
ಕೊರಟಗೆರೆ, ಆ. ೨೨- ಹಿಂದುಳಿದ ಸಮುದಾಯಗಳ ಅಭಿವೃದ್ದಿ ಹಾಗೂ ದೇಶದಲ್ಲಿ ಮೊಲದ ಭಾರಿಗೆ ಭೂ ಸುಧಾರಣೆ ಕಾಯ್ದೆ ಜಾರಿ ಮೂಲಕ ಉಳುವವನೇ ಭೂ ಒಡೆಯ ಎನ್ನುವ ಕಾನೂನು ಜಾರಿಗೆ ತಂದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸು ಸಾಮಾಜಿಕ ನ್ಯಾಯದ ಹರಿಕಾರರು ಎಂದು ತಹಶೀಲ್ದಾರ್ ಕೆ. ಮಂಜುನಾಥ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ದೇವರಾಜು ಅರಸು ರವರ ೧೧೧ನೇ ಜನ್ಮ ದಿನಾಚರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಿ. ದೇವರಾಜು ಅರಸು ರವರು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಡ ಜನರ, ದೀನ ದಲಿತ ಶ್ರೇಯೋಭಿವೃದ್ದಿಗಾಗಿ ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸಿ ಭೂಮಿಯಲ್ಲಿ ಉಳುವವನೇ ಒಡೆಯ ಎನ್ನುವ ಕಾಯ್ದೆ ಜಾರಿಯಿಂದ ರಾಜ್ಯದಲ್ಲಿ ಸಾಕಷ್ಟು ಬಡ ಜನರು ಭೂಮಾಲೀಕರಾದರು ಹಾಗೂ ಮಲ ಹೊರುವ ಪದ್ದತಿ ನಿರ್ಮೂಲನೆ ಮಾಡಿ ಪೌರ ಕಾರ್ಮಿಕರೆಂದು ಕರೆಯಲು ಆದೇಶ ಹೊರಡಿಸಿದರು ಎಂದರು.
ಜೀತ ಪದ್ದತಿ ರದ್ದುಪಡಿಸಿ ವಸತಿ ಯೋಜನೆಯನ್ನು ಮತ್ತು ಪಿಂಚಣಿ ಯೋಜನೆಯನ್ನು ಜಾರಿಗೆ ತಂದು ಸಾಕಷ್ಟು ಬಡ ಜನರಿಗೆ ಅನುಕೂಲ ಮಾಡಿಕೊಟ್ಟ ಅವರು ಯಾವುದೇ ಜಾತಿ ಧರ್ಮಕ್ಕೆ ಮನ್ನಣೆ ನೀಡದೆ ಬಡವರಿಗೆ ಸೂರು, ನೀರು, ಶಿಕ್ಷಣ, ಆರೊಗ್ಯ ಸೇರಿದಂತೆ ಹಿಂದುಳಿದ ವರ್ಗಗಳ ಜತೆಗೆ ಎಲ್ಲಾ ಸಮುದಾಯಗಳ ಅಭಿವೃಧ್ದಿಗೆ ಮುಂದಾದ ಧೀಮಂತನಾಯಕ ಎಂದು ತಿಳಿಸಿದ ಅವರು, ಅರಸು ರವರು ಸಾಮಾಜಿಕ ಸಮಾನತೆ ಶೋಷಿತ ಹಾಗೂ ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಅವರ ಕೈಗೊಂಡ ಜನಪರ ಕಾರ್ಯಗಳು ಮತ್ತು ನೀಡಿದ ಕೊಡುಗೆಗಳು ಸದಾ ಸ್ಮರಣೀಯ, ಅವರ ಆದರ್ಶಗಳು ಹಾಗೂ ಚಿಂತನೆಗಳು ಎಲ್ಲರಿಗೂ ಅದರ್ಶ ಎಂದರು.
ಕಾರ್ಯಕ್ರಮದಲ್ಲಿ ಪುರಸಭಾ ಮುಖ್ಯಾಧಿಕಾರಿ ಉಮೇಶ್, ಉಪನ್ಯಾಸಕ ಹನುಮಂತನಾಯಕ್, ಪಶುಸಂಗೋಪನಾ ಇಲಾಖೆಯ ಸುಧಾಕರ್, ಬಿ.ಆರ್.ಸಿ. ರುದ್ರೇಶ್ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರ ಬಗ್ಗೆ ಉಪನ್ಯಾಸ ನೀಡಿ ನಾಡಿನ ಅಭಿವೃದ್ದಿ ಮತ್ತು ಸಾಮಾಜಿಕ ಸುಧಾರಣೆಗೆ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಕೊಡುಗೆ ಅಪಾರ ಅಂದಿನ ಮೈಸೂರು ರಾಜ್ಯವನ್ನು ೧೯೭೩ ರ ನವೆಂಬರ್ ೧ ರಂದು ಕರ್ನಾಟಕ ಎಂದು ಮರುನಾಮಕರಣ ಮಾಡಿದ ಹಗ್ಗಳಿಕೆ ದೇವರಾಜು ಅರಸು ಅವರಿಗೆ ಸಲ್ಲುತ್ತದೆ. ಕನ್ನಡ ನಾಡಿನ ಏಕೀಕರಣ, ಸಾಮಾಜಿಕ ಕ್ರಾಂತಿ ಮತ್ತು ನಾಡಿನ ಆಸ್ಮಿತೆಗೆ ಅವರು ನೀಡಿದ ಕೊಡುಗೆ ಚಿರಸ್ಮರಣೀಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ೨೦೨೫-೨೬ ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರಿಕ್ಷೇಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ದೇವರಾಜ ಅರಸು ರವರ ೧೧೧ನೇ ಜನ್ಮ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ದೇಗಳ ವಿಜೇತರಿಗೆ ಬಹುಮಾನ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅಪೂರ್ವ, ಸಮಾಜ ಕಲ್ಯಾಣಾಧಿಕಾರಿ ಅನಂತರಾಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಈರಪ್ಪನಾಯಕ್, ಬಿ.ಇ.ಓ ಪೈರೋಜ್‌ಬೇಗಂ, ತಾಲ್ಲೂಕು ವೈದ್ಯಾಧಿಕಾರಿ ಡಾ. ಜೋಸ್ನಾರೆಡ್ಡಿ, ತಾ.ಪಂ. ಮಧುಸೂಧನ್, ರವಿಕುಮಾರ್, ವಿ. ಶೃತಿ, ದಾಡಿ ವೆಂಕಟೇಶ್ ಮತ್ತಿತರರು ಪಾಲ್ಗೊಂಡಿದ್ದರು.


































