Home ಸುದ್ದಿ ರಾಷ್ಟ್ರೀಯ ೧೩ ಮಂದಿ ವಿರುದ್ಧ ದೋಷಾರೋಪ

೧೩ ಮಂದಿ ವಿರುದ್ಧ ದೋಷಾರೋಪ

ನವದೆಹಲಿ,ಜು. ೨೯: ದೇಶಾದ್ಯಂತ ತೀವ್ರ ಆಕ್ರೋಶ ಹಾಗೂ ರಾಜಕೀಯ ಸಂಚಲನಕ್ಕೆ ಕಾರಣವಾಗಿದ್ದ ನೀಟ್ ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ಚುರುಕುಗೊಳಿಸಿದ್ದು, ದೆಹಲಿ ವಿಶೇಷ ನ್ಯಾಯಾಲಯಕ್ಕೆ ೧೩ ಮಂದಿ ಆರೋಪಿಗಳ ವಿರುದ್ಧ ೨೦ ಸಾವಿರ ಪುಟಗಳ ದೋಷರೊಪಣ ಪಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

ನೀಟ್ ಪ್ರಶ್ನೆ ಪತ್ರಿಕೆಗೆ ಸಂಬಂಧಿಸದಂತೆ ದೆಹಲಿಯ ಜಂತರ್-ಮಂತರ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಭಾರಿ ಪ್ರತಿಭಟನೆ ನಡೆಸಲಾಯಿತು,ಈ ಹಿನ್ನೆಲೆಯಲ್ಲಿ ಪ್ರಕರಣ ಕುರಿತತಂತೆ ಸಿಬಿಐ ತನಿಖೆಗೆ ವಹಿಸಲಾಗಿತ್ತು
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಬಿಐ ಸಂಪೂರ್ಣ ತನಿಖೆ ನಡೆಸಿ ಪ್ರಶ್ನೆ ಪತ್ರಿಕೆ ಲೀಕ್ ಕಾರಣರಾದ ಕೆಲವರನ್ನು ಬಂಧಿಸಿ ದೋಷರೋಪಣ ಪಟ್ಟಿ ಸಿದ್ಧಪಡಿಸಿತ್ತು. ಅವರಲ್ಲಿ ಪ್ರಮುಖ ಆರೋಪಿಗಳಾದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಮೂವರು ವಿಷಯ ತಜ್ಞರು, ಕೋಚಿಂಗ್ ಸೆಂಟರ್‌ಗಳ ಮುಖ್ಯಸ್ಥರು ಹಾಗೂ ಮಧ್ಯವರ್ತಿಗಳು ಸೇರಿದಂತೆ ೧೩ ಜನರನ್ನು ಪ್ರಕರಣದಲ್ಲಿ ಪ್ರಮುಖ ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿರುವ ದೋಷಾರೋಪ ಪಟ್ಟಿಯ ಪ್ರಕರಣ ಕುರಿತಂತೆ ಸಂಪೂರ್ಣ ವಿವರಗಳನ್ನು ದಾಖಲಿಸಲಾಗಿದೆ.

ವಿಷಯ ತಜ್ಞರೇ ಪ್ರಮುಖ ಆರೋಪಿಗಳು
ಎನ್’ಟಿಎ ವಿಷಯ ತಜ್ಞರು ಪಿ.ವಿ. ಕುಲಕರ್ಣಿ ಕೆಮಿಸ್ಟ್ರಿ (ರಸಾಯನಶಾಸ್ತ್ರ) ವಿಷಯ ತಜ್ಞ, ಮನಿಷಾ ಗುರುನಾಥ್ ಮಂಧಾರೆ ಬಯಾಲಜಿ (ಜೀವಶಾಸ್ತ್ರ) ವಿಷಯ ತಜ್ಞೆ,, ಮನಿಷಾ ಸಂಜಯ್ ಹವಾಲ್ದಾರ್: ಫಿಸಿಕ್ಸ್ (ಭೌತಶಾಸ್ತ್ರ) ವಿಷಯ ತಜ್ಞೆ, (ಕೋಚಿಂಗ್ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವೈದ್ಯರು)

ಡಾ. ಮನೋಜ್ ಶೀರೂರೆ ಲಾತೂರ್ ಮೂಲದ ವೈದ್ಯ, ತೇಜಸ್ ಹರ್ಷದ್ ಕುಮಾರ್ ಶಾ ಪುಣೆಯ ‘ಎಪಿಎಮ್‌ಎ’ ಕೋಚಿಂಗ್ ಸೆಂಟರ್‌ನ ಫಿಸಿಕ್ಸ್ ಬೋಧಕ ,ಶಿವರಾಜ್ ರಘುನಾಥ್ ಮೋಟೇಗಾಂವ್ಕರ್( ಲಾತೂರ್ ಮೂಲದ ಖಾಸಗಿ ಕೋಚಿಂಗ್ ಸೆಂಟರ್ ಮಾಲೀಕ)

ಯಶ್ ಯಾದವ್, ಮಾಂಗಿಲಾಲ್ ಬಿವಾಲ್, ದಿನೇಶ್ ಬಿವಾಲ್, ವಿಕಾಸ್ ಬಿವಾಲ್, ಶುಭಮ್ ಖೈರ್ನಾರ್, ಧನಂಜಯ್ ಲೋಖಂಡೆ ಮತ್ತು ಮನಿಷಾ ವಾಗ್ಮರೆ.
ಬೃಹತ್ ತನಿಖಾ ತಂಡ: ಸಿಬಿಐ ಪ್ರಕರಣದ ತನಿಖೆಗಾಗಿ ೭೨ ತನಿಖಾಧಿಕಾರಿಗಳು ಹಾಗೂ ೮ ಸೈಬರ್ ಫೊರೆನ್ಸಿಕ್ ತಜ್ಞರನ್ನೊಳಗೊಂಡ ಬೃಹತ್ ತಂಡವನ್ನು ರಚಿಸಿತ್ತು.

ಆರೋಪಿಗಳ ವಿರುದ್ಧ ಬಲವಾದ ಸಾಕ್ಷ್ಯಾಧಾರವಾಗಿ ೩೬೦ ಸಾಕ್ಷಿಗಳು, ೪೨೨ ದಾಖಲೆಗಳು ಹಾಗೂ ೪೩ ವಸ್ತುನಿಷ್ಠ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಮಹಾರಾಷ್ಟ್ರ, ರಾಜಸ್ಥಾನ, ಹರಿಯಾಣ, ದೆಹಲಿ ಸೇರಿದಂತೆ ದೇಶದ ೯೨ ವಿವಿಧ ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿ ಡಿಜಿಟಲ್ ಉಪಕರಣಗಳು, ಮೊಬೈಲ್ ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಬಂಧಿತರಾಗಿರುವ ಎಲ್ಲಾ ೧೩ ಆರೋಪಿಗಳು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅಕ್ರಮ ಹಣಕಾಸು ವ್ಯವಹಾರ ಪತ್ತೆಹಚ್ಚಿರುವ ತನಿಖಾ ಸಂಸ್ಥೆಯು ಆರೋಪಿಗಳಿಗೆ ಸೇರಿದ ಹಲವು ಬ್ಯಾಂಕ್ ಖಾತೆಗಳು, ಲಾಕರ್‌ಗಳು ಹಾಗೂ ಡಿಮ್ಯಾಟ್ ಖಾತೆಗಳನ್ನು ಫ್ರೀಜ್ ಮಾಡಿದೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಂಚನೆ , ನಂಬಿಕೆ ದ್ರೋಹ, ಸಾಕ್ಷ್ಯ ನಾಶ, ಭ್ರಷ್ಟಾಚಾರ ತಡೆ ಕಾಯ್ದೆ ಹಾಗೂ ಸಾರ್ವಜನಿಕ ಪರೀಕ್ಷಾ (ಅಕ್ರಮ ತಡೆ) ಕಾಯ್ದೆ, ೨೦೨೪ ರ ಅಡಿಯಲ್ಲಿ ಕಠಿಣ ಪ್ರಕರಣಗಳನ್ನು ದಾಖಲಿಸಲಾಗಿದೆ.

ಸೋರಿಕೆಯ ಮೂಲವನ್ನು ತುದಿಯಿಂದ ತುದಿಯವರೆಗೆ ಪತ್ತೆಹಚ್ಚಲಾಗಿದ್ದು, ಇನ್ನುಳಿದ ಶಂಕಿತರು ಹಾಗೂ ಎನ್‌ಟಿಎ ಅಧಿಕಾರಿಗಳ ಪಾತ್ರದ ಕುರಿತು ಪೂರಕ ತನಿಖೆ ಮುಂದುವರಿದಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.