Home ಜಿಲ್ಲೆ ಕಲಬುರಗಿ ಮಾಲ್ಡೀವ್ಸ್‍ಗೆ ಗುಲ್ಬರ್ಗಾ ತೊಗರಿಬೇಳೆ ರಫ್ತು: ಕಲ್ಯಾಣ ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ

ಮಾಲ್ಡೀವ್ಸ್‍ಗೆ ಗುಲ್ಬರ್ಗಾ ತೊಗರಿಬೇಳೆ ರಫ್ತು: ಕಲ್ಯಾಣ ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ

ಕಲಬುರಗಿ: ಕಲಬುರಗಿಯ ಜಿಐ (GI) ಟ್ಯಾಗ್ ಹೊಂದಿರುವ ಪ್ರಸಿದ್ಧ ಗುಲ್ಬರ್ಗಾ ತೊಗರಿಬೇಳೆ ಮಾಲ್ಡೀವ್ಸ್‍ಗೆ ರಫ್ತಾಗಿರುವುದು ಕಲಬುರಗಿ ಭಾಗದ ರೈತರಿಗೆ ಹಾಗೂ ದಾಲ್‍ಮಿಲ್ ಉದ್ಯಮಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಕೆಕೆಸಿಸಿಐ ಆಡಳಿತ ಮಂಡಳಿ ಸದಸ್ಯ ಹಾಗೂ ಕೈಗಾರಿಕಾ ಸಮಿತಿ ಅಧ್ಯಕ್ಷ ಅಭಿಜಿತ್ ಪಡಶೆಟ್ಟಿ ತಿಳಿಸಿದ್ದಾರೆ.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಗುಲ್ಬರ್ಗಾ ತೊಗರಿಬೇಳೆ ಮಾಲ್ಡೀವ್ಸ್‍ಗೆ ರಫ್ತಾಗಿರುವ ಕುರಿತು ಮಾಡಿರುವ ಟ್ವೀಟ್‍ನ್ನು ಸ್ವಾಗತಿಸಿರುವ ಅವರು, ಇಂತಹ ಅಂತರರಾಷ್ಟ್ರೀಯ ರಫ್ತುಗಳಿಂದ ಸ್ಥಳೀಯ ರೈತರಿಗೆ ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯುವುದರ ಜೊತೆಗೆ, ದಾಲ್‍ಮಿಲ್ ಉದ್ಯಮಿಗಳಿಗೆ ಹೊಸ ಜಾಗತಿಕ ಮಾರುಕಟ್ಟೆಗಳು ಲಭ್ಯವಾಗಲಿವೆ ಎಂದು ಹೇಳಿದ್ದಾರೆ.
ಕಲಬುರಗಿಯ ಕೃಷಿ ಉತ್ಪನ್ನಗಳಿಗೆ ದೇಶೀಯ ಮಾರುಕಟ್ಟೆಯ ಜತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಬೇಡಿಕೆ ಹೆಚ್ಚುತ್ತಿರುವುದು ಸಂತಸದ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಕಲಬುರಗಿಯಿಂದ ಇನ್ನಷ್ಟು ಕೃಷಿ ಉತ್ಪನ್ನಗಳು ಜಾಗತಿಕ ಮಾರುಕಟ್ಟೆ ತಲುಪುವಂತಾಗಬೇಕು. ಇದರಿಂದ ರೈತರು ಹಾಗೂ ಕೃಷಿ ಆಧಾರಿತ ಕೈಗಾರಿಕೆಗಳಿಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ ಎಂದು ಅಭಿಜಿತ್ ಪಡಶೆಟ್ಟಿ ಆಶಯ ವ್ಯಕ್ತಪಡಿಸಿದ್ದಾರೆ.