Home ಜಿಲ್ಲೆ ವಂದೇ ಮಾತರಂ ಮಸೂದೆಗೆ ಕಾಂಗ್ರೆಸ್ ವಿರೋಧ: ‘ಡೋಂಗಿ ರಾಷ್ಟ್ರೀಯವಾದ’ ಬಯಲಾಗಿದೆ : ರಮೇಶ ಜಿಗಜಿಣಗಿ

ವಂದೇ ಮಾತರಂ ಮಸೂದೆಗೆ ಕಾಂಗ್ರೆಸ್ ವಿರೋಧ: ‘ಡೋಂಗಿ ರಾಷ್ಟ್ರೀಯವಾದ’ ಬಯಲಾಗಿದೆ : ರಮೇಶ ಜಿಗಜಿಣಗಿ

ವಿಜಯಪುರ, ಜು. 26: ‘ವಂದೇ ಮಾತರಂ’ ಗೀತೆಗೆ ಅವಮಾನ ಮಾಡಿದವರಿಗೆ ಶಿಕ್ಷೆ ವಿಧಿಸುವ ಉದ್ದೇಶದಿಂದ ಮಂಡಿಸಲಾದ ‘ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ (ತಿದ್ದುಪಡಿ) ಮಸೂದೆ-2026’ಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿರುವುದು ಅದರ “ಡೋಂಗಿ ರಾಷ್ಟ್ರೀಯವಾದ”ವನ್ನು ಬಯಲಿಗೆಳೆದಿದೆ ಎಂದು ಸಂಸದ ರಮೇಶ ಜಿಗಜಿಣಗಿ ಆರೋಪಿಸಿದ್ದಾರೆ.
ಶನಿವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಅವರು, ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯಾಗಿದ್ದ ಹಾಗೂ ಕ್ರಾಂತಿಕಾರಿಗಳ ಧ್ಯೇಯಗೀತೆಯಾಗಿದ್ದ ಬಂಕಿಮಚಂದ್ರ ಚಟರ್ಜಿ ವಿರಚಿತ ‘ವಂದೇ ಮಾತರಂ’ಗೆ ಗೌರವ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಸೂದೆ ಮಂಡಿಸಿದೆ ಎಂದು ಹೇಳಿದರು.
ರಾಜ್ಯಸಭೆಯಲ್ಲಿ ಮಸೂದೆ ಮಂಡನೆಯಾಗುವ ವೇಳೆ ಪ್ರತಿಪಕ್ಷಗಳು ಗದ್ದಲ ನಡೆಸಿದ್ದು, ವಂದೇ ಮಾತರಂ ಗೀತೆಗೆ ಅವಮಾನ ಮಾಡಿದರೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವವಿರುವ ಮಸೂದೆಯನ್ನು ತಡೆಯುವ ಉದ್ದೇಶದಿಂದಲೇ ಕಾಂಗ್ರೆಸ್ ಅಡ್ಡಿಪಡಿಸಿದೆ ಎಂದು ಅವರು ಟೀಕಿಸಿದರು.
1875ರಲ್ಲಿ ಬಂಕಿಮಚಂದ್ರ ಚಟರ್ಜಿ ಅವರು ತಮ್ಮ ಆನಂದಮಠ ಕೃತಿಯಲ್ಲಿ ‘ವಂದೇ ಮಾತರಂ’ ಗೀತೆಯನ್ನು ರಚಿಸಿದ್ದು, 1905ರ ಬಂಗಾಳ ವಿಭಜನೆ ವಿರೋಧಿ ಹೋರಾಟ ಸೇರಿದಂತೆ ಸ್ವಾತಂತ್ರ್ಯ ಚಳವಳಿಯ ಹಲವು ಹಂತಗಳಲ್ಲಿ ಈ ಗೀತೆ ದೇಶಭಕ್ತಿಯ ಸಂಕೇತವಾಗಿ ರೂಪುಗೊಂಡಿತ್ತು ಎಂದು ಜಿಗಜಿಣಗಿ ಹೇಳಿದರು.
1923ರ ಕಾಕಿನಾಡ ಕಾಂಗ್ರೆಸ್ ಅಧಿವೇಶನದಲ್ಲಿ ಪಂಡಿತ ವಿಷ್ಣು ದಿಗಂಬರ ಪಲುಸ್ಕರ್ ಅವರು ‘ವಂದೇ ಮಾತರಂ’ ಹಾಡಲು ಮುಂದಾದಾಗ ಕೆಲವರು ವಿರೋಧ ವ್ಯಕ್ತಪಡಿಸಿದ್ದ ಘಟನೆಯನ್ನು ಉಲ್ಲೇಖಿಸಿದ ಅವರು, ಕಾಂಗ್ರೆಸ್ ಆರಂಭದಿಂದಲೂ ಈ ಗೀತೆಯ ಬಗ್ಗೆ ಸ್ಪಷ್ಟ ನಿಲುವು ಹೊಂದಿರಲಿಲ್ಲ ಎಂದು ಆರೋಪಿಸಿದರು.
ಮುಸ್ಲಿಂ ಲೀಗ್ ಹಾಗೂ ಮೊಹಮ್ಮದ್ ಅಲಿ ಜಿನ್ನಾ ಅವರ ಒತ್ತಡಕ್ಕೆ ಮಣಿದು ಕಾಂಗ್ರೆಸ್ ವಂದೇ ಮಾತರಂ ಗೀತೆಯನ್ನು ತುಂಡರಿಸಿತ್ತು. 1937ರಲ್ಲಿ ಅದರ ಪ್ರಮುಖ ಸಾಲುಗಳನ್ನು ಕೈಬಿಡುವ ಮೂಲಕ ವಿಭಜನೆಯ ಬೀಜ ಬಿತ್ತಿತ್ತು ಎಂದು ಜಿಗಜಿಣಗಿ ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ವಾತಂತ್ರ್ಯ ಹೋರಾಟದ ಪರಂಪರೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಮಸೂದೆ ತಂದಿದ್ದು, ಇದನ್ನು ಕಾಂಗ್ರೆಸ್ ವಿರೋಧಿಸುತ್ತಿರುವುದು ರಾಷ್ಟ್ರಭಕ್ತರಿಗೆ ಅಸಮಾಧಾನ ಉಂಟುಮಾಡಿದೆ ಎಂದು ಅವರು ಹೇಳಿದರು.
ಯಾವುದೇ ಕಾರಣಕ್ಕೂ ಕಾಂಗ್ರೆಸ್‍ನ ಈ ನಿಲುವಿಗೆ ದೇಶಪ್ರೇಮಿಗಳು ಬೆಂಬಲ ನೀಡುವುದಿಲ್ಲ ಎಂದು ಜಿಗಜಿಣಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.