸುವಂತೆಯೂ ಯಾವುದೇ ಆದೇಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.































