Home Lead News ತಡೆಗೋಡೆ ಕುಸಿದು ಇಬ್ಬರ ಸಾವು

ತಡೆಗೋಡೆ ಕುಸಿದು ಇಬ್ಬರ ಸಾವು

ಬೆಂಗಳೂರು,ಆ.೧೧- ಕಂಠೀರವ ಸ್ಟುಡಿಯೋ ಮುಂಭಾಗ ಹಾಗೂ ಡಾ.ರಾಜ್‌ಕುಮಾರ್ ಪುಣ್ಯಭೂಮಿ ಬಳಿ ರಸ್ತೆ ಕಾಮಗಾರಿ ವೇಳೆ ಮಣ್ಣಿನ ತಡೆಗೋಡೆ ಕುಸಿದು ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.


ಕಾರ್ಮಿಕರಾದ ಸೋನಾರಾಮ್(೨೬) ಪರಿಮಳ್(೩೧) ಮೃತಪಟ್ಟವರು, ಮಣ್ಣಿನಡಿ ಸಿಲುಕಿ ಗಾಯಗೊಂಡು ಅಸ್ವಸ್ಥರಾಗಿರುವ ಸದಾನಂದ್, ಸುನೀಲ್,ಇರ್ಮಿಯಾಜ್ ಸೇರಿ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.


ಮೃತ ಹಾಗೂ ಗಾಯಳುಗಳು ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳ ಮೂಲದ ಕೂಲಿ ಕಾರ್ಮಿಕರಾಗಿದ್ದಾರೆ,ಉಳಿದ ಕಾರ್ಮಿಕರನ್ನು ರಕ್ಷಿಸಲಾಗಿದೆ.ಮಣ್ಣು ಕುಸಿದ ತಕ್ಷಣವೇ ಹೊರಗೆ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಹೆದರಿ ಓಡಿ ಹೋಗಿದ್ದಾರೆ


ಬಿಡಿಎ ವತಿಯಿಂದ ಅಂಡರ್ ಪಾಸ್ ಕಾಮಗಾರಿ ಮಡೆಯುತ್ತಿದ್ದ ವೇಳೆ ಕಾಂಕ್ರೀಟ್ ಹಾಕಲು ಗುಂಡಿಯಲ್ಲಿ ತುಂಬಿದ್ದ ನೀರು ಖಾಲಿ ಮಾಡಿದಾ ಬೃಹತ್ ಗುಂಡಿಯ ಮಣ್ಣಿನ ತಡೆಗೋಡೆ ಇಂದು ಬೆಳಿಗ್ಗೆ ೧೧ರ ವೇಳೆ ಏಕಾಏಕಿ ಕುಸಿದು ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು,ಗಾಯಗೊಂಡ ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು ಸ್ಥಿತಿ ಗಂಭೀರವಾಗಿದೆ.ಐದಾರು ಮಂದಿ ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದವರನ್ನು ರಕ್ಷಿಸಲಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಅವರೆಲ್ಲರೂ ಪಾರಾಗಿದ್ದಾರೆ.


ಅಂಡರ್‌ಪಾಸ್ ಕಾಮಗಾರಿಗಾಗಿ ರಸ್ತೆಯಲ್ಲಿ ಸುಮಾರು ೨೦ ಅಡಿ ಆಳದವರೆಗೆ ಮಣ್ಣನ್ನು ತೋಡಲಾಗಿತ್ತು. ಎಂದಿನಂತೆ ಕಾರ್ಮಿಕರು ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದಾಗ ಮೇಲಿಂದ ಏಕಾಏಕಿ ಮಣ್ಣಿನ ತಡೆಗೋಡೆ ಕುಸಿದುಬಿದ್ದಿದೆ. ಈ ವೇಳೆ ಸ್ಥಳದಲ್ಲಿದ್ದ ಐವರು ಕಾರ್ಮಿಕರು ಮಣ್ಣಿನ ಅಡಿಯಲ್ಲಿ ಸಿಲುಕಿ ಉಸಿರಾಡಲಾಗದೆ ನರಳಾಡಿದ್ದಾರೆ.


ಅಲ್ಲಿ ಕೆಲಸ ಮಾಡುತ್ತಿದ್ದ ಇತರ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಮಯಪ್ರಜ್ಞೆಯಿಂದ ಮಣ್ಣಿನಡಿಯಲ್ಲಿ ಸಿಲುಕಿದ್ದ ಮೂವರು ಕಾರ್ಮಿಕರನ್ನು ಹೊರತೆಗೆದಾಗ ಅವರಲ್ಲಿ ಇಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದು, ಮಣ್ಣಿನ ಅಡಿಯಲ್ಲಿ ಸಿಲುಕಿದ್ದ ಉಳಿದವರನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಹೆಚ್ಚುವರಿ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಕಾರ್ಯಾಚರಣೆ ಕೈಗೊಂಡು, ಮಣ್ಣಿನಡಿಯಲ್ಕಿ ಸಿಲುಕಿದ್ದವರನ್ನು ರಕ್ಷಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳದಲ್ಲಿ ಉತ್ತರ ವಿಭಾಗದ ಡಿಸಿಪಿ ಡಾ.ನ್ಯಾಮೇಗೌಡ ಅವರ ಮೊಕ್ಕಾಂ ಹೊಡಿ ಕಾರ್ಯಾಚರಣೆ ನಿಗಾ ವಹಿಸಿದ್ದಾರೆ.

ಅಧಿಕಾರಿಗಳು – ಗುತ್ತಿಗೆದಾರರ ನಿರ್ಲಕ್ಷ್ಯ ಕಾರಣ: ಗೋಪಾಲಯ್ಯ


ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಅಂಡರ್‌ಪಾಸ್ ಕಾಮಗಾರಿ ದುರಂತಕ್ಕೆ ಅಧಿಕಾರಿಗಳ ಹಾಗೂ ಗುತ್ತಿಗೆದಾರ ಅಸಡ್ಡೆ ಮತ್ತು ನಿರ್ಲಕ್ಷ್ಯವೇ ಮುಖ್ಯ ಕಾರಣ ಎಂದು ಶಾಸಕ ಕೆ. ಗೋಪಾಲಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಘಟನಾ ಸ್ಥಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ದುರಂತದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದು, ಮತ್ತೊಬ್ಬರ ಮೃತದೇಹ ಮಣ್ಣಿನಡಿಯಲ್ಲಿರುವುದು ಕಂಡುಬಂದಿದೆ. ಮೂವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ರವಾನಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.


ಅಧಿಕಾರಿಗಳ ಬೇಜವಾಬ್ದಾರಿಗೆ ಸಾರ್ವಜನಿಕರು ಬಲಿ


“ಮಳೆಗಾಲದ ಸಮಯದಲ್ಲಿ ಇಂತಹ ಬೃಹತ್ ಅಂಡರ್‌ಪಾಸ್ ಕಾಮಗಾರಿಗಳನ್ನು ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ಅಧಿಕಾರಿಗಳು ಹಾಗೂ ತಜ್ಞರು ಯೋಚಿಸಬೇಕಿತ್ತು. ಇದು ಸಣ್ಣ ಚರಂಡಿ ಕಾಮಗಾರಿಯಲ್ಲ. ಮಳೆಯ ನೀರು ನಿಂತಾಗ ಅದನ್ನು ತೆರವುಗೊಳಿಸುವಾಗ ಈ ದುರಂತ ಸಂಭವಿಸಿದೆ. ಸುಮಾರು ೧೮ ರಿಂದ ೧೯ ಅಡಿ ಎತ್ತರದ ಮಣ್ಣಿನ ಕುಸಿತದಿಂದಾಗಿ ಐದು ಜನರ ಮೇಲೆ ಮಣ್ಣು ಬಿದ್ದಿದೆ. ಮಳೆಗಾಲಕ್ಕೆ ಮುನ್ನವೇ ಇಂತಹ ಕಾಮಗಾರಿಗಳನ್ನು ಮುಗಿಸಬೇಕಿತ್ತು” ಎಂದು ಕೆ. ಗೋಪಾಲಯ್ಯ ಕಿಡಿಕಾರಿದರು.


ಹಿಂದಿನ ಕಾಮಗಾರಿ ವಿಳಂಬಕ್ಕೆ ಆಕ್ರೋಶ


“ನಾನು ಶಾಸಕನಾಗುವ ಮುನ್ನವೇ ಪ್ರಾರಂಭವಾಗಿದ್ದ ಈ ಕಾಮಗಾರಿಯು ಅರ್ಧಂಬರ್ಧ ನಿಂತುಹೋಗಿತ್ತು. ಇದಕ್ಕಾಗಿ ಧರಣಿ ಕುಳಿತು ೨೦೨೩ರ ಆರಂಭದಲ್ಲಿ ಅನುಮೋದನೆ ಕೊಡಿಸಿ ಮತ್ತೆ ಕೆಲಸ ಪ್ರಾರಂಭವಾಗುವಂತೆ ಮಾಡಿದೆ. ಆದರೆ ಅಧಿಕಾರಿಗಳು ಸೂಕ್ತ ಯೋಜನೆ ಮತ್ತು ಜಾಗರೂಕತೆ ವಹಿಸದೆ ಕೆಲಸ ಮಾಡಿರುವುದೇ ಈ ಅನಾಹುತಕ್ಕೆ ಕಾರಣ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.