
ಬೆಂಗಳೂರು, ಆ.13- ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಬದಿ ವಾಹನ ನಿಲ್ಲಿಸುವ ಕಾರು ಮಾಲೀಕರಿಗೆ ವಾರ್ಷಿಕ ಗರಿಷ್ಠ 25,000 ರೂಪಾಯಿವರೆಗೆ ಪಾರ್ಕಿಂಗ್ ಶುಲ್ಕ ವಿಧಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.
ನಗರಾಭಿವೃದ್ಧಿ ಇಲಾಖೆಯು ಈ ಕುರಿತು ‘ಬೃಹತ್ ಬೆಂಗಳೂರು ಪ್ರದೇಶ (ಪಾರ್ಕಿಂಗ್) ನಿಯಮಗಳು, 2026’ರ ಕರಡು ಅಧಿಸೂಚನೆಯನ್ನು ಹೊರಡಿಸಿದೆ.
ಹೊಸ ಕರಡು ನೀತಿಯನ್ವಯ, ವಸತಿ ಪ್ರದೇಶಗಳಲ್ಲಿ ಮನೆ ಮುಂದಿನ ರಸ್ತೆ ಬದಿ ಕಾರುಗಳನ್ನು ಪಾರ್ಕಿಂಗ್ ಮಾಡಲು ವಾಹನಗಳ ಮಾದರಿಗೆ ಅನುಗುಣವಾಗಿ ವಾರ್ಷಿಕ ಪರ್ಮಿಟ್ ಶುಲ್ಕ ನಿಗದಿಪಡಿಸಲಾಗಿದೆ. ಸಣ್ಣ ಕಾರುಗಳಿಗೆ ವರ್ಷಕ್ಕೆ 15,000 ರೂಪಾಯಿ, ಸಿಡಾನ್ ಮಾದರಿಯ ಕಾರುಗಳಿಗೆ 20,000 ರೂಪಾಯಿ ಹಾಗೂ ಎಸ್‌ಯುವಿ ಕಾರುಗಳಿಗೆ 25,000 ರೂಪಾಯಿ ವಾರ್ಷಿಕ ಪರ್ಮಿಟ್ ಶುಲ್ಕ ವಿಧಿಸಲು ಪ್ರಸ್ತಾವಿಸಲಾಗಿದೆ.
ವಸತಿಯೇತರ ರಸ್ತೆಗಳಲ್ಲಿಯೂ ಆಯಾ ರಸ್ತೆಗಳ ವರ್ಗೀಕರಣ ಆಧರಿಸಿ ಗಂಟೆಯ ಆಧಾರದಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹಿಸಲು ನಿರ್ಧರಿಸಲಾಗಿದೆ. ‘ಎ’ ವರ್ಗದ ರಸ್ತೆಗಳಲ್ಲಿ ಕಾರುಗಳಿಗೆ ಗಂಟೆಗೆ 80 ರೂಪಾಯಿ ಹಾಗೂ ದ್ವಿಚಕ್ರ ವಾಹನಗಳಿಗೆ 40 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ.
‘ಬಿ’ ವರ್ಗದ ರಸ್ತೆಗಳಲ್ಲಿ ಕಾರುಗಳಿಗೆ 60 ರೂಪಾಯಿ, ದ್ವಿಚಕ್ರ ವಾಹನಗಳಿಗೆ 30 ರೂಪಾಯಿ ಹಾಗೂ ‘ಸಿ’ ವರ್ಗದ ರಸ್ತೆಗಳಲ್ಲಿ ಕಾರುಗಳಿಗೆ 40 ರೂಪಾಯಿ ಮತ್ತು ದ್ವಿಚಕ್ರ ವಾಹನಗಳಿಗೆ 20 ರೂಪಾಯಿ ನಿಗದಿ ಮಾಡಲಾಗಿದೆ.
ಅಂತೆಯೇ, ರಸ್ತೆ ಬದಿಯಲ್ಲದೆ ಪ್ರತ್ಯೇಕ ಪಾರ್ಕಿಂಗ್ ತಾಣಗಳಲ್ಲಿ (ಆಫ್-ಸ್ಟ್ರೀಟ್ ಪಾರ್ಕಿಂಗ್) ದರವನ್ನು ಕೊಂಚ ಕಡಿಮೆ ಮಾಡಲಾಗಿದೆ. ಇಲ್ಲಿ ಕಾರುಗಳಿಗೆ ಗಂಟೆಗೆ 20 ರಿಂದ 40 ರೂಪಾಯಿ ಹಾಗೂ ದ್ವಿಚಕ್ರ ವಾಹನಗಳಿಗೆ 10 ರಿಂದ 20 ರೂಪಾಯಿ ಶುಲ್ಕ ಇರಲಿದೆ. ಮಾಸಿಕ ಪಾರ್ಕಿಂಗ್ ಶುಲ್ಕ 1,000 ರೂಪಾಯಿಯಿಂದ 4,000 ರೂಪಾಯಿವರೆಗೆ ಇರಲಿದ್ದು, ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 8 ಗಂಟೆಯವರೆಗೆ ವಾಹನ ನಿಲ್ಲಿಸುವವರಿಗೆ ಮಾಸಿಕ ದರದಲ್ಲಿ ಶೇಕಡಾ 50 ರಷ್ಟು ವಿನಾಯಿತಿ ನೀಡಲು ಪ್ರಸ್ತಾವಿಸಲಾಗಿದೆ.
ವಾಹನ ಸವಾರರು ರಸ್ತೆಗಳಲ್ಲಿ ದೀರ್ಘಾವಧಿಗೆ ವಾಹನಗಳನ್ನು ನಿಲ್ಲಿಸುವುದನ್ನು ತಡೆಯಲು, 2 ಗಂಟೆಗಿಂತ ಹೆಚ್ಚು ಅವಧಿಗೆ ಪಾರ್ಕಿಂಗ್ ಮಾಡಿದರೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಈ ನೀತಿಯು ಜಾರಿಗೆ ಬಂದಲ್ಲಿ, ನಗರದಲ್ಲಿ ರಸ್ತೆಬದಿ ಪಾರ್ಕಿಂಗ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಲಿದ್ದು, ಆಫ್-ಸ್ಟ್ರೀಟ್ ಪಾರ್ಕಿಂಗ್ ಸಂಸ್ಕೃತಿಯನ್ನು ಉತ್ತೇಜಿಸುವ ನಿರೀಕ್ಷೆಯಿದೆ.
ಆಗಸ್ಟ್ 11ರಂದು ಹೊರಡಿಸಲಾಗಿರುವ ಈ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಆಕ್ಷೇಪಣೆ ಹಾಗೂ ಸಲಹೆಗಳನ್ನು ಗೇಜೆಟ್‌ನಲ್ಲಿ ಪ್ರಕಟಗೊಂಡ ದಿನಾಂಕದಿಂದ 30 ದಿನಗಳ ಒಳಗಾಗಿ ಸಲ್ಲಿಸಬಹುದಾಗಿದೆ.































