
ನವದೆಹಲಿ, ಆ. 13- ಆಹಾರ ಪದಾರ್ಥಗಳಲ್ಲಿ ಉಪ್ಪು ಮತ್ತು ಸಕ್ಕರೆಯ ಪ್ರಮಾಣವನ್ನು ಸ್ಪಷ್ಟವಾಗಿ ನಮೂದಿಸುವ ಲೇಬಲಿಂಗ್ ನಿಯಮ ಜಾರಿಗೊಳಿಸುವ ವಿಷಯದಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಅಂತಿಮ ಎಚ್ಚರಿಕೆ ನೀಡಿದೆ. “ಈ ಸಂಬಂಧ ಸೂಕ್ತ ನಿಯಮಾವಳಿಗಳನ್ನು ರೂಪಿಸಲು ನಿಮ್ಮಿಂದ ಸಾಧ್ಯವಾಗದಿದ್ದರೆ, ಆ ಕೆಲಸವನ್ನು ನಾವೇ ಮಾಡುತ್ತೇವೆ” ಎಂದು ಸರ್ವೋಚ್ಚ ನ್ಯಾಯಾಲಯವು ಖಡಕ್ ಆಗಿ ಹೇಳಿದೆ.
ಆಹಾರ ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲೆ ಉಪ್ಪು, ಸಕ್ಕರೆ ಹಾಗೂ ಇತರೆ ಪೌಷ್ಟಿಕಾಂಶಗಳ ಪ್ರಮಾಣವನ್ನು ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸುವ ಲೇಬಲಿಂಗ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕೆಂದು ಒತ್ತಾಯಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಈ ಸಖತ್ ಎಚ್ಚರಿಕೆ ನೀಡಿದೆ.
ಸಾರ್ವಜನಿಕರ ಆರೋಗ್ಯ ಭದ್ರತೆಯ ದೃಷ್ಟಿಯಿಂದ ಆಹಾರ ಪದಾರ್ಥಗಳಲ್ಲಿನ ಅಂಶಗಳ ಕುರಿತು ಗ್ರಾಹಕರಿಗೆ ಸಂಪೂರ್ಣ ಪಾರದರ್ಶಕತೆ ಇರಬೇಕಾದುದು ಅತ್ಯಗತ್ಯ ಎಂದು ಪೀಠವು ಅಭಿಪ್ರಾಯಪಟ್ಟಿದೆ. ಈ ವಿಷಯದಲ್ಲಿ ನಿಯಮ ರೂಪಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರವು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯವೇ ನೇರವಾಗಿ ಮಾರ್ಗಸೂಚಿಗಳನ್ನು ಹೊರಡಿಸಲಿದೆ ಎಂದು ಸ್ಪಷ್ಟಪಡಿಸಿದೆ.
































