
ಬೆಂಗಳೂರು. ಜು. ೨೮- ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಚರ್ಚೆಗೆ ಕೊನೆಗೂ ಸಮಯ ನಿಗದಿಯಾಗಿದ್ದು, ಇಂದು ರಾತ್ರಿ ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿಯವರು ಸಂಪುಟ ವಿಸ್ತರಣೆ ಬಗ್ಗೆ ರಾಜ್ಯ ನಾಯಕರೊಂದಿಗೆ ಸಭೆ ನಡೆಸುವರು.
ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ವರಿಷ್ಠರ ಜತೆ ಚರ್ಚೆ ನಡೆಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ನಿನ್ನೆಯೇ ದೆಹಲಿಗೆ ತೆರಳಿದ್ದರಾದರೂ ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇವರೆಲ್ಲಾ ಸಂಸತ್ ಅಧಿವೇಶನದ ಕಲಾಪ, ನೀಟ್ ಗದ್ದಲ ಇವುಗಳಲ್ಲಿ ಬ್ಯುಸಿಯಾಗಿದ್ದರಿಂದ ನಿನ್ನೆ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗಲಿಲ್ಲ.
ಇಂದು ರಾತ್ರಿ ೮ ಗಂಟೆಗೆ ರಾಹುಲ್‌ಗಾಂಧಿಯವರು ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಕಾಲಾವಕಾಶ ನೀಡಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ ಇವರುಗಳೆಲ್ಲಾ ಈ ಸಭೆಯಲ್ಲಿ ಭಾಗಿಯಾಗುತ್ತಿದ್ದು, ಸಚಿವರ ಪಟ್ಟಿ ಬಹುತೇಕ ಇಂದು ಅಂತಿಮವಾಗಲಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಇವರುಗಳೆಲ್ಲಾ ಯಾರನ್ನೆಲ್ಲಾ ಸಚಿವರನ್ನಾಗಿಸಬೇಕು ಎಂಬ ಬಗ್ಗೆ ಹೈಕಮಾಂಡ್‌ಗೆ ಈಗಾಗಲೇ ಪಟ್ಟಿ ಸಲ್ಲಿಸಿದ್ದಾರೆ. ಈ ಮೂವರ ಪಟ್ಟಿಯಲ್ಲಿರುವ ಹೆಸರುಗಳು ಹಾಗೂ ಹೈಕಮಾಂಡ್‌ನ ಪಟ್ಟಿಯಲ್ಲಿರುವ ಹೆಸರುಗಳು ಎಲ್ಲವನ್ನು ಚರ್ಚಿಸಿ ನೂತನ ಸಚಿವರ ಪಟ್ಟಿಯನ್ನು ಇಂದೇ ಅಂತಿಮಗೊಳಿಸಲಾಗುತ್ತದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ನೂತನ ಸಚಿವರ ಪಟ್ಟಿ ಇಂದು ಅಂತಿಮವಾದರೆ ಗುರುವಾರ ಇಲ್ಲವೇ ಶುಕ್ರವಾರ ನೂತನ ಸಚಿವರ ಪದಗ್ರಹಣ ನಡೆಯಲಿದೆ.
ಸಿದ್ದರಾಮಯ್ಯ ಇಂದು ಬೆಳಿಗ್ಗೆ ಮೈಸೂರಿಗೆ: ಸಂಜೆ ಮತ್ತೆ ದೆಹಲಿಗೆ
ಸಂಪುಟ ವಿಸ್ತರಣೆಯ ಚರ್ಚೆಯಲ್ಲಿ ಪಾಲ್ಗೊಳ್ಳಲು ನಿನ್ನೆ ದೆಹಲಿಗೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವರಿಷ್ಠರು ಇಂದು ರಾತ್ರಿ ೮ ಗಂಟೆಗೆ ಸಂಪುಟ ವಿಸ್ತರಣೆ ಚರ್ಚೆ ನಿಗದಿ ಮಾಡಿರುವುದರಿಂದ ಇಂದು ಮೈಸೂರಿನಲ್ಲಿ ನಡೆಯುವ ತಮ್ಮ ಪುತ್ರ ದಿ. ರಾಕೇಶ್ ಸಿದ್ದರಾಮಯ್ಯನವರ ಪುಣ್ಯ ಸ್ಮರಣೆಯಲ್ಲಿ ಭಾಗಿಯಾಗಲಿದ್ದಾರೆ.
ದೆಹಲಿಯಿಂದ ಮಧ್ಯಾಹ್ನ ೧೨ ಗಂಟೆಗೆ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸುವ ಸಿದ್ದರಾಮಯ್ಯನವರು ರಾಕೇಶ್ ಸಿದ್ದರಾಮಯ್ಯನವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಜೆ ಮತ್ತೆ ಅದೇ ವಿಶೇಷ ವಿಮಾನದಲ್ಲಿ ದೆಹಲಿಗೆ ವಾಪಸ್ಸಾಗಿ ದೆಹಲಿಯಲ್ಲಿ ಇಂದು ರಾತ್ರಿ ನಡೆಯುವ ಸಂಪುಟ ವಿಸ್ತರಣೆಯ ಸಭೆಯಲ್ಲಿ ಭಾಗಿಯಾಗುವರು.































