
ತುಮಕೂರು, ಸೆ. ೩- ರಾಜ್ಯ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ ಬರ ಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ತಿಪಟೂರು ತಾಲ್ಲೂಕನ್ನು ಪರಿಗಣಿಸದೇ ಇರುವುದು ಅತ್ಯಂತ ಖಂಡನೀಯ, ಕೂಡಲೇ ಸೇರ್ಪಡೆ ಮಾಡಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾಅಧ್ಯಕ್ಷ ಸತ್ಯಮಂಗಲ ಜಗದೀಶ್ ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳು ತೀವ್ರವಾಗಿ ಹಿನ್ನಡೆ ಕಂಡಿವೆ. ಜಿಲ್ಲೆಯಲ್ಲಿ ಸುಮಾರು ೩ ಲಕ್ಷ ಹೆಕ್ಟೇರ್‌ಗಳಷ್ಟು ಬಿತ್ತನೆ ಭೂಮಿ ಇದ್ದರೂ, ಮಳೆಯ ಅಭಾವದಿಂದ ಕೇವಲ ಸುಮಾರು ೮೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲು ಸಾಧ್ಯವಾಗಿದೆ. ಬಿತ್ತನೆ ಮಾಡಿರುವ ಪ್ರದೇಶದಲ್ಲಿಯೂ ಮಳೆಯ ಕೊರತೆಯಿಂದಾಗಿ ಬಹಳಷ್ಟು ಬೆಳೆಗಳು ಸಮರ್ಪಕವಾಗಿ ಮೊಳಕೆಯೊಡೆಯದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಕೈಕೊಟ್ಟಿರುವುದರಿಂದ ರೈತರು ಬಿತ್ತನೆಗಾಗಿ ಮಾಡಿರುವ ಖರ್ಚು, ಬೀಜ, ಗೊಬ್ಬರ, ಕೃಷಿ ಚಟುವಟಿಕೆಗಳಿಗೆ ಮಾಡಿದ ಹೂಡಿಕೆ ಸೇರಿದಂತೆ ಎಲ್ಲವನ್ನೂ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಒಂದು ಕಡೆ ಮಳೆ ಇಲ್ಲದೆ ಬೆಳೆ ಬೆಳೆಯುತ್ತಿಲ್ಲ; ಮತ್ತೊಂದೆಡೆ ಸಾಲ ಮಾಡಿ ಕೃಷಿ ಮಾಡಿರುವ ರೈತರಿಗೆ ಮುಂದಿನ ದಿನಗಳಲ್ಲಿ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಾಗಿದೆ. ಇಂತಹ ಗಂಭೀರ ಬರ ಪರಿಸ್ಥಿತಿ ಜಿಲ್ಲೆಯ ಹಲವು ಭಾಗಗಳಲ್ಲಿ ಕಂಡು ಬರುತ್ತಿದ್ದರೂ, ಕೃಷಿ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ರೈತರ ಸಂಕಷ್ಟಕ್ಕೆ ಅಗತ್ಯವಾದ ಪರಿಹಾರ ಕ್ರಮಗಳನ್ನು ಕೈಗೊಳ್ಳದೇ ಇರುವುದು ಅತ್ಯಂತ ನೋವಿನ ಸಂಗತಿ ಎಂದು ಹೇಳಿದ್ದಾರೆ.
ತಿಪಟೂರು ತಾಲ್ಲೂಕನ್ನು ಬರ ಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರಿಸುವ ಕುರಿತು ಸರ್ಕಾರ ಕೂಡಲೇ ಮರುಪರಿಶೀಲನೆ ನಡೆಸಬೇಕು. ಮಳೆ ಕೊರತೆ, ಬಿತ್ತನೆ ಪ್ರಮಾಣ, ಬೆಳೆಗಳ ಮೊಳಕೆ ಹಾಗೂ ಹಾನಿಯ ಪ್ರಮಾಣವನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ವಾಸ್ತವ ಪರಿಸ್ಥಿತಿಯ ಆಧಾರದ ಮೇಲೆ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು.ತಿಪಟೂರು ಸೇರಿದಂತೆ ಮಳೆ ಕೊರತೆಯಿಂದ ತೀವ್ರವಾಗಿ ಬಾಧಿತವಾಗಿರುವ ಪ್ರದೇಶಗಳಲ್ಲಿ ಸಮಗ್ರ ಸಮೀಕ್ಷೆ ನಡೆಸಿ, ಬರ ಪರಿಸ್ಥಿತಿಯನ್ನು ಪುನರ್ ಪರಿಶೀಲಿಸಬೇಕು. ಬೆಳೆ ನಷ್ಟಕ್ಕೊಳಗಾದ ರೈತರಿಗೆ ನಿಯಮಾನುಸಾರ ಪರಿಹಾರ ನೀಡಬೇಕು. ರೈತರ ಸಂಕಷ್ಟವನ್ನು ನಿರ್ಲಕ್ಷಿಸಿ ಕೇವಲ ಕಾಗದದ ಮೇಲಿನ ಅಂಕಿ-ಅಂಶಗಳ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಬಾರದು. ಹೊಲದಲ್ಲಿರುವ ರೈತನ ನೋವನ್ನು ಅರಿತು, ವಾಸ್ತವ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಸತ್ಯಮಂಗಲ ಜಗದೀಶ್ ಒತ್ತಾಯಿಸಿದ್ದಾರೆ.


































