
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
ಬೆಂಗಳೂರು, ಜು. ೬- ರಾಜ್ಯದಲ್ಲಿ ನಡೆದಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಅಕ್ರಮಗಳು ನಡೆದಿದ್ದು, ಈಗ ನಡೆದಿರುವ ಎಸ್‌ಐಆರ್‌ನ್ನು ರದ್ದುಗೊಳಿಸಿ ಹೊಸದಾಗಿ ಎಸ್‌ಐಆರ್ ನಡೆಸುವ ಜತೆಗೆ ಎಸ್‌ಐಆರ್ ಅಕ್ರಮದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಕೇಂದ್ರ ಚುನಾವಣಾ ಆಯೋಗಕ್ಕೆ ಆಗ್ರಹಿಸಿದರು.
ಬೆಂಗಳೂರಿನ ಕೆ.ಆರ್. ವೃತ್ತದಲ್ಲಿರುವ ರಾಜ್ಯದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರನ್ನು ಇಂದು ಭೇಟಿ ಮಾಡಿದ್ದ ಎನ್‌ಡಿಎ ನಿಯೋಗ ಎಸ್‌ಐಆರ್ ಅಕ್ರಮದ ಬಗ್ಗೆ ದೂರು ನೀಡಿತು.
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಹೆಚ್.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ರಾಜ್ಯದ ವಿರೋಧ ಪಕ್ಷದ ನಾಯಕರುಗಳಾದ ಆರ್. ಅಶೋಕ್, ಚಲವಾದಿ ನಾರಾಯಣಸ್ವಾಮಿ, ಬಿಜೆಪಿ ಮುಖಂಡ ಸಿ.ಟಿ. ರವಿ, ಜೆಡಿಎಸ್ ಮುಖಂಡ ಬೋಜೇಗೌಡ ಸೇರಿದಂತೆ ಎರಡೂ ಪಕ್ಷಗಳ ಹಲವು ಶಾಸಕರು ಇಂದು ಮುಖ್ಯ ಚುನಾವಣಾ ಆಯುಕ್ತರಾದ ಅನ್ಬುಕುಮಾರ್ ಅವರನ್ನು ಭೇಟಿ ಮಾಡಿ ಎಸ್‌ಐಆರ್ ಅಕ್ರಮದ ಬಗ್ಗೆ ದಾಖಲೆ ಸಮೇತ ದೂರು ನೀಡಿದರು.
ಎಸ್‌ಐಆರ್ ಸಂದರ್ಭದಲ್ಲಿ ಬಿಎಲ್‌ಓಗಳು ಮನೆ ಮನೆಗೆ ತೆರಳಿ ಎನ್ಯುಮರೇಷನ್ ಅರ್ಜಿಯನ್ನು ವಿತರಿಸಬೇಕು. ಆದರೆ ಆ ರೀತಿ ಮಾಡದೆ ಕಲ್ಯಾಣ ಮಂಟಪ, ಛತ್ರ, ಮಸೀದಿ, ದರ್ಗಾ ಕೆಲ ಶಾಸಕರ ಕಚೇರಿಗಳಲ್ಲಿ ಎಸ್‌ಐಆರ್ ನಡೆಯುತ್ತಿದೆ. ಈ ಅಕ್ರಮದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಬಿಜೆಪಿ-ಜೆಡಿಎಸ್ ನಿಯೋಗ ರಾಜ್ಯದ ಮುಖ್ಯ ಚುನಾವಣಾ ಆಯುಕ್ತರಲ್ಲಿ ಮನವಿ ಮಾಡಿದರು.
ರಾಜ್ಯದಲ್ಲಿ ಎಸ್‌ಐಆರ್ ಸಂದರ್ಭದಲ್ಲಿ ಯಾವ ರೀತಿ ಅಕ್ರಮಗಳು ನಡೆಯುತ್ತಿವೆ ಎಂಬ ಬಗ್ಗೆ ವಿಡಿಯೋ ದಾಖಲೆಗಳನ್ನು ಎನ್‌ಡಿಎ ನಿಯೋಗ ಚುನಾವಣಾಧಿಕಾರಿಗಳಿಗೆ ನೀಡಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದೆ.
ಮುಖ್ಯ ಚುನಾವಣಾಧಿಕಾರಿಗಳಿಗೆ ನೀಡಿರುವ ದೂರಿಗೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಹೆಚ್.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿರೋಧ ಪಕ್ಷದ ನಾಯಕರುಗಳ ಆರ್. ಅಶೋಕ್, ಚಲವಾದಿ ನಾರಾಯಣಸ್ವಾಮಿ, ಶಾಸಕರಾದ ಡಾ. ಅಶ್ವತ್ಥ್‌ನಾರಾಯಣ, ಅರವಿಂದ್ ಬೆಲ್ಲದ್, ಸಿಮೆಂಟ್ ಮಂಜು, ಸಂಸದ ಮಲ್ಲೇಶ್ ಬಾಬು, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ವಿಧಾನಪರಿಷತ್ ಸದಸ್ಯರಾದ ಸಿ.ಟಿ. ರವಿ, ಬೋಜೆಗೌಡ, ಎನ್. ರವಿಕುಮಾರ್ ಸಹಿ ಹಾಕಿದ್ದು, ಮಾಜಿ ಶಾಸಕರುಗಳಾದ ಕೃಷ್ಣಾರೆಡ್ಡಿ, ಕೆ.ಎ. ತಿಪ್ಪೇಸ್ವಾಮಿ, ಬಿಜೆಪಿಯ ಎಸ್‌ಐಆರ್ ಸಂಚಾಲಕ ದತ್ತಾತ್ರಿ ಸಹ ದೂರಿಗೆ ಸಹಿ ಹಾಕಿದ್ದಾರೆ.
ಸರ್ಕಾರದ ಕುಮ್ಮಕ್ಕು
ರಾಜ್ಯದ ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ಎನ್‌ಡಿಎ ಅಂಗ ಪಕ್ಷಗಳು ಇಂದು ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ಅಕ್ರಮವಾಗಿ ಎಸ್‌ಐಆರ್ ನಡೆಸುತ್ತಿದೆ. ಇದನ್ನು ಪ್ರತಿಭಟಿಸಿ ದೂರು ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.
ಎಸ್‌ಐಆರ್ ಅಕ್ರಮದ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದರಸ, ಮಸೀದಿ, ಕಾಂಗ್ರೆಸ್ ಪಕ್ಷದ ಚುನಾಯಿತ ಪ್ರತಿನಿಧಿಗಳ ಮನೆಗಳಲ್ಲಿ, ಕಲ್ಯಾಣ ಮಂಟಪದಲ್ಲಿ, ಒಂದು ಸಮುದಾಯ ನಾಯಕರುಗಳ ಮನೆಗಳಲ್ಲಿ ಎಸ್‌ಐಆರ್ ಮಾಡುತ್ತಿದ್ದಾರೆ. ಈ ದಾಖಲೆ ಇರುವ ಪೆನ್‌ಡ್ರೈವ್‌ನ್ನು ಮುಖ್ಯ ಚುನಾವಣಾ ಆಯುಕ್ತರಿಗೆ ನೀಡಿದ್ದೇವೆ ಎಂದರು.
ಈ ಮೊದಲು ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ, ವಿಧಾನಪರಿಷತ್‌ನ ವಿರೋಧಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ, ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ದೂರು ನೀಡಿದ್ದರು ಇಷ್ಟಾದರೂ ಸುಧಾರಣೆ ಆಗಿಲ್ಲ. ಹಾಗಾಗಿ ನಾವೆಲ್ಲಾ ಇಂದು ಮತ್ತೆ ದೂರು ನೀಡಿ ತೀವ್ರ ಕ್ರಮಕ್ಕೆ ಆಗ್ರಹಿಸಿದ್ದೇವೆ ಎಂದರು
ಈಗ ನನಡೆದಿರುವ ಎಸ್‌ಐಆರ್‌ನ್ನು ರದ್ದು ಮಾಡಿ ಹೊಸದಾಗಿ ಎಸ್‌ಐಆರ್ ಮಾಡುವಂತೆಯೂ ಮನವಿ ಮಾಡಿದ್ದೇವೆ. ವಾಟ್ಸ್‌ಪ್‌ನಲ್ಲಿ ಬಿಎಲ್‌ಓಗಳ ಐಡಿ ಕಾರ್ಡ್‌ಗಳಲ್ಲಿ ಶಾಸಕರ ಫೋಟೋ ಹಾಕಲಾಗಿದೆ ಎಂದು ಪ್ರಹ್ಲಾದ್ ಜೋಷಿ ದೂರು ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಬಾಂಗ್ಲಾದೇಶದವರನ್ನು ಮತ ಪಟ್ಟಿಗೆ ಸೇರಿಸಲು ಅವಕಾಶ ನೀಡಲಾಗಿದೆ. ಈ ಬಗ್ಗೆಯೂ ತನಿಖೆಯಾಗಬೇಕು. ಎಸ್‌ಐಆರ್ ವಿಫಲಗೊಳಿಸುವ ತಂತ್ರವನ್ನು ಕಾಂಗ್ರೆಸ್ ನಡೆಸಿದೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಡೀ ಎಸ್‌ಐಆರ್ ಪ್ರಕ್ರಿಯೆಯನ್ನು ಬುಡಮೇಲು ಮಾಡಲು ಹೊರಟಿದ್ದಾರೆ. ಹಾಗಾಗಿ ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಎಲ್ಲೆಲ್ಲಿ ಹೊಸದಾಗಿ ಎನ್ಯುಮರೇಷನ್ ಮಾಡಬೇಕು ಎಂಬ ಬಗ್ಗೆಯೂ ತಿಳಿಸಿದ್ದೇವೆ. ಮನೆ ಮನೆಗೆ ಬಿಎಲ್‌ಓಗಳು ಹೋದಾಗ ಮಾತ್ರ ಆತ ಭಾರತದವನೋ ಬಾಂಗ್ಲಾದೇಶವನು ಎಂಬುದು ಗೊತ್ತಾಗಲಿದೆ ಎಂದರು.
ಅಧಿಕಾರ ದುರ್ಬಳಕೆ
ರಾಜ್ಯದಲ್ಲಿ ಎಸ್‌ಐಆರ್‌ನ್ನು ಅಕ್ರಮವಾಗಿ ಕಾನೂನು ಬಾಹಿರವಾಗಿ ನಡೆಸುತ್ತಿರುವ ಬಗ್ಗೆ ಇಂದು ದಾಖಲೆ ಸಮೇತ ರಾಜ್ಯದ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದೇವೆ. ಮಾಧ್ಯಮಗಳಲ್ಲೂ ಸಹ ಎಸ್‌ಐಆರ್ ಅಕ್ರಮದ ಬಗ್ಗೆ ವರದಿಗಳು ಬಂದಿವೆ. ರಾಜ್ಯ ಸರ್ಕಾರ ಯಾವ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬುದನ್ನು ದೂರಿನಲ್ಲಿ ಹೇಳಿದ್ದೇವೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಜಾಣ ಕುರುಡಾಗಿದೆ. ಕೇಂದ್ರ ಹಾಗೆ ಮಾಡಿತು, ಹೀಗೆ ಮಾಡಿತು ಎಂದು ಟೀಕೆ ಮಾಡುತ್ತಿದ್ದೀರಿ. ಕೇಂದ್ರದ ಮೇಲೆ ಟೀಕೆ ಮಾಡಲು ಮಾತ್ರ ಟೀಕೆ ಮಾಡುತ್ತಿದ್ದೀರಾ ಎಸ್‌ಐಆರ್ ಅಕ್ರಮವಾಗಿ ಮಾಡೋ ಜಾಗೃತಿನಾ ಎಂದು ಹರಿಹಾಯ್ದರು.
ಎಸ್‌ಐಆರ್ ಅಕ್ರಮದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಎಲ್ಲವನ್ನು ವಿವರಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಒಂದು ಸ್ವತಂತ್ರ ಸಂಸ್ಥೆ, ಅವಶ್ಯಕತೆ ಬಿದ್ದರೆ ನಾವೆಲ್ಲಾ ಎನ್‌ಡಿಎ ಅಂಗ ಪಕ್ಷಗಳು ಸೇರಿ ದೆಹಲಿಯಲ್ಲೂ ದೂರು ಕೊಡುತ್ತೇವೆ ಎಂದರು.
ಡಿಕೆಶಿ ಮತ್ತೆ ಸಿಎಂ ಆಗಲು ಅಕ್ರಮ
ಎಸ್‌ಐಆರ್‌ನ್ನು ವಿಫಲ ಮಾಡಿದ ಮೊದಲ ರಾಜ್ಯ ಕರ್ನಾಟಕ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಎಸ್‌ಐಆರ್ ಅಕ್ರಮದ ಬಗ್ಗೆ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ರಾಜ್ಯಗಳಲ್ಲಿ ಎಷ್ಟೇ ಒತ್ತಡ ಇದ್ದರೂ ಎಸ್‌ಐಆರ್ ಸರಿಯಾಗಿ ನಡೆದಿದೆ. ಆದರೆ ಇಲ್ಲಿ ಮಾತ್ರ ಅಕ್ರಮ ಮಾಡಲು ಹೊರಟಿದ್ದಾರೆ. ೨೦೨೮ ರಲ್ಲಿ ಮತ್ತೆ ಸಿಎಂ ಆಗಲು ಎಸ್‌ಐಆರ್ ಅಕ್ರಮ ಮಾಡುತ್ತಿದ್ದಾರೆ ಎಂದು ದೂರಿದರು.
ಯಾರ ಮನೆಗೂ ಹೋಗಬೇಡಿ, ಅಲ್ಪಸಂಖ್ಯಾತರ ಮತಗಳನ್ನು ಉಳಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಗತ್ಯವಿದ್ದರೆ ಕೇಂದ್ರ ಮುಖ್ಯ ಚುನಾವಣಾಧಿಕಾರಿಗಳಿಗೂ ದೂರು ಕೊಡುತ್ತೇವೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
































