
ತುಮಕೂರು, ಸೆ. ೩- ರಕ್ತದಾನ ಎಂಬುದು ಒಂದು ಪವಿತ್ರವಾದ ಕಾರ್ಯವಾಗಿದೆ. ರಕ್ತದಾನ ಮಾಡುವುದು ಸಮಾಜಮುಖಿ ಕಾರ್ಯಗಳಲ್ಲಿ ಒಂದಾಗಿದೆ. ಶ್ರೇಷ್ಠ ದಾನಗಳಲ್ಲಿ ರಕ್ತದಾನವು ಬಹಳ ಉಪಯುಕ್ತವಾಗಿದೆ, ಯುವ ಸಮೂಹ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವಕ್ಕೆ ನೆರವಾಗಬೇಕು. ರಕ್ತದಾನ ಮಹಾದಾನ, ಒಂದು ರಕ್ತ ಒಂದು ಅಮೂಲ್ಯ ಜೀವ ಉಳಿಯುವಿಕೆಗೆ ನೆರವಾಗಲಿದೆ ಎಂದು ಅನನ್ಯ ಸಂಸ್ಥೆಯ ಉಪಾಧ್ಯಕ್ಷರಾದ ಬಿ.ಆರ್.ಉಮೇಶ್ ಹೇಳಿದರು.
ನಗರದ ಅನನ್ಯ ಇನ್ಟ್ಸಿಟ್ಯೂಟ್ ಅಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ವತಿಯಿಂದ ಸಂಜೀವಿನಿ ಬ್ಲಡ್ ಸೆಂಟರ್, ರೋಟರಿ ತುಮಕೂರು ಪ್ರೇರಣಾ, ರೋಟರಿ ಈಸ್ಟ್ ಇವರುಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅನನ್ಯ ಸಂಸ್ಥೆಯ ಟ್ರಸ್ಟಿ ಡಾ.ಹೆಚ್.ಹರೀಶ್ ಮಾತನಾಡಿ, ರಕ್ತದಾನಕ್ಕಿಂತ ಮಿಗಿಲಾದ ದಾನವಿಲ್ಲ, ಮಾನವೀಯತೆಯೇ ಮತ್ತೊಂದು ಜೀವ ಉಳಿಸುವುದು. ನಾವು ಕೊಡುವ ರಕ್ತದಿಂದ ಒಬ್ಬ ವ್ಯಕ್ತಿಯ ಜೀವ ಉಳಿಯಬಹುದು. ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ. ಬಹಳಷ್ಟು ರೋಗಿಗಳು, ಆಸ್ಪತ್ರೆಯಲ್ಲಿ ರಕ್ತವಿಲ್ಲದೆ ಪ್ರಾಣ ಬಿಡುವುದನ್ನು ನಾವು ಕಂಡಿದ್ದೇವೆ ಹಾಗೂ ಕೇಳಿದ್ದೇವೆ.. ರಕ್ತದಾನ ಶಿಬಿರದಿಂದ ಈ ರೀತಿಯ ತೊಂದರೆಗಳನ್ನು ತಡೆಗಟ್ಟಬಹುದು. ಈ ಕಾರಣ ರಕ್ತದಾನ ಮಾಡಲು ಅರ್ಹರಿರುವೆಲ್ಲರೂ ಸಹ ರಕ್ತದಾನವನ್ನು ಮಾಡಬೇಕು ಎಂದರು.
ಸಂಜೀವಿನಿ ಬ್ಲಡ್ ಬ್ಯಾಂಕ್‌ನ ಅರುಣ್‌ಕುಮಾರ್ ಎಂ.ಎಸ್. ಮಾತನಾಡಿ, ತುರ್ತು ಸಂದರ್ಭಗಳಲ್ಲಿ ರಕ್ತದಾನ ಅಲಭ್ಯತೆಯಿಂದ ಸಾಕಷ್ಟು ಮಂದಿ ಮೃತಪಡುತ್ತಿದ್ದರು, ಇತ್ತೀಚಿನ ದಿನಗಳಲ್ಲಿ ರಕ್ತ ಲಭ್ಯವಾಗುವುದರಿಂದ ಸಾಯುವವರ ಸಂಖ್ಯೆ ಕಡಿಮೆಯಾಗಿದೆ. ರಕ್ತದಾನ ಮಾಡುವ ಮೂಲಕ ನೀವು ಆರೋಗ್ಯ ಕಾಪಾಡಿಕೊಳ್ಳಿ ಇತರರಿಗೆ ಜೀವದಾನ ಮಾಡಿ ಎಂದು ತಿಳಿಸಿದರು.
ಸುಮಾರು ೧೦೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ೮೨ ಯೂನಿಟ್ ರಕ್ತವನ್ನು ಶೇಖರಿಸಲಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ರೋಟರಿ ತುಮಕೂರು ಪ್ರೇರಣಾ ಅಧ್ಯಕ್ಷರಾದ ರಘು ಎಸ್, ರೋಟರಿ ಈಸ್ಟ್ ಕಾರ್ಯದರ್ಶಿ ಸೋಮಶೇಖರ್, ಅನನ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಶ್ವಾಸ್ ಎಂ., ಅನನ್ಯ ಕಾಲೇಜಿನ ಬಿಸಿಎ ವಿಭಾಗದ ಪ್ರಾಧ್ಯಾಪಕರಾದ ಭರತ್, ಕಚೇರಿ ಅಧೀಕ್ಷಕರಾದ ಪ್ರವೀಣ್ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


































