
ಕಲಬುರಗಿ,ಆ.9-ಮಕ್ಕಳಲ್ಲಿ ಶ್ರವಣ ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ನೀಡಿದರೆ ಅವರ ಭಾಷಾ ಬೆಳವಣಿಗೆ, ಶಿಕ್ಷಣ ಹಾಗೂ ಸಾಮಾಜಿಕ ಬದುಕು ಸುಧಾರಿಸಲು ಸಾಧ್ಯವಾಗುತ್ತದೆ. ಶ್ರವಣ ಸಮಸ್ಯೆ ಹೊಂದಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಅಗತ್ಯ ವೈದ್ಯಕೀಯ ಸೇವೆ ಹಾಗೂ ಶ್ರವಣ ಸಾಧನಗಳನ್ನು ಒದಗಿಸಲು ಆರೋಗ್ಯ ಇಲಾಖೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‍ಎಚ್‍ಎಂ) ಅಡಿಯಲ್ಲಿ ರಾಷ್ಟ್ರೀಯ ಕಿವುಡುತನ ನಿಯಂತ್ರಣ ಕಾರ್ಯಕ್ರಮ (ಎನ್‍ಪಿಪಿಸಿಡಿ) ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 13 ಮಕ್ಕಳಿಗೆ ಶ್ರವಣ ಸಾಧನಗಳನ್ನು ವಿತರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಜಿಮ್ಸ್ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಶ್ರವಣ ಸಮಸ್ಯೆ ಪತ್ತೆ ಮತ್ತು ಚಿಕಿತ್ಸೆಗೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾರ್ಯಕ್ರಮದಡಿ ಇದುವರೆಗೆ 4,574 ಫಲಾನುಭವಿಗಳಿಗೆ ಶ್ರವಣ ತಪಾಸಣೆ ನಡೆಸಲಾಗಿದೆ. ಇವರಲ್ಲಿ 914 ಮಂದಿಗೆ ಶ್ರವಣ ಸಮಸ್ಯೆ ಪತ್ತೆಯಾಗಿದ್ದು, 205 ಮಂದಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಗುರುತಿಸಿ ಈಗಾಗಲೇ 125 ಮಂದಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, 295 ಮಂದಿಗೆ ಶ್ರವಣ ಸಾಧನಗಳನ್ನು ವಿತರಿಸಲಾಗಿದೆ. ಅಲ್ಲದೆ 43 ಮಂದಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಲಾಗಿದ್ದು, 1,331 ಮಂದಿಗೆ ಔಷಧೋಪಚಾರ ಮೂಲಕ ಚಿಕಿತ್ಸೆ ನೀಡಲಾಗಿದೆ ಎಂದು ಡಿ.ಸಿ. ತಿಳಿಸಿದರು
ಶ್ರವಣ ಸಮಸ್ಯೆ ಇರುವ ಮಕ್ಕಳನ್ನು ಶಾಲಾ ಹಂತದಲ್ಲೇ ಗುರುತಿಸಿ ತ್ವರಿತ ಚಿಕಿತ್ಸೆ ನೀಡುವುದು ಅತ್ಯಗತ್ಯವಾಗಿದೆ. ಆರೋಗ್ಯ ಇಲಾಖೆ ಗ್ರಾಮೀಣ ಪ್ರದೇಶಗಳಿಗೂ ಸೇವೆ ವಿಸ್ತರಿಸಿ, ಅಗತ್ಯವಿರುವ ಪ್ರತಿಯೊಬ್ಬ ಮಗುವಿಗೂ ತಪಾಸಣೆ ಮತ್ತು ಚಿಕಿತ್ಸೆ ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಈ ಸಂದರ್ಭದಲ್ಲಿ ಎಸ್.ಪಿ.ಅಡ್ಡೂರು ಶ್ರೀನಿವಾಸುಲು, ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ ಸಂಕನೂರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ಸರ್ಜನ್
ಡಾ. ಅಸ್ನಾ ರಬಾ ರುಕಿಯಾ, ಡಾ. ಸಾಧಿಕ್ ಹುಸೇನ್, ಡಾ.ರೇಣುಕಾ ಮೇಳಕುಂದಿ, ಡಾ.ಸಂತೋಷ್ ಆಲಗೂಡ್ ಸೇರಿ ಜಿಲ್ಲಾ ಆಸ್ಪತ್ರೆಯ ಕಿವಿ-ಮೂಗು-ಗಂಟಲು (ಇಎನ್‍ಟಿ) ತಜ್ಞರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯರು ಹಾಗೂ ಮಕ್ಕಳ ಪೆÇೀಷಕರು ಉಪಸ್ಥಿತರಿದ್ದರು.































