
ತುಮಕೂರು, ಸೆ. ೪- ಪ್ರಸ್ತುತ ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದಂತಹ ತೀವ್ರ ಬರಗಾಲದ ಪರಿಸ್ಥಿತಿ ಇದ್ದು, ಈ ಸ್ಥಿತಿಯನ್ನು ಎದುರಿಸಲು ರಾಜ್ಯ ಸರ್ಕಾರ ಇದುವರೆಗೆ ಯಾವುದೇ ಸ್ಪಷ್ಟ ನೀತಿಯನ್ನು ಪ್ರಕಟಿಸದಿರುವುದು ರಾಜ್ಯದ ಜನರ ದೌರ್ಭಾಗ್ಯ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ. ಸುರೇಶಗೌಡ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಾರಿ ರಾಜ್ಯದ ಯಾವ ಭಾಗದಲ್ಲಿಯೂ ಉತ್ತಮ ಎನ್ನುವ ಹಾಗ ಮಳೆಯಾಗಿಲ್ಲ. ಆದರೂ ಸರ್ಕಾರ ಇದುವರೆಗೆ ಕೇವಲ ೧೦೧ ತಾಲ್ಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿದೆ. ಇದಕ್ಕೆ ವಿರುದ್ಧವಾಗಿ ರಾಜ್ಯದ ಎಲ್ಲ ಕಡೆಯಿಂದ ಬಿಟ್ಟು ಹೋದ ತಾಲ್ಲೂಕುಗಳ ಜನರು ತಮ್ಮ ತಮ್ಮ ತಾಲ್ಲೂಕುಗಳನ್ನು ಈ ಬರ ಪೀಡಿತ ಪಟ್ಟಿಯಲ್ಲಿ ಸೇರಿಸಬೇಕು ಎಂದು ಅಗ್ರಹಿಸುತ್ತಿರುವುದು ರಾಜ್ಯ ಸರ್ಕಾರದ ವೈಫಲ್ಯವನ್ನು ಮತ್ತು ಕಾಳಜಿ ಇಲ್ಲದಿರುವುದನ್ನು ತೋರಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.
ಒಂದು ಕಡೆ ಮುಖ್ಯಮಂತ್ರಿಗಳು ಮತ್ತೊಂದು ಕಡೆ ಉಪಮುಖ್ಯಮಂತ್ರಿಗಳು ಈಗ ಬರಪೀಡಿತ ಪ್ರದೇಶಗಳ ಅಧ್ಯಯನಕ್ಕೆ ಹೊರಟಿರುವುದು ಬಿಜೆಪಿ ಪಾದಯಾತ್ರೆಗೆ ಪ್ರತಿಕ್ರಿಯೆಯಂತೆ ಇದೆಯೇ ಹೊರತು ನೈಜ ಕಾಳಜಿಯಿಂದ ಕೂಡಿಲ್ಲ. ರಾಜ್ಯದ ಸಂಪುಟದಲ್ಲಿ ಈಗ ಒಂದೆರಡು ಸ್ಥಾನಗಳು ಬಿಟ್ಟು ಉಳಿದ ಎಲ್ಲ ಸ್ಥಾನಗಳನ್ನು ತುಂಬಲಾಗಿದೆ, ಅವರಿಗೆ ಉಸ್ತುವಾರಿಯನ್ನೂ ಕೊಡಲಾಗಿದೆ. ಅವರು ತಮ್ಮ ತಮ್ಮ ಜಿಲ್ಲೆಗಳಿಗೆ ಹೋಗಿ ಬರ ಸ್ಥಿತಿಯ ಅಧ್ಯಯನ ಮಾಡಬೇಕೇ ಹೊರತು ಒಂದೆರಡು ಜಿಲ್ಲೆಗಳ ಅಧ್ಯಯನ ಅಲ್ಲ. ಒಟ್ಟು ಬರದಿಂದ ಆಗಿರುವ ನಷ್ಟ ಎಷ್ಟೆಂದು ಇನ್ನೂ ಅಂದಾಜು ಆಗಿಲ್ಲ, ಜಿಲ್ಲಾವಾರು ಈ ನಷ್ಟದ ಪ್ರಮಾಣವನ್ನುಅಂದಾಜು ಮಾಡಬೇಕು, ಈಗಿನ ಪ್ರಕಾರ ಕನಿಷ್ಟ ೫೫ ಲಕ್ಷದಿಂದ ಗರಿಷ್ಟ ೭೭ ಲಕ್ಷ ಟನ್‌ನಷ್ಟು ಆಹಾರ ಉತ್ಪಾದನೆ ಆಗುವುದಿಲ್ಲ ಎಂದು ತಿಳಿದು ಬಂದಿದೆ. ಇಂಥ ಸ್ಥಿತಿಯಲ್ಲಿ ಸರ್ಕಾರ ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಅದು ಯಾವುದೂ ಕಾಣುವುದಿಲ್ಲ. ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಮಾತನಾಡಿದ್ದುದನ್ನು ನೋಡಿದರೆ ಅವರು ಕೇಂದ್ರದ ಮೇಲೆ ಗೂಬೆ ಕೂರಿಸುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ರಾಜ್ಯ ಸರ್ಕಾರ ಕಳೆದ ಮೂರು ವರಷ್ಗಳಲ್ಲಿ ಇದನ್ನೇ ಮಾಡಿಕೊಂಡು ಬಂದಿದೆ ಎಂದು ಕಿಡಿಕಾರಿದ್ದಾರೆ.
ಈ ಹಿಂದೆಯೇ ನಾನು ರಾಜ್ಯದ ಎಲ್ಲ ರೈತರ ಅನುಕೂಲಕ್ಕಾಗಿ ೧೦ ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಬೇಕು. ನಂತರ ಕೇಂದ್ರದ ಮೊರೆ ಹೋಗಬೇಕು ಎಂದು ಆಗ್ರಹಿಸಿದ್ದೆ, ಸರ್ಕಾರದಿಂದ ಯಾವ ಪ್ರತಿಕ್ರಿಯೆಯೂ ಬಂದಿಲ್ಲ. ಸರ್ಕಾರದ ಹಠಮಾರಿತನದಿಂದಾಗಿ ಅಧಿವೇಶನದಲ್ಲಿ ಈ ಕುರಿತು ಚರ್ಚೆಯೂ ಆಗಲಿಲ್ಲ. ಅಧಿವೇಶನ ಮುಗಿದ ನಂತರ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯುವುದಿದ್ದರೆ ಅಧಿವೇಶನದಲ್ಲಿಯೇ ಅದನ್ನು ಪ್ರಕಟಿಸಿದ್ದರೆ ಸರ್ಕಾರಕ್ಕೆ ಈಗ ಆಗಿರುವ ಮುಖಭಂಗ ತಪ್ಪುತ್ತಿತ್ತು ಸರ್ಕಾರ ಈಗ ನೆರವು ಪ್ರಕಟಿಸದೇ ಇದ್ದರೆ ಈಗಾಗಲೇ ಮುಂಗಾರು ಕಳೆದು ಹೋದಂತೆ ಹಿಂಗಾರು ಹಂಗಾಮು ಕೂಡಾ ಕಳೆದು ಹೋಗುತ್ತದೆ. ಮತ್ತು ರೈತರು ಅನಾಥರಾಗುತ್ತಾರೆ ಎಂದು ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳ ಮರುಪರಿಶೀಲನೆಯ ತುರ್ತು ಅಗತ್ಯ
ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಇಡೀ ದೇಶಕ್ಕೆ ತನ್ನದು ಮಾದರಿ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿತ್ತು, ಆದರೆ, ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಇನ್ನೂ ೫.೬೫೧.೨೪ ಕೋಟಿ ರೂಪಾಯಿಗಳನ್ನು ಸರ್ಕಾರ ಬಾಕಿ ಉಳಿಸಿಕೊಂಡಿರುವುದರಿಂದ ನಾಲ್ಕೂ ನಿಗಮಗಳಲ್ಲಿ ಸಂಬಳ ಕೊಡಲೂ ಹಣ ಇಲ್ಲ ಎನ್ನುವಂಥ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಹೊಣೆಗೇಡಿ ಗ್ಯಾರಂಟಿ ಯೋಜನೆಗಳು ಕಾರಣ. ಉಳ್ಳವರಿಗೆ ಯಾವ ಗ್ಯಾರಂಟಿ ಯೋಜನೆಗಳ ಲಾಭವೂ ಇರಬಾರದು. ಆಗ ಮಾತ್ರ ಅರ್ಹರಿಗೆ ಇಂಥ ಯೋಜನೆಗಳ ಮಹತ್ವದ ಅರಿವಾಗುತ್ತದೆ. ಆದರೆ, ಕೇವಲ ಅಧಿಕಾರದ ಆಸೆಗಾಗಿ ಈ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ಸರ್ಕಾರ ಇಡೀ ರಾಜ್ಯವನ್ನು ದಿವಾಳಿ ಮಾಡಿದೆ. ಇನ್ನುಳಿದ ಒಂದೂವರೆ ವರ್ಷದಲ್ಲಿ ಇಡೀ ಬೊಕ್ಕಸವನ್ನು ಇವರು ಬರಿದು ಮಾಡಿ ರಾಜ್ಯದ ಜನರ ಹಣೆಗೆ ಮೂರು ನಾಮ ಹಾಕಿ ಹೋಗುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.


































