
ಕಲಬುರಗಿ : ಕಳೆದ ವರ್ಷದ ಬೆಳೆ ವಿಮೆ ಪರಿಹಾರದ ಹಣ ಇನ್ನೂ ರೈತರ ಖಾತೆಗೆ ಜಮಾ ಆಗದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸೇಡಂ ತಾಲೂಕು ಘಟಕದ ವತಿಯಿಂದ ಸೇಡಂನ ಚಿಂಚೋಳಿ ಕ್ರಾಸ್ ಸಮೀಪ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರು, ಕಳೆದ ವರ್ಷದ ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳು ತಕ್ಷಣವೇ ಬೆಳೆ ವಿಮೆ ಪರಿಹಾರದ ಹಣವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಬೆಳೆ ವಿಮೆ ಯೋಜನೆಯಡಿ ಅರ್ಹ ರೈತರಿಗೆ ಪರಿಹಾರ ಧನ ಪಾವತಿಯಾಗದೆ ಇರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂದು ಸೇಡಂ ತಾಲೂಕು ರೈತ ಸಂಘದ ಅಧ್ಯಕ್ಷ ಶಾಂತಕುಮಾರ ಚನ್ನಕ್ಕಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಜಿ.ಕೆ. ಪಾಟೀಲ್ (ತೆಲ್ಕೂರ್), ಆಮಶೆಟ್ಟಿ ಪಾಟೀಲ್ (ಹೆಡ್ಡಳ್ಳಿ), ರವಿ ಪಾಟೀಲ್ (ಸೂರವಾರ), ದೊಡ್ಡಪ್ಪಗೌಡ ಯಡಗಾ, ಭೀಮರಾವ್ ಮಾಲಿಪಾಟೀಲ್ (ಮಳಖೇಡ), ಚಂದ್ರಕಾಂತ ಕಲ್ಕಮ್, ಚಂದ್ರಕಾಂತ ತೊಟ್ನಳ್ಳಿ, ಚಂದ್ರಕಾಂತ ಗುತ್ತೇದಾರ್, ಭಾರತೀಶ್ ಕುಲಕರ್ಣಿ, ನರಸಿಂಹಲು ನಕ್ಕಾ ಸೇರಿದಂತೆ ಅನೇಕ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ರೈತರ ನ್ಯಾಯಯುತ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸಿ ಬಾಕಿ ಇರುವ ಬೆಳೆ ವಿಮೆ ಹಣವನ್ನು ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.































