Home ಜಿಲ್ಲೆ ಬೆಂಗಳೂರು ಶಾಶ್ವತ ಯೋಜನೆಗೆ ಆದ್ಯತೆ ನೀಡಲು ಬೈರತಿ ವಿಫಲ

ಶಾಶ್ವತ ಯೋಜನೆಗೆ ಆದ್ಯತೆ ನೀಡಲು ಬೈರತಿ ವಿಫಲ

ಕೆ.ಆರ್.ಪುರ,ಅ.೩- ಕೆ.ಆರ್ .ಪುರ ಕ್ಷೇತ್ರದಲ್ಲಿ ಶಾಶ್ವತ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಶಾಸಕ ಬೈರತಿ ಬಸವರಾಜ ಅವರು ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ನಂದೀಶ್ ರೆಡ್ಡಿ ಅವರು ಆರೋಪಿಸಿದರು.


ಕೆ.ಅರ್.ಪುರದ ಮಾರುಕಟ್ಟೆ ಆವರಣದಲ್ಲಿ ಅಖಿಲ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟ ಮತ್ತು ಸಂತೆ ಮಕ್ಕಳು ವತಿಯಿಂದ ಹಮ್ಮಿಕೊಂಡಿದ್ದ ಮಹಾತ್ಮಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ೨೫೦ಕ್ಜೂ ಹೆಚ್ಚು ಪೌರ ಕಾರ್ಮಿಕರಿಗೆ ಸೀರೆ, ಪಂಚೆ, ಶಾಲು ಸಮವಸ್ತ್ರ ನೀಡಿ ಗೌರವಿಸಿ ಮಾತನಾಡಿದರು.


ಕಾವೇರಿ ನೀರನ್ನು ೨೦೧೨ ರಲ್ಲಿ ಕ್ಷೇತ್ರಕ್ಕೆ ತಂದರೂ ಇದುವರೆಗೂ ಕ್ಷೇತ್ರದ ಎಲ್ಲಾ ಭಾಗಕ್ಕು ತಲುಪಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ,ಅಲ್ಲದೆ ಹಲವು ದಿನಗಳ ಸ್ಯಾಟಲೈಟ್ ಬಸ್ ನಿಲ್ದಾಣದ ಅವಶ್ಯಕತೆ ಇದೆ,ಆದರೆ ಸ್ಥಳೀಯ ಶಾಸಕರು ಮಾಡಲು ಆಗದೆ ಇರುವುದು ವಿಪರ್ಯಾಸ ಎಂದು ಹೇಳಿದರು.


ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಮಾತನಾಡಿ ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಅವಕಾಶ ಮಾಡಿಕೊಟ್ಟರೆ ಕೆ.ಆರ್.ಪುರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸುತ್ತೆನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ನನ್ನ ತಂದೆ ಎ.ಕೃಷ್ಣಪ್ಪ ಅವರು ತೂಗು ಸೇತುವೆ, ಸರ್ಕಾರಿ ಆಸ್ಪತ್ರೆ, ತಾಲ್ಲೂಕು ಕಚೇರಿ ಸೇರಿದಂತೆ ಹಲವು ಶಾಶ್ವತ ಯೋಜನೆಗಳನ್ನು ಜಾರಿಗೆ ತಂದರೂ ಆದರೆ ಹಾಲಿ ಶಾಸಕರು ಮೂರುಬಾರಿ ಗೆದ್ದರು ಯಾವುದೇ ಶಾಶ್ವತ ಯೋಜನೆ ಮಾಡಿಲ್ಲ ಎಂದು ಕಿಡಿಕಾರಿದರು.


ಅಖಿಲ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಎಲೆ ಶ್ರೀನಿವಾಸ್ ಮಾತನಾಡಿ ಸಮಾಜದಲ್ಲಿ ಪೌರ ಕಾರ್ಮಿಕರನ್ನು ನೋಡುವ ದೃಷ್ಟಿ ಬದಲಾಗಬೇಕು. ಕೆಲವರು ಪೌರ ಕಾರ್ಮಿಕರು ಕೆಲಸ ಮಾಡುವ ವೇಳೆ ಕುಡಿಯಲು ನೀರು, ಟೀ, ಶೌಚಾಲಯವನ್ನು ನೀಡುವುದಿಲ್ಲ ಅವರೂ ಕೂಡ ನಮ್ಮಂತೆ ಮನುಷ್ಯರು ಅವರಿಗೆ ಗೌರವ ಕೊಡುವುದಿಲ್ಲ ಕಲಿಯಬೇಕು ಎಂದರು.


ಪ್ರತಿ ವರ್ಷ ಪೌರ ಕಾರ್ಮಿಕರನ್ನು ಗೌರವಿಸುವ ಕೆಲಸ ಚಾಚುತಪ್ಪದೇ ಮಾಡುತ್ತ ಬರುತ್ತಿದ್ದೇವೆ. ಮುಂದೆಯೇ ಕೂಡ ನಿರಂತರವಾಗಿ ಕಾರ್ಯ ನಡೆಯಲಿದೆ.


ಈ ಸಂದರ್ಭದಲ್ಲಿ ಪೂರ್ವ ನಗರ ಪಾಲಿಕೆ ಕೆ.ಆರ್.ಪುರ ಜಂಟಿ ಆಯುಕ್ತೆ ಸುಧಾಸ್ವಪ್ನ, ಅಖಿಲ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಎಲೆ ಶ್ರೀನಿವಾಸ್,
ಮಾಜಿ ಪಾಲಿಕೆ ಸದಸ್ಯ ವೀರಣ್ಣ, ನಿಖಿಲ್ ಅಮರನಾಥ್ ಇತರರು ಇದ್ದರು.