Home ಜಿಲ್ಲೆ ರೇಜಿಂತಲ್ ಶ್ರೀ ಸಿದ್ಧಿ ವಿನಾಯಕನ ಸನ್ನಿಧಿಯಲ್ಲಿ ಭಕ್ತಿಭಾವದ ಅಂಗಾರಿಕ ಸಂಕಷ್ಟಿ ಚತುರ್ಥಿದಕ್ಷಿಣಾಭಿಮುಖಿ ಸ್ವಯಂಭೂ ಗಣಪನ ದರ್ಶನ...

ರೇಜಿಂತಲ್ ಶ್ರೀ ಸಿದ್ಧಿ ವಿನಾಯಕನ ಸನ್ನಿಧಿಯಲ್ಲಿ ಭಕ್ತಿಭಾವದ ಅಂಗಾರಿಕ ಸಂಕಷ್ಟಿ ಚತುರ್ಥಿದಕ್ಷಿಣಾಭಿಮುಖಿ ಸ್ವಯಂಭೂ ಗಣಪನ ದರ್ಶನ ಪಡೆದ ಭಕ್ತಸಾಗರ

ಬೀದರ್: ಸೆ. 29:ತೆಲಂಗಾಣದ ಪ್ರಸಿದ್ಧ ಪುಣ್ಯಕ್ಷೇತ್ರವಾದ ರೇಜಿಂತಲ್ ಗ್ರಾಮದ ಶ್ರೀ ಸ್ವಯಂಭೂ ಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ‘ಅಂಗಾರಿಕ ಸಂಕಷ್ಟಿ ಚತುರ್ಥಿ’ಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ವಿಘ್ನ ನಿವಾರಕನ ದರ್ಶನ ಪಡೆದು ಪುನೀತರಾಗಲು ಸೋಮವಾರ ಮಧ್ಯರಾತ್ರಿಯಿಂದಲೇ ಸಾವಿರಾರು ಭಕ್ತರು ದೇವಾಲಯಕ್ಕೆ ಹರಿದು ಬಂದರು.

ಕ್ಷೇತ್ರದ ವಿಶೇಷತೆ: ಬೆಳೆಯುವ ಸ್ವಯಂಭೂ ಗಣಪ

ರೇಜಿಂತಲ್ ಸಿದ್ಧಿ ವಿನಾಯಕ ದೇವಸ್ಥಾನವು ಭಕ್ತರ ಪಾಲಿನ ಕಾಮಧೇನುವಾಗಿದೆ. ಇಲ್ಲಿನ ಗಣಪತಿ ಮೂರ್ತಿಯು ‘ಸ್ವಯಂಭೂ’ (ತಾನಾಗಿಯೇ ಉದ್ಭವಿಸಿದ ಮೂರ್ತಿ) ಎಂಬುದು ಭಕ್ತರ ನಂಬಿಕೆ. ಸಾಮಾನ್ಯವಾಗಿ ಗಣಪತಿ ದೇವಾಲಯಗಳು ಪೂರ್ವಾಭಿಮುಖ ಅಥವಾ ಉತ್ತರಾಭಿಮುಖವಾಗಿರುತ್ತವೆ; ಆದರೆ ಇಲ್ಲಿನ ಗಣಪನು ದಕ್ಷಿಣಾಭಿಮುಖಿಯಾಗಿರುವುದು ಅತ್ಯಂತ ವಿಶಿಷ್ಟವಾಗಿದೆ. ಅಷ್ಟೇ ಅಲ್ಲದೆ, ಗರ್ಭಗುಡಿಯಲ್ಲಿರುವ ಈ ಮೂರ್ತಿಯು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ ಎಂಬ ಸ್ಥಳೀಯರ ಗಾಢ ನಂಬಿಕೆ ಈ ಕ್ಷೇತ್ರದ ಮಹಿಮೆಯನ್ನು ಇನ್ನಷ್ಟು ಹೆಚ್ಚಿಸಿದೆ. ಈ ಪವಾಡಸದೃಶ ವಿನಾಯಕನ ಆಶೀರ್ವಾದ ಪಡೆಯಲು ಕೇವಲ ತೆಲಂಗಾಣದಿಂದ ಮಾತ್ರವಲ್ಲದೆ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಅಂಗಾರಿಕ ಚತುರ್ಥಿಯ ಮಹತ್ವ

ಹಿಂದೂ ಪಂಚಾಂಗದ ಪ್ರಕಾರ, ಪ್ರತಿ ತಿಂಗಳ ಸಂಕಷ್ಟಿ ಚತುರ್ಥಿಗೂ ವಿಶೇಷ ಮಹತ್ವವಿದೆ. ಆದರೆ, ಮಂಗಳವಾರದಂದು ಬರುವ ಚತುರ್ಥಿಯನ್ನು “ಅಂಗಾರಿಕ ಸಂಕಷ್ಟಿ ಚತುರ್ಥಿ” ಎಂದು ಕರೆಯಲಾಗುತ್ತದೆ. 2026ನೇ ಸಾಲಿನ ಸೆಪ್ಟೆಂಬರ್ 29ರ ಮಂಗಳವಾರ ಈ ಪುಣ್ಯದಿನ ಬಂದೊದಗಿದ್ದು, ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಗಣಪತಿಗೆ ವಿಶೇಷ ಅಭಿಷೇಕ, ಅಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಿತು.

ಮೊಳಗಿದ ಜಯಘೋಷ

ಈ ಪವಿತ್ರ ದಿನದಂದು ಭಕ್ತರು ಸರದಿಯ ಸಾಲಿನಲ್ಲಿ ನಿಂತು ಶ್ರದ್ಧೆಯಿಂದ ಶ್ರೀ ಗಣಪತಿಯನ್ನು ಪೂಜಿಸಿದರು. “ನಮ್ಮ ಜೀವನದ ವಿಘ್ನಗಳು ದೂರವಾಗಲಿ, ಕುಟುಂಬದಲ್ಲಿ ಸುಖ-ಶಾಂತಿ ನೆಲೆಸಲಿ, ಉತ್ತಮ ಆರೋಗ್ಯ ಮತ್ತು ಸಮೃದ್ಧಿ ದೊರಕಲಿ” ಎಂದು ಭಕ್ತಾದಿಗಳು ಪ್ರಾರ್ಥಿಸಿದರು.

ದೇವಾಲಯದ ಆವರಣದಲ್ಲಿ “ಗಣಪತಿ ಬಪ್ಪಾ ಮೋರಿಯಾ”, “ಶ್ರೀ ಸಿದ್ಧಿ ವಿನಾಯಕ ಸ್ವಾಮಿಗೆ ಜಯ”, “ಮಂಗಳಮೂರ್ತಿ ಶ್ರೀ ಗಣೇಶನಿಗೆ ಜಯ” ಎಂಬ ಮಂತ್ರಘೋಷಗಳು ಮೊಳಗಿ, ಇಡೀ ವಾತಾವರಣ ಭಕ್ತಿಮಯವಾಗಿತ್ತು. ಸಿದ್ಧಿ ವಿನಾಯಕ ಸ್ವಾಮಿಯು ನಾಡಿನೆಲ್ಲೆಡೆ ಸಿದ್ಧಿ, ಬುದ್ಧಿ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಅರ್ಚಕರು ಆಶೀರ್ವಚನ ನೀಡಿದರು.

ಶ್ರೀ ಸಿದ್ಧಿ ವಿನಾಯಕ ಟ್ರಸ್ಟ್ ಅಧ್ಯಕ್ಷ ಅಶೋಕ ರೇಜಂತಲ ಈ ಸಂದರ್ಭದಲ್ಲಿ ಮಾತನಾಡಿ, ಶ್ರೀ ಸಿದ್ಧಿ ವಿನಾಯಕ ಮೂರ್ತಿ ಇದು ಸ್ವಯಂ ಭೂ ಮೂರ್ತಿಯಾಗಿದೆ. ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ ದಿಂದ ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರ ತಡ ರಾತ್ರಿ ವರೆಗೆ ಸುಮಾರು 1 ಲಕ್ಷ ಜನ ದರುಶನ ಮಾಡುತ್ತಾರೆ. ಬೆಳಗ್ಗೆ 5 ಗಂಟೆಯಿಂದ ಸಾಯಂಕಾಲ 6 ಗಂಟೆ ವರೆಗೆ ಪುಳಿ ವಗರೆ, ಶಬದಾಣಿ ಪಾಯಸ ವಿತರಿಸಲಾಗುತ್ತದೆ. ಸಂಜೆ 7 ಗಂಟೆಯಿಂದ ರಾತ್ರಿ 12 ಗಂಟೆ ವರೆಗೆ ಹುಗ್ಗಿ, ಅನ್ನ, ಸಾರು ವಿತರಿಸಲಾಗುತ್ತದೆ. ಸುಮಾರು 25 ಕ್ವಿಂಟಲ್ ಅಕ್ಕಿ ಕುದಿಸಲಾಗುತ್ತದೆ. ಭಕ್ತಾದಿಗಳಿಗೆ ಬಿಸಿಲಿನ ತಾಪ ಆಗದಂತೆ ಟೆಂಟ್, ತಗಡಿನ ಸೆಡ್ ಹಾಕಲಾಗಿದೆ. ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು, ಪ್ರಸಾದ ವ್ಯವಸ್ಥೆ ನಿರಂತರವಾಗಿ ನಡೆಯುತ್ತಿದೆ. ದೂರದ ಭಕ್ತಾದಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಒಟ್ಟಾರೆ ಸಂಕಷ್ಟದಲ್ಲಿರುವ ಭಕ್ತರ ವಿಘ್ನ ನಿವಾರಣೆ ಮಾಡಲು ಸಿದ್ಧಿ ಬಿನಾಯಕ ದರ್ಶನ ನೀಡುತ್ತಾನೆ ಎಂದರು.

ಟ್ರಸ್ಟ್ ಗೌರವಾಧ್ಯಕ್ಷ ಅಲ್ಲಾಡಿ ವೀರೇಶಂ ಹಾಗೂ ಖ್ಯಾತ ಹಿಂದುಸ್ಥಾನಿ ಸಂಗೀತಗಾರ ರಾಮಲು ಗಾದಗಿ ಮಾತನಾಡಿದರು.

ಟ್ರಸ್ಟಿಗಳಾದ ದಿಗಂಬರ ಫೂಲಾ, ಅಲ್ಲಾಡಿ ನರಸಿಂಹಲು, ಎನ್ ಆರ್ ರಾಜೇಶ್ವರ, ಕಲ್ವಾ ರಾಜೇಶ್ವರ, ರವಿ ಕೋಬಾಜಿ ಸೇರಿದಂತೆ ಟ್ರಸ್ಟ್ ನ ಇತರೆ ಪದಾಧಿಕಾರಿಗಳು, ಸದಸ್ಯರು ಹಾಗೂ ದೇವಾಲಯದ ಅರ್ಚಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.