
ಬೀದರ್:ಜು.೨೮:ಬಿದರಿ, ಬೀದರ ಜಿಲ್ಲೆಯ ಸಾಂಸ್ಕೃತಿಕ ವೇದಿಕೆಯಿಂದ ನಗರದ ಎಸ್‌ಆರ್‌ಎಸ್ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ರಾತ್ರಿ ಗಾನಕೋಗಿಲೆ ಎಸ್. ಜಾನಕಿ ಅಮ್ಮಾ ಅವರಿಗೆ ಭಾವಪೂರ್ಣ ಸ್ವರಾಂಜಲಿ ಸಲ್ಲಿಸಲಾಯಿತು.
ಬಿದರಿ ವೇದಿಕೆ ಅಧ್ಯಕ್ಷೆಯಾದ ಗಾಯಕಿ ರೇಖಾ ಅಪ್ಪಾರಾವ್ ಸೌದಿ ಅವರು ತಮ್ಮ ಸುಮಧುರ ಕಂಠಸಿರಿಯ ಮೂಲಕ ಜಾನಕಿ ಅಮ್ಮಾ ಅವರ ಹಲವು ಅಮರ ಗೀತೆಗಳನ್ನು ಹಾಡಿ ಸ್ವರನಮನ ಸಲ್ಲಿಸಿದರು.
ಭಾವ, ರಾಗ, ತಾಳ ಮತ್ತು ಸಾಹಿತ್ಯದ ಸೊಗಸನ್ನು ಅಚ್ಚುಕಟ್ಟಾಗಿ ಅಭಿವ್ಯಕ್ತಿಗೊಳಿಸಿದ ಖ್ಯಾತ ಗಾಯಕಿ, ಬಿದರಿ ಸಂಸ್ಥೆಯ ಅಧ್ಯಕ್ಷೆ, ರೇಖಾ ಸೌದಿ, ಸಭಿಕರಿಗೆ ಗಾನಲೋಕದಲ್ಲಿ ವಿಹರಿಸುವಂತೆ ಮಾಡಿದರು. ಗಾಯಕರಾದ ಶಿವಕುಮಾರ ಪಾಂಚಾಳ, ಮಹೇಶ ಕುಂಬಾರ, ಶಶಿಕುಮಾರ ಅವರು ಸಾಥ್ ನೀಡಿ ಸ್ವರಾಂಜಲಿ ಕಳೆ ಹೆಚ್ಚಿಸಿದರು.ಕೀಬೋರ್ಡನಲ್ಲಿ ಶಿವಾನಂದ ಭಜಂತ್ರಿ ವಿಜಯಪೂರ, ತಬಲಾ ರಮೇಶ ಹಾಗೂ ಪ್ಯಾಡ್ ನಲ್ಲಿ ಸುರೇಶ ಬಳ್ಳಾರಿ ಇದ್ದರು..
ಗಗನವು ಎಲ್ಲೋ ಭೂಮಿಯು ಎಲ್ಲೋ, ಮೂಡಲ ಮನೆಯ, ಬಾನಲ್ಲೂ ನೀನೇ, ಈ ಬಂಧನ, ಈ ಸಂಭಾಷಣೆ, ಜೊತೆ ಜೊತೆಯಲಿ, ದಿಲ್ ಮೇ ಹೋ ತುಮ್, ಕನಸಲಿ ಬಂದವನಾರೆ, ದೋಣಿ ಸಾಗಲಿ ಮುಂದೆ ಹೋಗಲಿ, ನಗುವ ನಯನ, ನೀ ಮೀಟಿದ ನೆನಪೆಲ್ಲವೂ, ಪೂಜಿಸಲೆಂದೆ ಹೂಗಳ ತಂದೆ, ಬಿಡೆನು ನಿನ್ನ ಪಾದ ಸೇರಿದಂತೆ ವಿವಿಧ ಹಾಡುಗಳ ಮುಖಾಂತರ ಜಾನಕಿ ಅಮ್ಮ ಅವರಿಗೆ ಸ್ವರಾಂಜಲಿ ಸ್ವರ ನಮನ ಸಲ್ಲಿಸಲಾಯಿತು.
ಸಾಹಿತಿ ಶಿವಲಿಂಗ ಹೇಡೆ ಅವರು ಎಸ್. ಜಾನಕಿ ಅಮ್ಮ ಅವರಿಗೆ ನುಡಿನಮನ ಸಲ್ಲಿಸಿದರು. ಕನ್ನಡ ಸೇರಿ ವಿವಿಧ ಭಾಷೆಗಳಲ್ಲಿ ೪೮ ಸಾವಿರಕ್ಕೂ ಅಧಿಕ ಹಾಡು ಹಾಡಿ ಅಪೂರ್ವ ದಾಖಲೆ ಮಾಡಿದ್ದಾರೆ. ಅವರ ಜೀವನವೇ ಕಲಾವಿದರಿಗೆ ಆದರ್ಶ ಮತ್ತು ಸ್ಫೂರ್ತಿಯಾಗಿದೆ. ಸಂಗೀತ ಸೀಮಾತೀತ. ಅದಕ್ಕೆ ಭಾಷೆಯ ಮಿತಿ ಇಲ್ಲ ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟ ಮಹಾನ್ ಕಲಾವಿದೆ. ತಮ್ಮ ಹಾಡುಗಳ ಮೂಲಕ ಜಾನಕಿ ಅಮ್ಮಾ ಅಮರರಾಗಿದ್ದಾರೆ ಎಂದು ಬಣ್ಣಿಸಿದರು.
ಗಾಯಕಿ ಹಾಗೂ ಬಿದರಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆಯಾದ ರೇಖಾ ಅಪ್ಪಾರಾವ್ ಸೌದಿ ಮಾತನಾಡಿ, ಸುಶ್ರಾವ್ಯ ಕಂಠದ ಮೂಲಕ ಎಸ್. ಜಾನಕಿ ಅಮ್ಮನವರು ಗಾಯನಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಪ್ರತಿ ಹಾಡು ಸಹ ಭಾವನೆಗಳ ಜೀವಂತ ನೆನಪಾಗಿವೆ. ತಲೆತಲೆಮಾರುಗಳಿಗೂ ಅವರ ಹಾಡುಗಳು ಸ್ಫೂರ್ತಿಯ ಅಮೂಲ್ಯ ನಿಧಿಯಾಗಿವೆ. ಕಳೆದ ವರ್ಷ ಬಿದರಿ ಸಾಂಸ್ಕೃತಿಕ ವೇದಿಕೆಯು ರಾಜ್ಯ ಮಟ್ಟದ ಬಿದರಿ ದತ್ತಿ ಪ್ರಶಸ್ತಿಯನ್ನು ಜಾನಕಿ ಅಮ್ಮನವರಿಗೆ ನೀಡಿ ಗೌರವಿಸಿರುವುದು ಬೀದರ ಜಿಲ್ಲೆಗೆ ಹೆಮ್ಮೆಯ ವಿಷಯ ಎಂದರು.
ಈ ಸಂದರ್ಭಧಲ್ಲಿ ಸ್ವರಾಂಜಲಿಗೆ ನೂರಾರು ಪ್ರೇಕ್ಷಕರು ಸಾಕ್ಷಿಯಾಗಿ ಸ್ವರ ಸರಸ್ವತಿಗೆ ಭಾವಪೂರ್ಣ ನಮನವನ್ನು ಸಲ್ಲಿಸಿದರು. ಈ ಕಾರ್ಯಕ್ರಮ ಕೋಟ್ಯಂತರ ಸಂಗೀತಾಭಿಮಾನಿಗಳ ಮನ ಗೆದ್ದ ಜಾನಕಿ ಅಮ್ಮನವರಿಗೆ ಅರ್ಪಿಸಿದ ಪ್ರೇಮಪೂರ್ವಕ ಶ್ರದ್ಧಾಂಜಲಿಯಾಗಿತ್ತು. ದೇವಿದಾಸ ಜೋಶಿ ನಿರೂಪಿಸಿದರು. ಬಿದರಿ ವೇದಿಕೆ ಪ್ರಮುಖರು ಇದ್ದರು.




























