Home Lead News ಸಚಿವರ ಖಾತೆ ಅಂತಿಮ

ಸಚಿವರ ಖಾತೆ ಅಂತಿಮ

ಬೆಂಗಳೂರು, ಆ. ೧೦- ರಾಜ್ಯ ಸಚಿವ ಸಂಪುಟಕ್ಕೆ ಸಣ್ಣ ಪ್ರಮಾಣದಲ್ಲಿ ಸರ್ಜರಿ ಮಾಡಿ ನೂತನ ಸಚಿವರಿಗೆ ಖಾತೆ ಹಂಚುವ ಸಂಬಂಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ವರಿಷ್ಠರ ಜತೆ ಚರ್ಚೆ ನಡೆಸಿದ್ದು, ಇಂದು ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಲಿದ್ದು, ಸಂಪುಟಕ್ಕೆ ಸಣ್ಣ ಪ್ರಮಾಣದಲ್ಲಿ ಸರ್ಜರಿ ನಡೆಯುವ ಬಗ್ಗೆ ಇನ್ನು ಸ್ಪಷ್ಟ ನಿರ್ಧಾರಕ್ಕೆ ಬರಲಾಗಿಲ್ಲ.


ನೂತನ ಸಚಿವರಿಗೆ ಖಾತೆ ಹಂಚಿಕೆ ಅಂತಿಮಗೊಳಿಸಲು ಹಾಗೂ ಸಚಿವ ಸ್ಥಾನ ವಂಚಿತ ಅಸಮಾಧಾನಿತರನ್ನು ಸಮಾಧಾನಗೊಳಿಸಲು ಸಣ್ಣ ಪ್ರಮಾಣದಲ್ಲಿ ಸಂಪುಟ ಪುನಾರಚಿಸುವ ನಿಟ್ಟಿನಲ್ಲಿ ಹೈಕಮಾಂಡ್ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿನ್ನೆ ರಾತ್ರಿ ದೆಹಲಿಗೆ ತೆರಳಿದ್ದರು. ನಿನ್ನೆ ತಡರಾತ್ರಿವರೆಗೂ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೊಂದಿಗೆ ಈ ವಿಚಾರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದರು.


ಇದಾದ ಬಳಿಕ ಇಂದು ಬೆಳಿಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೊಪಾಲ್‌ರವರೊಂದಿಗೆ ಚರ್ಚೆ ನಡೆಸಿದರು
ಸಚಿವರ ಖಾತೆ ಹಂಚಿಕೆ ಬಹುತೇಕ ಅಂತಿಮಗೊಂಡಿದ್ದು, ಇಂದು ಸಂಜೆಯೊಳಗೆ ಎಲ್ಲಾ ನೂತನ ಸಚಿವರಿಗೂ ಖಾತೆ ಹಂಚಿಕೆಯಾಗಲಿದೆ.


ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಶಾಸಕರ ಮುನಿಸು ತಣಿಸಲು ಸಣ್ಣ ಪ್ರಮಾಣದಲ್ಲಿ ಸಂಪುಟ ಪುನಾರಚನೆಗೂ ಚಿಂತನೆ ನಡೆದಿತ್ತಾದರೂ ಸದ್ಯಕ್ಕೆ ಈ ವಿಚಾರದಲ್ಲಿ ಯಾವುದೇ ತೀರ್ಮಾನಗಳು ಆಗಿಲ್ಲ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.


ಬರುವ ಗುರುವಾರದಿಂದ ವಿಧಾನ ಮಂಡಲದ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದು, ನೂತನ ಸಚಿವರುಗಳಿಗೆ ಖಾತೆ ಹಂಚಿಕೆ ಅನಿವಾರ್ಯತೆ ಎದುರಾಗಿದೆ. ಹಾಗಾಗಿ ಮೊದಲು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲು ವರಿಷ್ಠರು ಸೂಚಿಸಿದ್ದು, ಅದರಂತೆ ನೂತನ ಸಚಿವರಿಗೆ ಖಾತೆ ಹಂಚಿಕೆ ಕಾರ್ಯ ಮೊದಲು ಆಗಲಿದ್ದು, ಇದಾದ ಬಳಿಕ ಸಂಪುಟಕ್ಕೆ ಸಣ್ಣ ಸರ್ಜರಿ ಮಾಡುವ ಬಗ್ಗೆ ತೀರ್ಮಾನಗಳು ಆಗಲಿವೆ.


ಕಾಂಗ್ರೆಸ್‌ನ ಈಗಿನ ಸ್ಥಿತಿಗತಿಗಳನ್ನು ಗಮನಿಸಿದರೆ ಅಧಿವೇಶನಕ್ಕೂ ಮುನ್ನ ಸಂಪುಟಕ್ಕೆ ಸಣ್ಣ ಪ್ರಮಾಣದಲ್ಲಿ ಸರ್ಜರಿ ನಡೆಸುವ ಸಾಧ್ಯತೆಗಳು ಕಡಿಮೆ ಇದೆ.
ಅಧಿವೇಶನ ನಡೆಯುತ್ತಿರುವಾಗ ಅಥವಾ ಮುಗಿದ ನಂತರ ಸಂಪುಟದಲ್ಲಿ ಸಣ್ಣ ಪ್ರಮಾಣದ ಬದಲಾವಣೆಗಳಾಗುವ ಸಾಧ್ಯತೆಗಳಿವೆ.


ಈಗ ಸಚಿವರಾಗಿರುವ ಬಿ. ನಾಗೇಂದ್ರರವರಿಗೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪನ್ನು ನೋಡಿಕೊಂಡು ಸಚಿವ ಸಂಪುಟದಲ್ಲಿ ಸಣ್ಣ ಪ್ರಮಾಣದಲ್ಲಿ ಬದಲಾವಣೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ.


ಹಾಗಾಗಿ ಸಚಿವ ಸ್ಥಾನ ವಂಚಿತ ಶಾಸಕರುಗಳು ಇನ್ನು ಸ್ವಲ್ಪ ದಿನ ಕಾಯುವ ಪರಿಸ್ಥಿತಿ ಸೃಷ್ಟಿಯಾಗಿದೆ.


ಸಚಿವ ಸಂಪುಟ ವಿಸ್ತರಣೆಯ ನಂತರ ಸಚಿವ ಸ್ಥಾನ ಸಿಗದ ಕೆಲ ಶಾಸಕರುಗಳು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಸಣ್ಣ ಪ್ರಮಾಣದ ಬದಲಾವಣೆ ಮಾಡಲು ನಿರ್ಧರಿಸಿದ್ದರಾದರೂ ಈ ಬದಲಾವಣೆ ಸ್ವಲ್ಪ ತಡವಾಗಬಹುದು.


ಖಾತೆ ಹಂಚಿಕೆ ಫೈನಲ್


ನೂತನ ಸಚಿವರಿಗೆ ಖಾತೆ ಹಂಚಿಕೆ ಅಂತಿಮಗೊಂಡಿದ್ದು, ಹಾಲಿ ಸಂಪುಟದಲ್ಲಿರುವ ಒಂದಿಬ್ಬರು ಸಚಿವರ ಖಾತೆಗಳು ಬದಲಾವಣೆಯಾಗುವ ಸಾಧ್ಯತೆಗಳು ಇವೆ.
ಸಮಾಜ ಕಲ್ಯಾಣ ಇಲಾಖೆ ಮೇಲೆ ಮೂವರು ಸಚಿವರು ಕಣ್ಣಿಟ್ಟಿದ್ದು, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಮಾಜ ಕಲ್ಯಾಣ ಖಾತೆ ಕೇಳಿದ್ದಾರೆ. ಇವರ ಜತೆಗೆ ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಶಿವರಾಜ್ ತಂಗಡಗಿ ಸಹ ಸಮಾಜ ಕಲ್ಯಾಣ ಖಾತೆಗೆ ಬೇಡಿಕೆ ಇಟ್ಟಿದ್ದು, ಇವರೊಂದಿಗೆ ನೂತನ ಸಚಿವರಾಗಿರುವ ನರೇಂದ್ರಸ್ವಾಮಿ ಸಹ ಸಮಾಜ ಕಲ್ಯಾಣ ಇಲಾಖೆಯನ್ನೇ ಕೇಳಿದ್ದಾರೆ.


ಯಾವ ಸಚಿವರಿಗೆ ಯಾವ ಖಾತೆ ನೀಡಬೇಕು ಎನ್ನುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ. ವೇಣುಗೋಪಾಲ್ ರವರ ಜತೆ ಚರ್ಚಿಸಿ ನೂತನ ಸಚಿವರ ಖಾತೆಗಳನ್ನು ಅಂತಿಮಗೊಳಿಸಿದ್ದು, ದೆಹಲಿಯಿಂದ ಇಂದು ವಾಪಸ್ಸಾದ ನಂತರ ಸಚಿವರುಗಳ ಖಾತೆ ಹಂಚಿಕೆ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಲಿದ್ದಾರೆ.


ಹಾಲಿ ಆರೋಗ್ಯ ಸಚಿವರಾಗಿರುವ ಯು.ಟಿ. ಖಾದರ್ ಮತ್ತು ನಗರಾಭಿವೃದ್ಧಿ ಸಚಿವರಾಗಿರುವ ಯತೀಂದ್ರ ಸಿದ್ದರಾಮಯ್ಯರವರ ಖಾತೆಗಳು ಬದಲಾಗಲಿದ್ದು, ಡಾ. ಯತೀಂದ್ರ ಸಿದ್ದರಾಮಯ್ಯನವರಿಗೆ ಆರೋಗ್ಯ ಖಾತೆ, ಯು.ಟಿ. ಖಾದರ್ ರವರಿಗೆ ನಗರಾಭಿವೃದ್ಧಿ ಖಾತೆ ಹಂಚಿಕೆಯಾಗುವ ಸಾಧ್ಯತೆ ಇದೆ.


ಉಳಿದಂತೆ ನೂತನ ಸಚಿವರುಗಳಾದ ಬಸವರಾಜ ರಾಯರೆಡ್ಡಿ ರವರಿಗೆ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ, ಎಸ್.ಎಸ್. ಮಲ್ಲಿಕಾರ್ಜುನ್ ರವರಿಗೆ ತೋಟಗಾರಿಕೆ ಮತ್ತು ಗಣಿ, ಭೂವಿಜ್ಞಾನ, ಎನ್. ಚಲುವರಾಯಸ್ವಾಮಿಯವರಿಗೆ ಕೃಷಿ, ಎಂ. ಶಿವಲಿಂಗೇಗೌಡರಿಗೆ ವಸತಿ, ಲಕ್ಷ್ಮಣಸವದಿರವರಿಗೆ ಸಹಕಾರ ಹಾಗೂ ಸಕ್ಕರೆ, ಮಧು ಬಂಗಾರಪ್ಪರವರಿಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ, ಜಮೀರ್ ಅಹಮದ್ ಖಾನ್ ರವರಿಗೆ ವಕ್ಫ್, ಹಜ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ, ಕೆ.ಎನ್. ಬಸವಂತಪ್ಪರವರಿಗೆ ಪೌರಾಡಳಿತ, ವಿಜಯಾನಂದ ಕಾಶಂಪ್ಪನವರ್ ರವರಿಗೆ ಕೈಮಗ್ಗ, ಜವಳಿ, ಕೃಷಿ ಮಾರುಕಟ್ಟೆ, ಅಜಯ್ ಸಿಂಗ್ ರವರಿಗೆ ಸಣ್ಣ ಕೈಗಾರಿಕೆ, ರುದ್ರಪ್ಪ ಲಮಾಣಿರವರಿಗೆ ಅಬಕಾರಿ, ಹೆಚ್.ಸಿ. ಬಾಲಕೃಷ್ಣರವರಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ, ರಿಜ್ವಾನ್ ಅರ್ಷದ್ ರವರಿಗೆ ಉನ್ನತ ಶಿಕ್ಷಣ, ಪುಟ್ಟರಂಗಶೆಟ್ಟಿರವರಿಗೆ ಪಶುಸಂಗೋಪನೆ ಮತ್ತು ರೇಷ್ಮೆ, ಬಿ. ನಾಗೇಂದ್ರ ರವರಿಗೆ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ, ಸಂತೋಷ್ ಎಸ್. ಲಾಡ್ ರವರಿಗೆ ಕಾರ್ಮಿಕ ಇಲಾಖೆ, ಶಿವರಾಜ್ ತಂಗಡಿರವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ, ಟಿ. ರಘುಮೂರ್ತಿರವರಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ.