
ಮಧುಗಿರಿ, ಸೆ. ೧೩- ಸಹಕಾರ ಕ್ಷೇತ್ರದಲ್ಲಿ ರಾಜಣ್ಣ ಅವರಿಗೆ ಇರುವ ಅನುಭವವನ್ನು ಸರ್ಕಾರ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದಿದೆ. ಅದರಲ್ಲಿ ಕೆ.ಎನ್ ರಾಜಣ್ಣ ನವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಹಕಾರ ಸಚಿವರು ಸೇರಿದಂತೆ ಪಕ್ಷದ ತೀರ್ಮಾದಂತೆ ರವಿ ಅವರನ್ನು ಅಧ್ಯಕ್ಷರನ್ನಾಗಿ, ಉಪಾಧ್ಯಕ್ಷರನ್ನಾಗಿ ಬಯ್ಯಾಪುರ ಅವರನ್ನು ಆಯ್ಕೆ ಮಾಡಿದ್ದಾರೆ. ಪಕ್ಷದ ತೀರ್ಮಾನಕ್ಕೆ ನಾವೆಲ್ಲರೂ ಬದ್ದರಾಗಿದ್ದೇವೆ ಎಂದರು.
ಕಳೆದ ಎರಡು ವರ್ಷದ ಹಿಂದೆ ರಾಜಣ್ಣ ರವರು ಏನು ತಪ್ಪು ಮಾಡದೇ ಇದ್ದರೂ ಸಚಿವ ಸ್ಥಾನದಿಂದ ವಜಾ ಮಾಡಲಾಯಿತು. ಕಳೆದ ಫೆಬ್ರವರಿಯಲ್ಲಿ ಅಪೆಕ್ಸ್ ಬ್ಯಾಂಕ್ ಚುನಾವಣೆ ಇತ್ತು. ಕಾರಣಾಂತರಗಳಿಂದ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಚುನಾವಣೆಯನ್ನು ಮುಂದೂಡಿದ್ದರು. ರಾಜಣ್ಣನವರು ಹಿರಿಯರು. ಮಂತ್ರಿಗಿರಿ ಕೈ ತಪ್ಪಿ ಹೋದ ಮೇಲೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗುತ್ತೇವೆ ಎಂಬ ಮಾತಿತ್ತು.
ಮತ್ತು ಸಿದ್ದರಾಮಯ್ಯ ನವರು ಸಹ ಹೇಳಿದ್ದರು. ರಾಜಣ್ಣ ನಿನ್ನನ್ನ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನನ್ನಾಗಿ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಮಾತು ಕೊಟ್ಟಿದ್ದರು. ಅವರು ಕೂಡಾ ಪ್ರಯತ್ನಪಟ್ಟರು, ಕಾಣದ ಕೈಗಳ ಕುತಂತ್ರದಿಂದ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಪಕ್ಷದ ಮುಖಂಡರುಗಳಿಗೆ ಇದನ್ನು ಹೇಳುತ್ತಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅವರ ಕಡೆಯವರನ್ನು ಕುರಿಸಿಕೊಳ್ಳಬೇಕು ಎಂಬ ಭಾವನೆ ಇರಬಹುದು. ಅದಕ್ಕೇನು ನಾನು ಅಲ್ಲಗೆಳೆಯುವುದಿಲ್ಲ ಎಂದರು.
ಸ್ವಜನ ಪಕ್ಷಪಾತ ಎಂದು ನಾನು ಹೇಳುವುದಿಲ್ಲ. ಅಪೆಕ್ಸ್ ಬ್ಯಾಂಕ್ ಇವತ್ತು ಹೇಳಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ೧೫ ಸಾವಿರ ಕೋಟಿ ಡೆಪಾಸಿಟ್ ಇದ್ದರೆ ೩೦ ಸಾವಿರ ಕೋಟಿ ಸಾಲ ಇದೆ.
ರವಿ ಯವರು ಒಳ್ಳೆಯ ಕೆಲಸ ಮಾಡಲಿ ಅಂತ ನಾನು ಆಶಿಸುತ್ತೇನೆ. ರಾಜಣ್ಣ ರವರನ್ನು ಹೆಚ್ಚು ಕಡೆಗಣಿಸಿದಷ್ಟು ಜಿಲ್ಲಾ ರಾಜಕಾರಣದಲ್ಲಿ ಪ್ರಭಾವ ಬಿರುತ್ತದೆ. ಹಿಂದೆ ಇದೆಲ್ಲಾ ನಡೆದಿದೆ. ಈಗ ಆಗೋದು ಬೇಡ.
ಪಕ್ಷದ ಅಧ್ಯಕ್ಷರು ಮುಖ್ಯಮಂತ್ರಿಗಳು, ಆದಷ್ಟು ಎಚ್ಚೆತ್ತುಕೊಂಡು ರಾಜಣ್ಣ ರವರಿಗೆ ಏನು ಅನ್ಯಾಯ ಆಗಿದೆ ಅದನ್ನು ಸರಿಪಡಿಸಬೇಕು ಎಂದರು.
ಸಚಿವ ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿ ವಿಚಾರದ ಬಗ್ಗೆ ಮಾತನಾಡಿ, ಎರಡು ದಿನದಿಂದ ಇಡಿ ದಾಳಿ ನಡೆದಿದೆ. ದಲಿತರು ಹಿಂದುಳಿದವರನ್ನು ತುಳಿಯುವ ಹುನ್ನಾರ ಎನ್ನುವ ಭಾವನೆ ನನ್ನಲಿದೆ.
ಇನ್ನೊಂದು ವರ್ಷದಲ್ಲಿ ಚುನಾವಣೆ ಇದೆ. ಹಿಂದುಳಿದ ವರ್ಗಗಳು ಒಬಿಸಿ ವೋಟು ಪಕ್ಷಕ್ಕೆ ಬೇಕು ಅಂದ್ರೆ ಆದಷ್ಟು ಬೇಗ ಪಕ್ಷದ ಮುಖಂಡರು ಇದನ್ನು ಸರಿಪಡಿಸಬೇಕು. ಕೆ.ಎನ್. ರಾಜಣ್ಣ ರವರನ್ನು ಜೆಡಿಎಸ್ ಸಂಪರ್ಕ ವಿಚಾರದ ಬಗ್ಗೆ ಮಾತನಾಡಿ, ಹೌದು.. ನಾನು ದೇವೆಗೌಡರನ್ನು ನೋಡೋದಿಕ್ಕೆ ಹೋಗಿದ್ದೆ. ಅದು ರಾಜಕೀಯ ಭೇಟಿ ಆಗಿರಲಿಲ್ಲ. ಅದು ಸೌಹಾರ್ದದ ಭೇಟಿ, ಅವರ ಧರ್ಮ ಪತ್ನಿ ತೀರಿ ಹೋಗಿದ್ದರು.
ಹಾಗಾಗಿ ಒಂದು ಸೌಹಾರ್ದ ಭೇಟಿ ಮಾಡಿದ್ದು ಅಷ್ಟೇ. ಬಿಜೆಪಿ ಹಾಗೂ ಜೆಡಿಎಸ್ ನವರು ಆಗಲಿ ಯಾರು ನಮ್ಮ ಸಂಪರ್ಕದಲ್ಲಿ ಇಲ್ಲ. ವಿಶ್ವಾಸದಲ್ಲಿ ಎಲ್ಲರ ಜತೆ ಮಾತನಾಡುತ್ತೇವೆ ಅಷ್ಟೇ.
ಹಿರಿಯ ನಾಯಕರು ನನಗೆ ಕರೆ ಮಾಡಿ ಯಾವುದೇ ತಪ್ಪು ನಿರ್ಧಾರ ತಗೋಬೇಡಿ ಅಂತ ಹೇಳಿದ್ದಾರೆ. ನಮಗೇನು ಅಸಮಾಧಾನ ಇಲ್ಲ. ಮುಂದೆನೂ ನಾವು ಕಾಂಗ್ರೆಸ್ ಪಕ್ಷನೇ ಎಂದು ಹೇಳಿದರು.


































