Home ಜಿಲ್ಲೆ ನಾಯಿ ಕಡಿತವನ್ನು ನಿರ್ಲಕ್ಷಿಸದೆ ತಕ್ಷಣ ಚಿಕಿತ್ಸೆ ಪಡೆಯಿರಿ:ಸಂಗನಗೌಡ ಬಿರಾದಾರ

ನಾಯಿ ಕಡಿತವನ್ನು ನಿರ್ಲಕ್ಷಿಸದೆ ತಕ್ಷಣ ಚಿಕಿತ್ಸೆ ಪಡೆಯಿರಿ:ಸಂಗನಗೌಡ ಬಿರಾದಾರ

ಮುದ್ದೇಬಿಹಾಳ: ನಾಯಿ ಕಡಿತದಿಂದ ಹರಡುವ ರೇಬೀಸ್ ರೋಗದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯಿತ ವಿಜಯಪುರ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಮುದ್ದೇಬಿಹಾಳ ಇವರ ಆಶ್ರಯದಲ್ಲಿ ಪಟ್ಟಣದ ಪಶು ಆಸ್ಪತ್ರೆಯ ಆವರಣದಲ್ಲಿ ಸೋಮವಾರ ಹುಚ್ಚುನಾಯಿ(ರೇಬೀಸ್) ರೋಗದ ಉಚಿತ ಲಸಿಕಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಈ ಉಚಿತ ಲಸಿಕಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ತಾಲೂಕು ಪಂಚಾಯಿತ ಕಾರ್ಯನಿರ್ವಾಹಕ ಅಧಿಕಾರಿ ಸಂಗನಗೌಡ ಬಿರಾದಾರ, ನಾಯಿ ಕಡಿತದಿಂದ ಬರುವÀ ರೇಬೀಸ್ ರೋಗದ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ರೋಗವನ್ನು ನಿರ್ಲಕ್ಷಿಸಿದರೆ ಜೀವ ಹೋಗುವ ಸಾಧ್ಯತೆಯಿದೆ ಮುದ್ದೇಬಿಹಾಳ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ನಾಯಿ ಕಡಿತದ ಬಗ್ಗೆ ಇನ್ನೂ ಕೆಲವು ಮೂಢನಂಬಿಕೆಗಳು ಕಂಡುಬರುತ್ತಿವೆ ನಾಯಿ ಕಡಿದಾಗ ದಾರ ಹಾಕಿಸುವಂತಹ ಪದ್ಧತಿಗಳಿವೆ ಅಂತವುಗಳನ್ನು ಬಿಟ್ಟು ತಕ್ಷಣ ಆಸ್ಪತ್ರೆಗೆ ಹೋಗಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ವೈದ್ಯರ ಸೂಕ್ತ ಸಲಹೆ ಸÀೂಚನೆಗಳನ್ನು ಪಾಲಿಸಿ ಲಸಿಕೆಗಳನ್ನು ಪಡೆಯಬೇಕೆಂದರು.
ಆಡಳಿತ ಮುಖ್ಯ ಪಶುವೈದ್ಯಾಧಿಕಾರಿ ಡಾ. ಶಿವಾನಂದ ಮೇಟಿ ಹಾಗೂ ಮುಖ್ಯ ಪಶುವೈದ್ಯಾಧಿಕಾರಿ ಡಾ. ಸುರೇಶ ಭಜಂತ್ರಿ ಮಾತನಾಡಿ, ಈಗಾಗಲೇ ಶಾಲೆಗಳಲ್ಲಿ ರೇಬೀಸ್ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಈ ಶಿಬಿರದ ಮೂಲಕ ಸಾಕು ನಾಯಿಗಳಿಗೆ ಉಚಿತವಾಗಿ ರೇಬೀಸ್ ಲಸಿಕೆ ಹಾಕಲಾಗುತ್ತಿದೆ. ತಾಲೂಕಿನಲ್ಲಿಯೇ ರೇಬೀಸ್‍ನಿಂದ ಮೂವರು ಮೃತಪಟ್ಟಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ 28 ಸಾವಿರ ಜನರು ನಾಯಿ ಕಡಿತಕ್ಕೆ ಒಳಗಾಗಿದ್ದು, ಮುದ್ದೇಬಿಹಾಳ ತಾಲೂಕಿನಲ್ಲಿ ಸುಮಾರು 2 ಸಾವಿರ ಜನರು ನಾಯಿ ಕಡಿತಕ್ಕೊಳಗಾಗಿ ಲಸಿಕೆ ಪಡೆದಿದ್ದಾರೆಂದರು. ಸಾಕು ನಾಯಿಗಳಿಗೆ ವರ್ಷದಲ್ಲಿ ಎರಡು ಬಾರಿ ರೇಬೀಸ್ ಲಸಿಕೆ ಹಾಕಿಸುವದರಿಂದ ರೇಬಿಸ್ ರೋಗ ತಡೆಗಟ್ಟಬಹುದು ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಗುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್. ಬಡದಾನಿ ಮಾತನಾಡಿದರು.
ಪಶುವೈದ್ಯಾಧಿಕಾರಿ ಡಾ. ಪ್ರಶಾಂತ ಕಡಿ ರೇಬೀಸ್ ರೋಗದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು ರೇಬೀಸ್ ಸೋಂಕಿತ ನಾಯಿಗಳಲ್ಲಿ ಸ್ವಭಾವದಲ್ಲಿ ಏಕಾಏಕಿ ಬದಲಾವಣೆ ಕಂಡುಬರಬಹುದು ಶಾಂತವಾಗಿರುವ ನಾಯಿ ಅತಿಯಾಗಿ ಆಕ್ರಮಣಕಾರಿಯಾಗುವುದು ಅಥವಾ ಅಸಹಜವಾಗಿ ಭಯಪಡುವುದು ಕಾರಣವಿಲ್ಲದೆ ಜನರು ಇತರ ಪ್ರಾಣಿಗಳು ಅಥವಾ ವಸ್ತುಗಳನ್ನು ಕಚ್ಚಲು ಪ್ರಯತ್ನಿಸುವುದು, ಅತಿಯಾಗಿ ಜೊಲ್ಲು ಸುರಿಸುವುದು, ಬಾಯಿಯಲ್ಲಿ ನೊರೆ ಕಾಣಿಸಿಕೊಳ್ಳುವುದು, ಆಹಾರ ಅಥವಾ ನೀರು ನುಂಗಲು ಕಷ್ಟವಾಗುವುದು, ಧ್ವನಿಯಲ್ಲಿ ಬದಲಾವಣೆ ಅಥವಾ ವಿಚಿತ್ರವಾಗಿ ಬೊಗಳುವುದು, ಬೆಳಕು, ಶಬ್ದ ಅಥವಾ ಸ್ಪರ್ಶಕ್ಕೆ ಅಸಹಜ ಪ್ರತಿಕ್ರಿಯೆ ನೀಡುವುದು, ದಿಕ್ಕು ತಪ್ಪಿ ಓಡಾಡುವುದು ಹಾಗೂ ಅಸ್ಥಿರವಾಗಿ ನಡೆಯುವುದು ಮುಂತಾದ ಲಕ್ಷಣಗಳು ಕಂಡುಬರಬಹುದು. ನಂತರ ದೇಹದ ವಿವಿಧ ಭಾಗಗಳಲ್ಲಿ ಪಾರ್ಶ್ವವಾಯು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವಿವರಿಸಿದರು.
ಶಾಲಾ ವಿದ್ಯಾರ್ಥಿಗಳಲ್ಲಿ ರೇಬೀಸ್ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ರೇಬೀಸ್ ಜಾಗೃತಿ ಕುರಿತು ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದೇ ಸಮಯದಲ್ಲಿ ಸಾಕು ನಾಯಿಗಳ ಪಾಲಕರಾದ ಪರಶುರಾಮ ನಾಲತವಾಡ, ರಾಮಣ್ಣ ನಾಯಕಮಕ್ಕಳ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಪಶುಪಾಲನಾ ಇಲಾಖೆಯಿಂದ ಹಮ್ಮಿಕೊಂಡಿರುವ ಉಚಿತ ಲಸಿಕಾ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮ ಸಾರ್ವಜನಿಕರಿಗೆ ಬಹಳ ಉಪಯುಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಡಾ. ಬಸವರಾಜ ಸಜ್ಜನ, ಡಾ. ಸಂಗನಗೌಡ ಬಿರಾದಾರ, ಡಾ. ಮಲ್ಲಿಕಾರ್ಜುನ ಹಿರೇಮಠ, ಡಾ. ಬಸವರಾಜ ಚಿತ್ತರಗಿ, ಡಾ. ಸುಚಿತ್ ಪಾಟೀಲ್, ಡಾ. ರೇಖಾ ಸೇರಿದಂತೆ ಪಶುವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳಾದ ಎಸ್.ಎನ್. ಬಿರಾದಾರ, ವಿಶಾಲ ಪಾಟೀಲ್, ಮಂಜುಳಾ ಕರಿಗೌಡರ, ಮಲ್ಲಯ್ಯ ಹಿರೇಮಠ, ಶ್ರೀಕಾಂತ್ ಗೌಡರ, ಮೌಲಾಸಾಬ ವಾಲಿಕಾರ, ಐ.ಎಸ್. ಮಾಗಿ, ಲಕ್ಷ್ಮೀಕಾಂತ ದಳವಾಯಿ, ಅಣ್ಣಯ್ಯ ಭಜಂತ್ರಿ ಸೇರಿದಂತೆ ಪಶು ಸಖಿಯರು ಹಾಗೂ ಮೈತ್ರಿ ಕಾರ್ಯಪಾಲಕರು ಭಾಗವಹಿಸಿದ್ದರು.
ಮಂಜುಳಾ ಕರಿಗೌಡರ ಬಳಗ ಪ್ರಾರ್ಥಿಸಿದರು. ಡಾ. ಮಲ್ಲಿಕಾರ್ಜುನ ಹಿರೇಮಠ ಸ್ವಾಗತಿಸಿದರು. ಡಾ. ಬಸವರಾಜ ಸಜ್ಜನ ನಿರೂಪಿಸಿದರು. ಡಾ. ಸಂಗನಗೌಡ ಬಿರಾದಾರ ವಂದಿಸಿದರು.