
ಮಧುಗಿರಿ, ಸೆ. ೪- ಭಾರತೀಯ ಜನತಾ ಪಕ್ಷ ನಡೆಸುತ್ತಿರುವ ಪಾದಯಾತ್ರೆಯು ರಾಜಕೀಯ ಪಾದಯಾತ್ರೆಯಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಕೆಎನ್ ರಾಜಣ್ಣ ಹೇಳಿದರು.
ಮಧುಗಿರಿಯಲ್ಲಿ ನಡೆದ ಅಕ್ಷರ ಅಮೃತ ಯೋಜನೆಯ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಡೆಸುತ್ತಿರುವ ಪಾದಯಾತ್ರೆಗಳು ಕೇವಲ ಪರಿಶಿಷ್ಟ ಪಂಗಡದ ಕ್ಷೇತ್ರಗಳಲ್ಲಿ ಸಂಚಾರ ನಡೆಸುತ್ತಿದ್ದಾರೆ. ಪರಿಶಿಷ್ಟ ಪಂಗಡದ ೧೫ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿದ್ದು ಒಬ್ಬರು ಬಿಜೆಪಿಯಿಂದ ಗೆದ್ದಿಲ್ಲ. ಈ ಹಿನ್ನೆಲೆಯಲ್ಲಿ ರಾಜಕೀಯ ಉದ್ದೇಶ ಇಟ್ಟುಕೊಂಡು ಪಾದಯಾತ್ರೆ ನಡೆಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಲು ಈ ಪಾದಯಾತ್ರೆ ರಾಜಕೀಯ ಉದ್ದೇಶವಾಗಿದೆ ಎಂದರು.
ಈ ಮೊದಲು ನಾಗೇಂದ್ರ ಅವರ ರಾಜೀನಾಮೆ ಕೇಳುತ್ತಿದ್ದರು. ಅವರು ರಾಜೀನಾಮೆ ಕೊಟ್ಟ ಮೇಲೆ ಪಾದಯಾತ್ರೆ ನಡೆಸಲು ಯಾವುದೇ ವಿಷಯವಿಲ್ಲ. ಕೇವಲ ರಾಜಕೀಯ ಉದ್ದೇಶಕ್ಕಾಗಿ ಪಾದಯಾತ್ರೆ ನಡೆಸುತ್ತಿದ್ದಾರೆ. ಎಂದು ತಿಳಿಸಿದ್ದಾರೆ. ಎಸ್‌ಟಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪದ ಬಗ್ಗೆ ಮಾತನಾಡಿ ಅದನ್ನು ಈಗ ಹೇಳುತ್ತಿಲ್ಲ ಮೊದಲಿನಿಂದಲೂ ಹೇಳುತ್ತಿದ್ದಾರೆ. ಈ ವಿಚಾರ ನ್ಯಾಯಾಲಯದಲ್ಲಿದ್ದು ನ್ಯಾಯಾಲಯದಲ್ಲಿ ಆದೇಶ ಆಗಬೇಕು. ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಒಟ್ಟಿನಲ್ಲಿ ಇದು ರಾಜಕೀಯ ದುರುದ್ದೇಶ ಕುರಿತ ಪಾದಯಾತ್ರೆ ಎಂದು ಪುನರುಚ್ಛರಿಸಿದರು.


































