Home ಮುಖಪುಟ ಸುದ್ದಿ ಬಿಡಿಎ ವಾಣಿಜ್ಯ ಸಂಕೀರ್ಣಗಳಿಗೆ ಗ್ರಹಣ ೮ ವರ್ಷ ಕಳೆದರೂ ಮುಗಿಯದ ನಿರ್ಮಾಣ

ಬಿಡಿಎ ವಾಣಿಜ್ಯ ಸಂಕೀರ್ಣಗಳಿಗೆ ಗ್ರಹಣ ೮ ವರ್ಷ ಕಳೆದರೂ ಮುಗಿಯದ ನಿರ್ಮಾಣ

ಬೆಂಗಳೂರು, ಸೆ. ೨೬- ಬೆಂಗಳೂರಿನ ಹೃದಯ ಭಾಗದಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಬಿಡಿಎ ವಾಣಿಜ್ಯ ಸಂಕೀರ್ಣಗಳ ಮರುನಿರ್ಮಾಣ ಯೋಜನೆ ಇದೀಗ ಮತ್ತೆ ಚರ್ಚೆಗೆ ಬಂದಿದೆ. ಸುಮಾರು ೧೫ ಸಾವಿರ ಕೋಟಿಗೂ ಅಧಿಕ ಮೌಲ್ಯದ ಬಿಡಿಎಗೆ ಸೇರಿದ ಏಳು ವಾಣಿಜ್ಯ ಸಂಕೀರ್ಣಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಮರುನಿರ್ಮಿಸಲು ಖಾಸಗಿ ಸಂಸ್ಥೆಗಳಿಗೆ ದೀರ್ಘಾವಧಿ ಗುತ್ತಿಗೆ ನೀಡಲಾಗಿದ್ದು, ಹಲವು ವರ್ಷಗಳು ಕಳೆದರೂ ಯೋಜನೆಗಳು ಪೂರ್ಣಗೊಳ್ಳದಿರುವುದು ವಿವಾದಕ್ಕೆ ಕಾರಣವಾಗಿದೆ.


ಇಂದಿರಾನಗರ, ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ಆರ್.ಟಿ.ನಗರ, ಆಸ್ಟಿನ್ ಟೌನ್, ವಿಜಯನಗರ ಹಾಗೂ ಸದಾಶಿವನಗರದಲ್ಲಿರುವ ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಮಲ್ಟಿಪ್ಲೆಕ್ಸ್ ಹಾಗೂ ಮಾಲ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಯೋಜನೆ ರೂಪಿಸಲಾಗಿತ್ತು. ಈ ಏಳು ಸಂಕೀರ್ಣಗಳಲ್ಲಿ ಒಟ್ಟು ೫೬೬ ಅಂಗಡಿಗಳಿದ್ದು, ಪ್ರಸ್ತುತ ಬಿಡಿಎಗೆ ವರ್ಷಕ್ಕೆ ಸುಮಾರು ೭ ಕೋಟಿ ಬಾಡಿಗೆ ಆದಾಯ ಬರುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

೬೫ ವರ್ಷಗಳ ಗುತ್ತಿಗೆ ಆರೋಪ ;


೨೦೧೭-೧೮ರಲ್ಲಿ ಈ ಸಂಕೀರ್ಣಗಳ ಮರುನಿರ್ಮಾಣಕ್ಕಾಗಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿತ್ತು. ಇಂದಿರಾನಗರ ಸಂಕೀರ್ಣದ ಅಭಿವೃದ್ಧಿಯನ್ನು ಒಚಿveಡಿiಛಿಞ ಊoಟಜiಟಿgs ಹಾಗೂ ಇmbಚಿssಥಿ ಉಡಿouಠಿ ಪಾಲುದಾರಿಕೆಯಲ್ಲಿ, ಉಳಿದ ಸಂಕೀರ್ಣಗಳನ್ನು ಖಾಸಗಿ ಅಭಿವೃದ್ಧಿದಾರರ ಮೂಲಕ ಕೈಗೊಳ್ಳಲು ಉದ್ದೇಶಿಸಲಾಗಿತ್ತು.


ಯೋಜನೆಯಡಿ ೩೫ ವರ್ಷಗಳ ಗುತ್ತಿಗೆ ಹಾಗೂ ಮತ್ತಷ್ಟು ೩೦ ವರ್ಷ ವಿಸ್ತರಣೆಗೆ ಅವಕಾಶ ಕಲ್ಪಿಸುವ ಮೂಲಕ ಒಟ್ಟು ೬೫ ವರ್ಷಗಳ ಅವಧಿಗೆ ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿ, ದಾಖಲೆಗಳೊಂದಿಗೆ ದೂರು ನೀಡಿದ್ದರು.


ನಂತರ ಸರ್ಕಾರ ಬದಲಾದ ಸಂದರ್ಭದಲ್ಲಿ ಟೆಂಡರ್ ಪ್ರಕ್ರಿಯೆ ರದ್ದುಗೊಂಡಿತ್ತು. ಆದರೆ ಬಳಿಕ ಇದೇ ಯೋಜನೆಗೆ ಮರುಜೀವ ನೀಡಲಾಗಿದೆ ಎಂಬುದು ಎನ್.ಆರ್. ರಮೇಶ್ ಅವರ ಆರೋಪವಾಗಿದೆ.


ಕಟ್ಟಡ ಕೆಡವಿದರು, ಹೊಸ ಕಟ್ಟಡ ಮಾತ್ರ ಇಲ್ಲ!


ಮರುನಿರ್ಮಾಣಕ್ಕಾಗಿ ಕೆಲವು ಸಂಕೀರ್ಣಗಳ ಹಳೆಯ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಆದರೆ ವರ್ಷಗಳು ಕಳೆದರೂ ಹೊಸ ಕಟ್ಟಡಗಳ ನಿರ್ಮಾಣ ಪೂರ್ಣಗೊಂಡಿಲ್ಲ. ಇದರಿಂದ ಒಂದೆಡೆ ಸಾರ್ವಜನಿಕ ಆಸ್ತಿಯಿಂದ ನಿರೀಕ್ಷಿತ ಆದಾಯ ಬಾರದಂತಾಗಿದ್ದರೆ, ಮತ್ತೊಂದೆಡೆ ವ್ಯಾಪಾರ ಚಟುವಟಿಕೆಗಳಿಗೂ ಅಡ್ಡಿಯಾಗಿದೆ ಎಂಬ ಆಕ್ಷೇಪಗಳು ಕೇಳಿಬರುತ್ತಿವೆ.


ಮರುನಿರ್ಮಾಣ ಯೋಜನೆಯಡಿ ಈSI ಅನ್ನು ೧ರಿಂದ ೨.೩ಕ್ಕೆ ಹೆಚ್ಚಿಸುವ ಉದ್ದೇಶವಿದ್ದು, ಇಂದಿರಾನಗರದಲ್ಲಿ ೧೦ ಅಂತಸ್ತಿನ ಕಚೇರಿ ಟವರ್ ಹಾಗೂ ಐದು ಅಂತಸ್ತಿನ ಶಾಪಿಂಗ್ ಟವರ್ ನಿರ್ಮಿಸುವ ಪ್ರಸ್ತಾವನೆ ಇದೆ. ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಎಂಟು ಅಂತಸ್ತಿನ ಕಟ್ಟಡ ನಿರ್ಮಿಸುವ ಯೋಜನೆಯೂ ಇದೆ.

೭೦೦ ಕೋಟಿ ಹೂಡಿಕೆ, ೪೦ ಕೋಟಿ ಆದಾಯ ನಿರೀಕ್ಷೆ:


PPP ಮಾದರಿಯಲ್ಲಿ ಖಾಸಗಿ ಸಂಸ್ಥೆಗಳು ಸುಮಾರು ೭೦೦ ಕೋಟಿ ಹೂಡಿಕೆ ಮಾಡಲಿದ್ದು, ಮರುನಿರ್ಮಾಣದ ಬಳಿಕ ಬಿಡಿಎಗೆ ವಾರ್ಷಿಕ ೩೮ರಿಂದ ೪೦ ಕೋಟಿ ಆದಾಯ ಬರಲಿದೆ ಎಂಬ ಲೆಕ್ಕಾಚಾರವನ್ನು ಯೋಜನೆಯಲ್ಲಿ ನೀಡಲಾಗಿದೆ.


ಇಂದಿರಾನಗರದಲ್ಲಿ ಆದಾಯ ಹಂಚಿಕೆ ೬೫:೩೫ರ ಅನುಪಾತದಲ್ಲಿದ್ದು, ಉಳಿದ ಯೋಜನೆಗಳಲ್ಲಿ ೭೦:೩೦ರ ಅನುಪಾತದ ಪ್ರಸ್ತಾವನೆ ಇದೆ ಎನ್ನಲಾಗಿದೆ. ಗುತ್ತಿಗೆ ಅವಧಿ ಪೂರ್ಣಗೊಂಡ ಬಳಿಕ ಅಭಿವೃದ್ಧಿಪಡಿಸಿದ ಆಸ್ತಿಗಳು ಬಿಡಿಎಗೆ ಮರಳಲಿವೆ ಎಂಬುದು ಯೋಜನೆಯ ಪ್ರಮುಖ ಅಂಶ.


ವ್ಯಾಪಾರಿಗಳ ವಿರೋಧ


ಕೋರಮಂಗಲ ಹಾಗೂ ಎಚ್‌ಎಸ್‌ಆರ್ ಲೇಔಟ್ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ವ್ಯಾಪಾರಿಗಳು ಮತ್ತು ನಿವಾಸಿಗಳ ಸಂಘಟನೆಗಳು ಯೋಜನೆಗೆ ವಿರೋಧ ವ್ಯಕ್ತಪಡಿಸಿವೆ. ಮರುನಿರ್ಮಾಣದ ಬಳಿಕ ಅಂಗಡಿಗಳ ಬಾಡಿಗೆ ಹೆಚ್ಚಾಗುವ ಸಾಧ್ಯತೆ, ಸ್ಥಳೀಯ ಸಣ್ಣ ವ್ಯಾಪಾರಿಗಳಿಗೆ ತೊಂದರೆ ಹಾಗೂ ವಾಹನ ದಟ್ಟಣೆ ಹೆಚ್ಚಾಗುವ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.


ನ್ಯಾಯಾಲಯದ ಮೆಟ್ಟಿಲೇರಿದ ವಿವಾದ


ಈ ಟೆಂಡರ್ ಪ್ರಕ್ರಿಯೆ ವಿರುದ್ಧ ಎನ್.ಆರ್. ರಮೇಶ್ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದು, ರಾಜ್ಯ ಹೈಕೋರ್ಟ್‌ನಲ್ಲಿಯೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ. ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದ್ದು, ಬಿಡಿಎ ಅಧಿಕಾರಿಗಳು ಸರ್ಕಾರದ ಆದೇಶದಂತೆ ಕ್ರಮ ಕೈಗೊಂಡಿರುವುದಾಗಿ ನ್ಯಾಯಾಲಯಕ್ಕೆ ಉತ್ತರಿಸಿರುವುದಾಗಿ ಆರೋಪಿಸಲಾಗಿದೆ.


ಬಿಡಿಎ ಈಗಾಗಲೇ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ತನ್ನ ಅಮೂಲ್ಯ ವಾಣಿಜ್ಯ ಆಸ್ತಿಗಳನ್ನು ದೀರ್ಘಾವಧಿಗೆ ಖಾಸಗಿ ಸಂಸ್ಥೆಗಳಿಗೆ ನೀಡುವ ಯೋಜನೆಯ ಅಗತ್ಯವೇನು ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.


ಎಂಟು ವರ್ಷಗಳ ಬಳಿಕವೂ ನಿರ್ಮಾಣ ಪೂರ್ಣವಾಗದಿರುವ ಹಿನ್ನೆಲೆಯಲ್ಲಿ?ಈ ಏಳು ಸಂಕೀರ್ಣಗಳು ಯಾವಾಗ ಪೂರ್ಣಗೊಳ್ಳಲಿವೆ? ಸಾರ್ವಜನಿಕರ ಬಳಕೆಗೆ ಯಾವಾಗ ಮುಕ್ತವಾಗಲಿವೆ? ಬಿಡಿಎಗೆ ನಿರೀಕ್ಷಿತ ಆದಾಯ ಯಾವಾಗ ಬರಲಿದೆ? ಎಂಬ ಪ್ರಶ್ನೆಗಳಿಗೆ ಸರ್ಕಾರ ಮತ್ತು ಬಿಡಿಎ ಸ್ಪಷ್ಟ ಉತ್ತರ ನೀಡಬೇಕಿದೆ.