Home Lead News ಬಂದ್‌ಗೆ ಸಿಗದ ಬೆಂಬಲ

ಬಂದ್‌ಗೆ ಸಿಗದ ಬೆಂಬಲ

ಬೆಂಗಳೂರು, ಆ.೧೩: ಕಾವೇರಿ ನೀರು ಸೇರಿದಂತೆ ರಾಜ್ಯದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರೆ ನೀಡಲಾಗಿದ್ದ ಕರ್ನಾಟಕ ಬಂದ್‌ಗೆ ರಾಜಧಾನಿ ಬೆಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್‌ಗೆ ಸಾರ್ವಜನಿಕರಿಂದ ನಿರೀಕ್ಷಿತ ಬೆಂಬಲ ಸಿಗದೆ, ನಗರದಲ್ಲಿ ಜನಜೀವನ ಎಂದಿನಂತೆ ಮುಂದುವರಿಯಿತು.


ನಾಡು, ನುಡಿ, ಭಾಷೆ ಹಾಗೂ ನೆಲದ ವಿಚಾರದಲ್ಲಿ ಅನ್ಯಾಯವಾದರೆ ಸುಮ್ಮನಿರುವುದಿಲ್ಲ ಎಂದು ಹೇಳಿಕೊಂಡು ಬಂದಿರುವ ಕನ್ನಡಪರ ಸಂಘಟನೆಗಳು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿವೆ. ೧೫ ದಿನಗಳ ಕಾಲ ೧೨ ಸಾವಿರ ಕ್ಯೂಸೆಕ್ ನೀರು ಹರಿಸುವ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸಂಘಟನೆಗಳು, ಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆ ಜಾರಿ, ಮೇಕೆದಾಟು ಯೋಜನೆಗೆ ವೇಗ, ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹಾಗೂ ಬೆಳಗಾವಿಯನ್ನು ಕರ್ನಾಟಕದ ಅವಿಭಾಜ್ಯ ಅಂಗವೆಂದು ಘೋಷಿಸುವಂತೆ ಆಗ್ರಹಿಸಿವೆ.


ಆದರೆ ಬಂದ್‌ಗೆ ಬೆಂಗಳೂರಿನಲ್ಲಿ ಹೇಳಿಕೊಳ್ಳುವಂತಹ ಬೆಂಬಲ ವ್ಯಕ್ತವಾಗಲಿಲ್ಲ. ನಗರದ ಬಹುತೇಕ ಅಂಗಡಿ-ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು, ಮೆಟ್ರೋ, ಆಟೋ, ಟ್ಯಾಕ್ಸಿ ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಹಜವಾಗಿಯೇ ಕಾರ್ಯನಿರ್ವಹಿಸಿತು. ಮೆಜೆಸ್ಟಿಕ್, ಸ್ಯಾಟಲೈಟ್ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಬಸ್ ಸಂಚಾರದಲ್ಲಿ ಯಾವುದೇ ದೊಡ್ಡ ವ್ಯತ್ಯಯ ಕಂಡುಬರಲಿಲ್ಲ. ಚಿತ್ರಮಂದಿರಗಳು ಮೊದಲ ಶೋ ನಡೆಸಿದರೆ, ಹೋಟೆಲ್, ಬಾರ್ ಮತ್ತು ಮಾಲ್‌ಗಳು ಕೂಡ ಎಂದಿನಂತೆ ತೆರೆದಿದ್ದವು. ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳ ಸೇವೆಯಲ್ಲೂ ಯಾವುದೇ ವ್ಯತ್ಯಯವಾಗಲಿಲ್ಲ.


ಬಂದ್ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಟೌನ್‌ಹಾಲ್, ಕೆ.ಆರ್. ಮಾರುಕಟ್ಟೆ, ಮೈಸೂರು ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಟೌನ್‌ಹಾಲ್‌ನಲ್ಲಿ ನಾಲ್ಕು ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.


ಬಂದ್‌ಗೆ ಕರೆ ನೀಡಿದ್ದ ಸಂಘಟನೆಗಳಿಗೆ ಪೊಲೀಸರು ನೋಟಿಸ್ ನೀಡಿ, ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಬಂದ್ ಅಥವಾ ಪ್ರತಿಭಟನೆ ನಡೆಸದಂತೆ ಸೂಚಿಸಿದ್ದರು. ಪ್ರತಿಭಟನೆ ನಡೆಸುವುದಾದರೆ ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ನಡೆಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದ್ದರು. ಒತ್ತಾಯಪೂರ್ವಕವಾಗಿ ಅಂಗಡಿ ಮುಚ್ಚಿಸುವುದು, ವಾಹನ ಸಂಚಾರಕ್ಕೆ ಅಡ್ಡಿಪಡಿಸುವುದು ಅಥವಾ ಆಸ್ತಿ-ಪಾಸ್ತಿಗೆ ಹಾನಿ ಮಾಡುವುದು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.


ಈ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ ಸೇರಿದಂತೆ ಹಲವು ಕನ್ನಡಪರ ಕಾರ್ಯಕರ್ತರನ್ನು ಪೊಲೀಸರು ಮುಂಜಾನೆಯೇ ವಶಕ್ಕೆ ಪಡೆದರು. ಟೌನ್‌ಹಾಲ್‌ಗೆ ಪ್ರತಿಭಟನೆಗೆ ತೆರಳುತ್ತಿದ್ದ ಕಾರ್ಯಕರ್ತರನ್ನು ವಶಕ್ಕೆ ಪಡೆದು ಬಳಿಕ ಫ್ರೀಡಂ ಪಾರ್ಕ್ ಬಳಿ ಬಿಡಲಾಯಿತು. ವಾಟಾಳ್ ನಾಗರಾಜ್ ಅವರನ್ನು ಸಿಆರ್‌ಪಿ ಮೈದಾನದಲ್ಲಿ ಇರಿಸಲಾಗಿತ್ತು.


ವಶಕ್ಕೆ ಪಡೆದ ಬಳಿಕ ಮಾತನಾಡಿದ ವಾಟಾಳ್ ನಾಗರಾಜ್, ಬಂದ್ ಯಶಸ್ವಿಯಾಗದಂತೆ ಸರ್ಕಾರವೇ ಪೊಲೀಸರನ್ನು ಬಳಸಿಕೊಂಡು ಅಡ್ಡಿಪಡಿಸಿದೆ ಎಂದು ಆರೋಪಿಸಿದರು. ಬೆಳಗ್ಗೆ ೬ರಿಂದ ಸಂಜೆ ೬ರವರೆಗೆ ಬಂದ್ ನಡೆಸುವುದಾಗಿ ಘೋಷಿಸಿದ್ದರೂ, ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಈ ನಡುವೆ ತಮಿಳುನಾಡಿಗೆ ತೆರಳುವ ಎಸ್‌ಇಟಿಸಿ ಬಸ್‌ಗಳ ಸಂಚಾರಕ್ಕೂ ಯಾವುದೇ ನಿರ್ಬಂಧ ವಿಧಿಸಲಾಗಲಿಲ್ಲ. ಶಾಂತಿನಗರದಿಂದ ತಮಿಳುನಾಡಿನತ್ತ ಬಸ್‌ಗಳು ಎಂದಿನಂತೆ ಸಂಚರಿಸಿದವು. ಪರಿಸ್ಥಿತಿ ಬಿಗಡಾಯಿಸಿದರೆ ಗಡಿಯವರೆಗೂ ಪೊಲೀಸ್ ಭದ್ರತೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಬೆಳಗ್ಗೆ ೫ ಗಂಟೆಯಿಂದಲೇ ನಮ್ಮ ಮೆಟ್ರೋ ಸೇವೆ ಆರಂಭವಾಗಿದ್ದು, ಸಂಚಾರದಲ್ಲಿ ಯಾವುದೇ ವ್ಯತ್ಯಯ ಕಂಡುಬರಲಿಲ್ಲ. ಪ್ರಯಾಣಿಕರ ಸಂಖ್ಯೆ ಕೊಂಚ ಕಡಿಮೆಯಾಗಿದ್ದರೂ ಮೆಟ್ರೋ ಸೇವೆ ಸಹಜವಾಗಿತ್ತು.


ಬಂದ್‌ಗೆ ಸಂಘಟನೆಗಳ ನಡುವಿನ ಒಗ್ಗಟ್ಟಿನ ಕೊರತೆ, ನಾಯಕರಲ್ಲಿನ ಗೊಂದಲ, ಎಲ್ಲ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಾಧ್ಯವಾಗದಿರುವುದು, ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾದ ಬೆಂಬಲ ಹಾಗೂ ನಿರಂತರ ಮಳೆಯೂ ಕಾರಣವಾಗಿರಬಹುದು ಎಂಬ ಮಾತುಗಳು ಕೇಳಿಬಂದಿವೆ.
ಒಟ್ಟಾರೆ, ರಾಜ್ಯದ ಜಲಂತ ಸಮಸ್ಯೆಗಳು ಹಾಗೂ ಕನ್ನಡ-ಕರ್ನಾಟಕದ ಹಿತಾಸಕ್ತಿಯ ವಿಚಾರ ಮುಂದಿಟ್ಟುಕೊಂಡು ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಬೆಂಗಳೂರಿನಲ್ಲಿ ಬೆಂಬಲ ಸಿಗಲಿಲ್ಲ. ಬಂದ್‌ಗಿಂತ ಪ್ರತಿಭಟನೆ ಮತ್ತು ಪೊಲೀಸ್ ವಶಕ್ಕೆ ಪಡೆದ ಘಟನೆಗಳೇ ಹೆಚ್ಚು ಗಮನ ಸೆಳೆದವು. ನಗರದಲ್ಲಿ ಅಂಗಡಿ-ಮುಂಗಟ್ಟುಗಳು ತೆರೆದಿದ್ದು, ಬಸ್, ಮೆಟ್ರೋ, ಆಟೋ ಸೇರಿದಂತೆ ವಾಹನ ಸಂಚಾರ ಎಂದಿನಂತೆ ನಡೆದ ಪರಿಣಾಮ ರಾಜಧಾನಿ ಸಹಜ ಸ್ಥಿತಿಯಲ್ಲೇ ಕಂಡುಬಂತು.

ಡಿಕೆಶಿ ಧನ್ಯವಾದ
“ರಾಜ್ಯದ ಹಿತಕ್ಕಾಗಿ ಬಂದ್ ವಾಪಸ್ ಪಡೆದಿರುವ ಎಲ್ಲಾ ಸಂಘಟನೆಗಳಿಗೆ ಧನ್ಯವಾದಗಳು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
sಸುದ್ಧಿಗಾರರೊಂದಿಗೆ ಮಾತನಾಡಿದ ಅವರು, “ಎಲ್ಲಾ ಕನ್ನಡಪರ ಸಂಘಟನೆಗಳ ಮುಖಂಡರು ನನ್ನನ್ನು ಭೇಟಿ ಮಾಡಿ ಬಂದ್ ಹಿಂಪಡೆದಿರುವ ಬಗ್ಗೆ ಮಾಹಿತಿ ನೀಡಿದರು. ರಾಜ್ಯದ ಜನರ ಹಿತ ಹಾಗೂ ರೈತರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಅವರು ಕೆಲವು ಬೇಡಿಕೆ ಇಟ್ಟಿದ್ದಾರೆ. ಅವರ ಬೇಡಿಕೆಗಳನ್ನು ಪರಿಶೀಲನೆ ಮಾಡುವೆ. ಅವರ ಸಹಕಾರಕ್ಕೆ ಕೃತಜ್ಞತೆ” ಸಲ್ಲಿಸುವುದಾಗಿ ಹೇಳಿದರು.

ಸಿಎಂಗೆ ಮನವಿ
ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷ ಎಚ್. ಶಿವರಾಮೇಗೌಡ ಅಖಿಲ ಕರ್ನಾಟಕ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ ಗೋವಿಂದು ಕನ್ನಡ ಪರ ಹೋರಾಟಗಾರರಾದ ಪಾಲನೇತ್ರ. ಸಿ. ಕೆ. ರಾಮೇಗೌಡ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ , ಕರ್ನಾಟಕ ರಕ್ಷಣಾ ವೇದಿಕೆಯ ಯುವ ಘಟಕದ ಅಧ್ಯಕ್ಷ ಕನ್ನಡ ಕುಮಾರ್ ಬೆಂಗಳೂರು ಜಿಲ್ಲಾಧ್ಯಕ್ಷ ಶಂಕರ್ ಮತ್ತು ಸಮರಸೇನೆಯ ಅಧ್ಯಕ್ಷ ಜಗದೀಶ್ ಗೌಡ ಮುಂತಾದವರು ಭೇಟಿ ಮಾಡಿ ಕಾವೇರಿ ನದಿ ನೀರಿನ ವಿಷಯದಲ್ಲಿ ರಾಜ್ಯ ಸರ್ಕಾರ ಕರ್ನಾಟಕದ ನೀರಾವರಿ ಯೋಜನೆಗಳನ್ನು ಕೂಡಲೆ ಕೈಗೆತ್ತಿಕೊಳ್ಳಬೇಕೆಂದು