
ಬೀದರ್: ರಾಜ್ಯದ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬರುವ ಡಿಸೆಂಬರನಲ್ಲಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಸಂಘದ ರಾಜ್ಯ ಅಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಹೇಳಿದರು.
ಬಿಜಾಪುರದಲ್ಲಿ ಮಂಗಳವಾರ ನಡೆದ ಕರ್ನಾಟಕ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಸಂಘದ ರಾಜ್ಯ ಮಟ್ಟದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.
ಹೋರಾಟಕ್ಕೆ ಮುಂಚೆ ಮುಖ್ಯಮಂತ್ರಿ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರನ್ನು ನಿಯೋಗದಲ್ಲಿ ಭೇಟಿಯಾಗಿ ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.
1995 ನಂತರದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಬಡ ಮಕ್ಕಳಿಗೆ ವರವಾಗಿದ್ದ ಆರ್.ಟಿ.ಇ ಮರು ಜಾರಿಗೊಳಿಸಬೇಕು. ಪುಟ್ಟಣ್ಣ ಅವರ ಅಧ್ಯಕ್ಷತೆಯ ಸದನ ಸಮಿತಿ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕು. ಕನ್ನಡ ಶಾಲೆಗಳಿಗೆ ಕರ ವಿನಾಯಿತಿ ನೀಡಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ ಎಂದು ಹೇಳಿದರು.
ಹೋರಾಟದ ಪೂರ್ವದಲ್ಲಿ ರಾಜ್ಯದ 16 ಜಿಲ್ಲೆಗಳ ಸಂಘದ ಜಿಲ್ಲಾ ಘಟಕಗಳನ್ನು ಬಲಪಡಿಸಲು ನಿರ್ಣಯಿಸಿದ್ದು, ರಾಜ್ಯ ಪದಾಧಿಕಾರಿಗಳಿಗೆ ವಿವಿಧ ಜಿಲ್ಲಾ ಘಟಕಗಳ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿಸಿದರು.
ಕೆ. ಗುರುನಾಥ ರೆಡ್ಡಿ, ರಾಜೇಂದ್ರ ಯರನಾಳೆ(ಬೀದರ್, ಕಲಬುರಗಿ), ಶಾಂತರೆಡ್ಡಿ, ತಿಪ್ಪಣ್ಣ (ಯಾದಗಿರ, ರಾಯಚೂರು), ಎಂ. ಮೌಲಾಲಿ, ರಾಮಮೋಹನ್ (ಕೊಪ್ಪಳ, ಬಳ್ಳಾರಿ), ಜಾವೇದ್(ವಿಜಯನಗರ), ಮಲ್ಲಿಕಾರ್ಜುನ ಲೋಣಿ, ಕಾಶಿಬಾಯಿ ವಾಲೆಕರ್, ದಾನಮ್ಮ (ಬಿಜಾಪುರ, ಬಾಗಲಕೋಟೆ), ಅನಿಲ್ ಜಾಧವ್ (ಹುಬ್ಬಳ್ಳಿ, ಧಾರವಾಡ, ಗದಗ್), ಎಂ.ಡಿ. ನದಾಫ್, ಮಹೇಶ್ (ಬೆಳಗಾವಿ, ಹಾವೇರಿ, ದಾವಣಗೆರೆ) ಅವರಿಗೆ ಜಿಲ್ಲಾ ಘಟಕಗಳ ಜವಾಬ್ದಾರಿ ಕೊಡಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಗೌರವ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಸಂಘಟಿತವಾಗಿ ಹೋರಾಟ ನಡೆಸಿದ್ದಲ್ಲಿ ಮಾತ್ರ ಬೇಡಿಕೆಗಳ ಈಡೇರಿಕೆ ಸಾಧ್ಯವಿದೆ ಎಂದು ಹೇಳಿದರು.
ಸಂಘದ ರಾಜ್ಯ ಉಪಾಧ್ಯಕ್ಷರಾದ ಎಂ. ಮೌಲಾಲಿ, ಕಾಶಿಬಾಯಿ ವಾಲೆಕರ್, ಪ್ರಧಾನ ಕಾರ್ಯದರ್ಶಿ
ಕೆ. ಗುರುನಾಥ ರೆಡ್ಡಿ, ಸಹ ಕಾರ್ಯದರ್ಶಿ ಶಾಂತರೆಡ್ಡಿ ಯಾದಗಿರ, ಕಾರ್ಯಕಾರಿಣಿ ಸದಸ್ಯರಾದ ಅನಿಲ್ ಜಾಧವ್, ರಾಜೇಂದ್ರ ಯರನಾಳೆ, ಸಂಗನಗೌಡ, ಅರುಣ್ ಪೆÇಚಾ, ರಾಮಮೋಹನ್, ಮಲ್ಲೇಶಿ ಪವಾರ್, ತಿಪ್ಪಣ್ಣ ಶಹಾಪುರ, ಮಾಣಿಕಪ್ಪ ಗೋರನಾಳೆ, ಗುರುನಾಥ್ ದೇಶಮುಖ, ಸುರೇಶ್ ಕುಂಬಾರ್ ಮತ್ತಿತರರು ಇದ್ದರು.
ರಾಜ್ಯದ 15 ಜಿಲ್ಲೆಗಳ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಪ್ರಮುಖರು ಸೇರಿ 210 ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು.























