
ಬೆಂಗಳೂರು, ಅ. ೩- ರಾಜ್ಯದ ಬರ ಅಧ್ಯಯನಕ್ಕೆ ಆಗಮಿಸಿರುವ ಕೇಂದ್ರ ತಂಡ ರಾಜ್ಯದ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯ ವೀಕ್ಷಣೆ ನಡೆಸಿದೆ.
ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್‌ಕುಮಾರ್ ಸಾಹು ನೇತೃತ್ವದಲ್ಲಿ ಮೂರು ತಂಡಗಳು ರಾಜ್ಯದ ಬರ ಅಧ್ಯಯನಕ್ಕೆ ಆಗಮಿಸಿದ್ದು, ಈ ಮೂರು ತಂಡಗಳು ರಾಜ್ಯದ ವಿವಿಧೆಡೆ ಬರ ಪೀಡಿತ ಸ್ಥಳಗಳಿಗೆ ತೆರಳಿ ಬರ ಪರಿಸ್ಥಿತಿಯನ್ನು ಖುದ್ಧು ಅವಲೋಕಿಸಿದರು.
ಇಂದು ಮತ್ತು ನಾಳೆ ಎರಡು ದಿನ ಕೇಂದ್ರದ ಈ ಮೂರು ತಂಡಗಳು ವಿವಿಧ ಜಿಲ್ಲೆಗಳಿಗೆ ತೆರಳಿ ಬರದಿಂದ ಆಗಿರುವ ಬೆಳೆ ಹಾನಿ, ಜಾನುವಾರುಗಳಿಗೆ ಮೇವಿನ ಕೊರತೆ, ಕುಡಿಯುವ ನೀರಿನ ಸಂಕಷ್ಟ ಎಲ್ಲವನ್ನು ಅವಲೋಕಿಸಲಿದೆ. ಜತೆಗೆ ಬರದಿಂದ ತೊಂದರೆಗೆ ಒಳಗಾಗಿರುವ ರೈತರ ಸಂಕಷ್ಟವನ್ನು ಆಲಿಸಲಿದೆ.
ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದೆ. ಬರ ಅಧ್ಯಯನಕ್ಕೆ ಕೇಂದ್ರ ತಂಡವನ್ನು ಕಳುಹಿಸುವಂತೆ ರಾಜ್ಯ ಸರ್ಕಾರ ಕೇಂದ್ರ ಕೃಷಿ ಸಚಿವರಿಗೆ ಮನವಿ ಮಾಡಿತ್ತು. ಅದರಂತೆ ಕೇಂದ್ರದ ಮೂರು ತಂಡಗಳು ಇಂದು ರಾಜ್ಯಕ್ಕೆ ಬಂದಿಳಿದಿದ್ದು, ಬರ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಕೇಂದ್ರಕ್ಕೆ ವಸ್ತುಸ್ಥಿತಿಯ ವರದಿಯನ್ನು ಸಲ್ಲಿಸಲಿವೆ.
ಬರ ಅಧ್ಯಯನ ತಂಡ ಸಲ್ಲಿಸಲಿರುವ ವರದಿ ಆಧರಿಸಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಲಿದೆ.
೨೧೭ ತಾಲ್ಲೂಕುಗಳು ಬರ ಪೀಡಿತ
ರಾಜ್ಯದಲ್ಲಿ ಮಳೆ ಕೊರತೆ ಎದುರಿಸಿರುವ ಒಟ್ಟು ೨೧೭ ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಈ ಪೈಕಿ ೧೭೭ ತಾಲ್ಲೂಕುಗಳಲ್ಲಿ ಸುಮಾರು ೪೬ ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇನ್ನು ೪೦ ತಾಲ್ಲೂಕುಗಳಲ್ಲಿ ನಷ್ಟದ ಅಂದಾಜು ನಡೆದಿದೆ.
ಸಿಎಂ ಜೊತೆ ಕೇಂದ್ರ ತಂಡ ಸಭೆ :
ರಾಜ್ಯದ ವಿವಿಧೆಡೆ ಕೇಂದ್ರ ಅಧ್ಯಯನ ತಂಡಗಳು ಬರ ವೀಕ್ಷಣೆ ನಡೆಸಿರುವಾಗಲೇ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್‌ಕುಮಾರ್ ಸಾಹು ನೇತೃತ್ವದ ಒಂದು ತಂಡ ಬರ ವೀಕ್ಷಣೆಗೆ ಪೂರ್ವಭಾವಿಯಾಗಿ ಇಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ, ಬರ ಪರಿಸ್ಥಿತಿಯ ಮಾಹಿತಿಯನ್ನು ಪಡೆದುಕೊಂಡಿತು.
ಈ ಸಭೆಯಲ್ಲಿ ರಾಜ್ಯದ ಬರ ಪರಿಸ್ಥಿತಿಯ ಬಗ್ಗೆ ಕೇಂದ್ರ ತಂಡಕ್ಕೆ ಅಂಕಿ-ಅಂಶಗಳ ಸಮೇತ ಮನವರಿಕೆ ಮಾಡಿ ಕೊಡಲಾಯಿತು.
ರಾಜ್ಯದ ೨೧೭ ತಾಲ್ಲೂಕುಗಳು ಬರ ಪೀಡಿತವಾಗಿವೆ. ಈ ತಾಲ್ಲೂಕುಗಳಲ್ಲಿ ಯಾವೆಲ್ಲಾ ಪರಿಸ್ಥಿತಿ ಇದೆ, ಎಷ್ಟು ಬೆಳೆ ನಷ್ಟವಾಗಿದೆ, ಎಲ್ಲ ಮಾಹಿತಿಯನ್ನು ಕೇಂದ್ರ ತಂಡಕ್ಕೆ ರಾಜ್ಯ ಸರ್ಕಾರ ನೀಡಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಡಾ. ಉಮಾಮಹದೇವನ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಿತೇಶ್‌ಕುಮಾರ್ ಸಿಂಗ್, ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಪ್ರಧಾನ ಕಾರ್ಯದರ್ಶಿ ಮನೋಜ್‌ಕುಮಾರ್ ಮೀನಾ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮಂಡಯ ಜಿಲ್ಲೆಗೆ ಭೇಟಿ: ಬರ ವೀಕ್ಷಣೆ :
ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕೆ ಆಗಮಿಸಿರುವ ಮೂರು ತಂಡಗಳ ಪೈಕಿ ಕೇಂದ್ರದ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತ್‌ಕುಮಾರ್ ಸಾಹು ನೇತೃತ್ವದ ತಂಡ ಬೆಂಗಳೂರಿನಲ್ಲಿ ಬರ ವೀಕ್ಷಣೆಗೂ ಮೊದಲು ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದರೆ, ೨ನೇ ತಂಡ ಬರ ಪೀಡಿತ ಮಂಡ್ಯ ಜಿಲ್ಲೆಗೆ ಭೇಟಿ ನೀಡಿ ಬರ ಪರಿಸ್ಥಿತಿಯ ವೀಕ್ಷಣೆ ನಡೆಸಿದೆ.
ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿ ಡಾ. ನವೀನ್‌ಕುಮಾರ್ ಜೈನ್ ನೇತೃತ್ವದ ಅಧಿಕಾರಿಗಳ ತಂಡ ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯಕ್ಕೆ ಭೇಟಿ ನೀಡಿ ನೀರಿನ ಸಂಗ್ರಹದ ಬಗ್ಗೆ ಮಾಹಿತಿ ಪಡೆದುಕೊಂಡಿತು.
ಹಾಗೆಯೇ ಮಂಡ್ಯ ಜಿಲ್ಲೆಯ ಹಲವು ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯ ನೈತ ಸ್ಥಿತಿಗತಿಯ ಮಾಹಿತಿಯನ್ನು ಕಲೆ ಹಾಕಿತು.
ಕೆಆರ್‌ಎಸ್ ಜಲಾಶಯದ ವೀಕ್ಷಣೆ ಸಂದರ್ಭದಲ್ಲಿ ಜಲಾಶಯದ ಪ್ರಸ್ತುತ ನೀರಿನ ಮಟ್ಟ, ಒಳ ಹರಿವು ಹಾಗೂ ಹೊರ ಹರಿವು ಎಲ್ಲದರ ಬಗ್ಗೆಯೂ ಮಾಹಿತಿಯನ್ನು ಕೇಂದ್ರ ಬರ ಅಧ್ಯಯನ ತಂಡ ಪಡೆದುಕೊಂಡಿತು.
ಇದಾದ ಬಳಿಕ ಬರದಿಂದ ಸಂಕಷ್ಟದಲ್ಲಿರುವ ರೈತರ ಅಹವಾಲನ್ನು ಆಲಿಸಿ, ಬರ ಪರಿಸ್ಥಿತಿಯ ಬಗ್ಗೆ ಸ್ಥಳೀಯರಿಂದ ಮಾಹಿತಿಯನ್ನು ಪಡೆದುಕೊಂಡಿತು.























