
ಕುಣಿಗಲ್, ಆ. ೮- ತಾಲ್ಲೂಕಿನ ಗ್ರಾಮೀಣ ರೈತ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿಬಿ ಜಿ ರಾಮ್ ಜಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ವಸಂತ್‌ಕುಮಾರ್ ಹೇಳಿದರು.
ತಾಲ್ಲೂಕಿನ ಎಡೆಯೂರು ಹೋಬಳಿ ದೊಡ್ಡ ಮದುರೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಬಿ ಜಿ ರಾಮ್ ಜಿ ಯೋಜನೆಯು ಹೊಸ ಚೈತನ್ಯ ಮೂಡಿಸಿದೆ. ಜುಲೈ ೧ ರಿಂದ ಯೋಜನೆ ಅನುಷ್ಠಾನಗೊಂಡಿದ್ದು, ರೈತರು ತಮ್ಮ ಸ್ವಂತ ಜಮೀನಿನಲ್ಲಿಯೇ ಕಾಮಗಾರಿಗಳನ್ನು ಕೈಗೊಂಡು ದಿನಕ್ಕೆ ೩೮೨ ರೂ. ಕೂಲಿ ಪಡೆಯುವ ಅವಕಾಶ ದೊರೆತಿದೆ ಎಂದರು.
ತಾಲ್ಲೂಕಿನ ೩೬ ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆ ಯಶಸ್ವಿಯಾಗಿ ಜಾರಿಯಲ್ಲಿದ್ದು, ಎಲ್ಲ ಗ್ರಾಮ ಪಂಚಾಯ್ತಿಗಳಲ್ಲೂ ಯೋಜನೆ ವೇಗ ಪಡೆದುಕೊಂಡಿದೆ. ಈ ಯೋಜನೆಯಡಿ ಇದುವರೆಗೆ ೩೧೮ ಹೊಸ ಕಾಮಗಾರಿಗಳನ್ನು ಸೇರ್ಪಡೆ ಮಾಡಲಾಗಿದೆ. ರೈತರು ಮಾವು, ತೆಂಗು, ಸೀಬೆ, ಹಲಸು, ಸೀತಾಫಲ, ಗೋಡಂಬಿ, ಕಾಳುಮೆಣಸು, ನೆಲ್ಲಿಕಾಯಿ, ಕೋಕೋ, ಸಪೋಟ, ಡ್ರಾಗನ್ ಫ್ರೂಟ್ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳ ಅಭಿವೃದ್ಧಿಗೆ ಕಾಮಗಾರಿಗಳನ್ನು ಕೈಗೊಳ್ಳಬಹುದು. ಅಲ್ಲದೆ, ದನದ ಕೊಟ್ಟಿಗೆಗೆ ೬೨ ಸಾವಿರ ರೂ., ಕೋಳಿ ಫಾರಂಗೆ ೬೬ ಸಾವಿರ, ಮೇಕೆ ಶೆಡ್‌ಗೆ ೮೩ ರೂ. ಸಾವಿರ, ಹಂದಿ ಶೆಡ್‌ಗೆ ೧ ಲಕ್ಷ ರೂ. ಹಾಗೂ ಕೃಷಿ ಹೊಂಡಕ್ಕೆ?೧ ಲಕ್ಷವರೆಗೆ ನೆರವು ಲಭ್ಯವಿದೆ ಎಂದರು.
೨೦೨೬?೨೭ನೇ ಸಾಲಿಗೆ ತಾಲ್ಲೂಕಿಗೆ ೧೨ ಲಕ್ಷ ಮಾನವ ದಿನಗಳ ಗುರಿ ನಿಗದಿಪಡಿಸಲಾಗಿದೆ. ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯ್ತಿಯಿಂದ ಒಟ್ಟು ೫,೨೩೨ ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ. ಇವುಗಳಲ್ಲಿ ಸಮಗ್ರ ಕೆರೆ ಅಭಿವೃದ್ಧಿ (೧೩೨), ಕಲ್ಯಾಣಿ ಪುನಶ್ಚೇತನ (೯), ಮಳೆನೀರು ಕೊಳ್ಳ (೩೬), ಬೂದು ನೀರಿನ ನಿರ್ವಹಣೆ (೧೫), ಚರಂಡಿ (೧೩೦), ರಸ್ತೆ (೫೪೧), ಸ್ಮಶಾನ ಅಭಿವೃದ್ಧಿ (೧೨೮), ಇತರೆ ಸಮುದಾಯ ಕಾಮಗಾರಿಗಳು (೨,೦೦೦) ಹಾಗೂ ವೈಯಕ್ತಿಕ ಕಾಮಗಾರಿಗಳು (೨,೬೩೦) ಸೇರಿವೆ ಎಂದು ವಿವರಿಸಿದರು.
ಯೋಜನೆಯ ಲಾಭವನ್ನು ಪ್ರತಿಯೊಬ್ಬ ಅರ್ಹ ರೈತರಿಗೆ ತಲುಪಿಸುವ ಉದ್ದೇಶದಿಂದ ಮನೆ-ಮನೆ ಭೇಟಿ, ಐಇಸಿ (Iಇಅ) ಚಟುವಟಿಕೆಗಳು, ಕೆಲಸದ ಬೇಡಿಕೆ ಅರ್ಜಿಗಳ ವಿತರಣೆ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕ ಅರಿವು ಮೂಡಿಸಲಾಗುತ್ತಿದೆ. ಈ ವರ್ಷ ಮಳೆಯ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ರೈತರು ತಮ್ಮ ಜಮೀನಿನಲ್ಲೇ ಕಾಮಗಾರಿಗಳನ್ನು ಕೈಗೊಂಡು ಕೂಲಿ ಗಳಿಸುವ ಜತೆಗೆ ಶಾಶ್ವತ ಆಸ್ತಿಗಳನ್ನು ನಿರ್ಮಿಸಿಕೊಳ್ಳುವಂತೆ ರೈತರಿಗೆ ಕರೆ ನೀಡಿದರು.
ತಾಪ ಸಹಾಯಕ ನಿರ್ದೇಶಕ ಕಾಂತರಾಜು ಮಾತನಾಡಿ, ಪ್ರತಿಯೊಬ್ಬ ಅರ್ಹ ಕುಟುಂಬಕ್ಕೂ ಯೋಜನೆಯ ಲಾಭ ತಲುಪಿಸುವ ನಿಟ್ಟಿನಲ್ಲಿ ೩೬ ಗ್ರಾಮ ಪಂಚಾಯ್ತಿಗಳಲ್ಲಿ ವ್ಯಾಪಕ ಐಇಸಿ ಚಟುವಟಿಕೆಗಳು, ಮನೆ-ಮನೆ ಭೇಟಿ ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರೈತರು ತಮ್ಮ ಕಾಮಗಾರಿಗಳನ್ನು ಕ್ರಿಯಾ ಯೋಜನೆಗೆ ಸೇರಿಸಿಕೊಂಡು ಯೋಜನೆಯ ಸದುಪಯೋಗಪಡೆದುಕೊಳ್ಳುವಂತೆ ಸಲಹೆ ನೀಡಿದರು.


































