
ಮಧುಗಿರಿ, ಸೆ. ೪- ತಾಲ್ಲೂಕಿನ ಭಕ್ತಾದಿಗಳಿಗೆ ತಿರುಪತಿಯ ಶ್ರೀ ವೆಂಕಟೇಶ್ವರ ದೇವರ ದರ್ಶನ ಪಡೆಯಲು ಅನುಕೂಲವಾಗುವಂತೆ ಮಧುಗಿರಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ತಿರುಪತಿಗೆ ನೇರ ಬಸ್ ಸೌಲಭ್ಯ ಕಲ್ಪಿಸುವ ಉತ್ತಮ ಕಾರ್ಯಕ್ಕೆ ಮಾಜಿ ಸಚಿವರು ಹಾಗೂ ಶಾಸಕ ಕೆ. ಎನ್. ರಾಜಣ್ಣ ಅವರು ಹಸಿರು ನಿಶಾನೆ ತೋರುವ ಮೂಲಕ ಅಧಿಕಾರಿಗಳು ಹಾಗೂ ಮುಖಂಡರುಗಳ ಜತೆ ಚಾಲನೆ ನೀಡಿದರು.
ಭಕ್ತಾಧಿಗಳ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ಕಲ್ಪಿಸಿರುವ ಈ ಬಸ್ ಸೌಲಭ್ಯದಿಂದ ಧಾರ್ಮಿಕ ಕಾರ್ಯಕ್ಕೆ ಮಧುಗಿರಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳ ಭಕ್ತರಿಗೆ ತಿರುಪತಿ ಯಾತ್ರೆ ಮತ್ತಷ್ಟು ಸುಗಮವಾಗಲಿದೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ, ಪುರಸಭಾ ಮಾಜಿ ಅಧ್ಯಕ್ಷರುಗಳಾದ ಎಂ ಕೆ ನಂಜುಂಡಯ್ಯ, ಗಂಗಣ್ಣ, ಲಾಲಪೇಟೆ ಮಂಜುನಾಥ್, ಮುಖಂಡ ತುಂಗೋಟಿ ರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.


































