Home ಜಿಲ್ಲೆ ಕಲಬುರಗಿ ಸೂಕ್ತ ಘನತ್ಯಾಜ್ಯ ನಿರ್ವಹಣೆಯಿಂದ ಸುಂದರ ಕಲಬುರಗಿ ನಿರ್ಮಾಣ ಸಾಧ್ಯ

ಸೂಕ್ತ ಘನತ್ಯಾಜ್ಯ ನಿರ್ವಹಣೆಯಿಂದ ಸುಂದರ ಕಲಬುರಗಿ ನಿರ್ಮಾಣ ಸಾಧ್ಯ

ಕಲಬುರಗಿ,ಜು.28: ನಗರದಲ್ಲಿ ಪ್ರತಿದಿನವೂ ಉತ್ಪನ್ನವಾಗುವ ಘನ ತ್ಯಾಜ್ಯ ವಸ್ತುಗಳ ನಿರ್ವಹಣೆಯ ಬಗ್ಗೆ ಸೂಕ್ತವಾದ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಳ್ಳದೆ ಇರುವುದು, ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿ ಗಳಲ್ಲಿಯೇ ಸ್ವಚ್ಛತಾ ಕ್ರಮ ಅನುಸರಿಸಿ ಮಾದರಿ ಆಗದೆ ಇರುವುದು, ಅಲ್ಲದೆ ನಗರದ ನಿವಾಸಿಗಳು ಕಸ ವಿಂಗಡಣೆಯ ಕುರಿತು ಕಾಳಜಿ ತೋರದೆ ಇರುವುದರಿಂದ ದಿನದಿಂದ ದಿನಕ್ಕೆ ಕಲಬುರಗಿ ನಗರದಲ್ಲಿ ಪರಿಸರ ಮಾಲಿನ್ಯದ ತೀವ್ರತೆ ಹೆಚ್ಚಾಗುತ್ತಿದೆ ಎಂದು ಪರಿಸರವಾದಿ , ನಿವೃತ್ತ ಪ್ರಾಚಾರ್ಯ ಡಾ. ಶಂಕರಪ್ಪ ಹತ್ತಿ ಅವರು ಅಭಿಪ್ರಾಯ ಪಟ್ಟಿದ್ದಾರೆ. ಅವರು ಕಲಬುರಗಿಯ ಅಡ್ವೋಕೇಟ್ಸ್ ಕಾಲೋನಿಯ ಶ್ರೀ ಮಹಾಲಕ್ಷ್ಮಿ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮ ದಲ್ಲಿ ಉಪನ್ಯಾಸ ನೀಡಿದರು.
ಕಳೆದ ಹತ್ತು ವರ್ಷಗಳಲ್ಲಿ ಕಲಬುರಗಿಯ ಪರಿಸರ ಬಹಳ ಬದಲಾವಣೆ ಆಗಿದೆ. ಮನುಷ್ಯ ರು ಮತ್ತು ಜೀವಿಗಳ ಆರೋಗ್ಯ ಕ್ಕೆ ಶುದ್ಧ ಗಾಳಿ, ನೀರು ಹಾಗೂ ಆಹಾರ ಬಹಳ ಅವಶ್ಯಕ. ಆದರೆ ದುರದೃಷ್ಟವಷಾತ್ ಇವು ಅಪಾಯಕಾರಿ ಮಟ್ಟದಲ್ಲಿ ಮಲಿನವಾಗಿವೆ. ಇದರಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತಿದೆ. ಸಾಂಕ್ರಾಮಿಕಗಳು, ಶ್ವಾಸಕೋಶ, ಹೃದಯ, ಮೂತ್ರಪಿಂಡದ ರೋಗಗಳು ಹೆಚ್ಚಾಗುತ್ತಿವೆ. ಅದಕ್ಕೆ ತಕ್ಕಂತೆ ವಿರಳವಾಗಿದ್ದ ಆಸ್ಪತ್ರೆಗಳ ಸಂಖ್ಯೆ ಗಣನೀಯ ವಾಗಿ ಹೆಚ್ಚಾಗಿದೆ.ಪರಿಸರದ ಇತರ ಜೀವಿಗಳು ಕೂಡ ಬದುಕಲಾಗದಂಥ ವಾತಾವರಣ ಇದೆ.. ಇದಕ್ಕೆ ಉದಾಹರಣೆ ಎಂಬಂತೆ ಅಪ್ಪನ ಕೆರೆಯಲ್ಲಿ ಇದ್ದ ಸುಮಾರು 61 ಪ್ರಭೇದ ಗಳ ಸುಂದರ ಪಕ್ಷಿ ಗಳಲ್ಲಿ 10-12 ಪ್ರಭೇದಗಳು ಈಗ ಕಾಣ ಸಿಗುತ್ತಿಲ್ಲ. ಇದು ಹದಗೆಟ್ಟಿರುವ, ಹದಗೆಡುತ್ತಿರುವ ಪರಿಸರಕ್ಕೆ ಸಾಕ್ಷಿಯಾಗಿದೆ.
ಈ ಪರಿಯ ಪರಿಸ್ಥಿತಿಗೆ ಮೂಲ ಕಾರಣವೆಂದರೆ ನಗರದಲ್ಲಿ ದಿನಾಲೂ ಉತ್ಪನ್ನ ವಾಗುವ ತ್ಯಾಜ್ಯ ವಸ್ತುಗಳನ್ನು ಸೂಕ್ತವಾಗಿ ವಿಲೇವಾರಿ ಮಾಡದೇ ಇರುವುದು. ಸರ್ಕಾರದ ಉನ್ನತ ಅಧಿಕಾರಿಗಳಿಂದ ಹಿಡಿದು ಕಟ್ಟ ಕಡೆಯ ಸಾಮಾನ್ಯ ನಾಗರಿಕರು ಕೂಡ ಕಸ ವಿಲೇವಾರಿಯ ಬಗ್ಗೆ ಗಂಭೀರವಾಗಿ ಚಿಂತಿಸುವುದೇ ಇಲ್ಲ ಎಂಬ ವಿಷಾದವನ್ನು ಡಾ. ಹತ್ತಿ ಯವರು ವ್ಯಕ್ತ ಪಡಿಸಿದರು.
ಪ್ರತಿ ಮನೆಯಲ್ಲಿ ನಾಲ್ಕು ಬಗೆಯ ಕಸ ಉತ್ಪತ್ತಿ ಆಗುತ್ತದೆ. ಹಸಿ ಕಸ (ಹಣ್ಣು, ತರಕಾರಿ ಇತ್ಯಾದಿ), ಒಣ ಕಸ (ಪ್ಲಾಸ್ಟಿಕ್, ಕಾಗದ ಇತ್ಯಾದಿ), ಅಪಾಯಕಾರಿ ಕಸ ( ಮಾತ್ರೆ, ಔಷಧ ಇತ್ಯಾದಿ ) ಹಾಗೂ ಕಟ್ಟಡದ ತ್ಯಾಜ್ಯ.. ಇವುಗಳನ್ನು ಮನೆಯ ಮಟ್ಟದಲ್ಲೇ ಬೇರೆ ಬೇರೆ ಕಸದ ಪಾತ್ರೆ ಗಳಿಗೆ ಹಾಕಿ, ಕಸದ ಗಾಡಿ ಬಂದಾಗ ಕೊಟ್ಟರೆ ಆಯ್ತು.. ಕಸದ ವಿಂಗಡಣೆಯ ಕೆಲಸ ಸರಳವಾಗಿ, ಸುಸೂತ್ರವಾಗಿ ನಡೆದುಹೋಗುತ್ತದೆ. ಆದರೆ ನಾಗರಿಕರ ನಿರ್ಲಕ್ಷ್ಯ ದಿಂದಾಗಿ ಇದು ಸಾಧ್ಯವಾಗುತ್ತಿಲ್ಲ . ಪಾಲಿಕೆಯ ಬಳಿ ಕಸ ವಿಂಗಡಣೆ ಯಂತ್ರವಿದೆಯಾದರೂ ಅದು ಕಾರ್ಯನಿರ್ವಹಿಸುತ್ತಿಲ್ಲ ಎಂದರು. ಹೀಗಾಗಿ ನಾವು ಉತ್ಪಾದಿಸುವ ಕಸದಲ್ಲಿನ ಅಪಾಯಕಾರಿ ರಾಸಾಯನಿಕ ಗಳು ನಾವು ಕುಡಿಯುವ ಭೀಮಾ ಹಾಗೂ ಬೋರ್ವೆಲ್ ನೀರನ್ನು ಕಲುಷಿ ಗೊಳಿಸುತ್ತಿವೆ….ತಮ್ಮ ಉಪನ್ಯಾಸಕ್ಕೆ ಪೂರಕ ವಾಗಿ ಕೆಲವು ಚಿತ್ರ ಹಾಗೂ ವಿಡಿಯೋಗಳನ್ನ ಕೂಡ ಅವರು ಪ್ರದರ್ಶಿಸಿದರು. ಉದನೂರಿನ ಪಕ್ಕದಲ್ಲಿ ಶೇಖರಿಸಲಾಗುತ್ತಿರುವ ಕಸದಿಂದ ಅಲ್ಲಿ ಗುಡ್ಡಗಳೇ ನಿರ್ಮಾಣವಾಗಿದ್ದು , ಅಲ್ಲಿನ ವಾತವರಣವೆಲ್ಲ ಗಬ್ಬೆದ್ದು ನಾರುತ್ತಿದೆ.. ಅಲ್ಲಿನ ರೈತರು ಅವರ ನರಕ ಸದೃಶ ಬದುಕಿನ ಚಿತ್ರಣ ವನ್ನು ಬಹಳ ವಿಷಾದದಿಂದ ಹೇಳಿದರು..
ಸ್ವಚ್ಛ, ಸುಂದರ ಕಲಬುರಗಿ ನಮ್ಮೆಲ್ಲರ ಆದ್ಯತೆ ಆಗಬೇಕು. ಪ್ರತಿಯೊಬ್ಬರೂ ಎಚ್ಚೆತ್ತುಕೊಂಡು ಸಹಕರಿಸಿದರೆ ಇದೇನು ಕಷ್ಟದ ಕೆಲಸವಲ್ಲ ಎಂದು ಡಾ. ಹತ್ತಿಯವರು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಜೇವರ್ಗಿ, ಸಹ ಕಾರ್ಯದರ್ಶಿ ಶರಣಬಸಪ್ಪ ಬಾಬಶೆಟ್ಟಿ, ಅಶೋಕ ಜೇವರ್ಗಿ, ಸುಭಾಶ್ಚಂದ್ರ ಕೋಣಿನ, ಶ್ರೀನಿವಾಸ ರೆಡ್ಡಿ ಹಾಗೂ ನೆರೆಯ ಕುವೆಂಪು ನಗರ, ಬ್ಯಾಂಕ್ ಮತ್ತು ಅಡ್ವೋಕೇಟ್ ಕಾಲನಿ ಗಳ ನಿವಾಸಿಗಳು ಉಪಸ್ಥಿತರಿದ್ದರು. ಆರಂಭದಲ್ಲಿ ಗೌರವಾಧ್ಯಕ್ಷ ಜಿ ಎಸ್ ಬಿರಾದಾರ ಅವರು ಸ್ವಾಗತಿಸಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸೋಮಶೇಖರ ಎಸ್ ರುಳಿ ಅವರು ನಿರ್ವಹಿಸಿದರು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.