
ಬೆಂಗಳೂರು, ಜು.೩೧- ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ವಿರೋಧಿಸಿ ಆಗಸ್ಟ್ ೧೩ ರಂದು ಅಖಂಡ ಕರ್ನಾಟಕ ಬಂದ್‌ಗೆ ಕನ್ನಡ ಸಂಘಟನೆಗಳ ಒಕ್ಕೂಟ ಕರೆ ನೀಡಿದೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ವಾಟಳ್ ನಾಗರಾಜ್. ಸಾ.ರಾ ಗೋವಿಂದ. ಪ್ರವೀಣ್ ಶೆಟ್ಟಿ.ಶಿವರಾಮೇಗೌಡ.ಕೆ.ಅರ್ ಕುಮಾರ್. ಗಿರೀಶ್ ಗೌಡ ಸೇರಿದಂತೆ ಸುಮಾರು ೮೦ಕ್ಕೂ ಹೆಚ್ಚು ಕನ್ನಡ ಸಂಘಟನೆಗಳು, ರೈತ ಸಂಘಟನೆಗಳು ಹಾಗೂ ವಿವಿಧ ಸರ್ಕಾರಿ ನೌಕರರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.
ಸಭೆಯ ಬಳಿಕ ಮಾತನಾಡಿದ ವಾಟಾಳ್ ನಾಗರಾಜ್, ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಮಳೆಯ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದು, ಬೆಳೆಗಳು ಹಾನಿಗೀಡಾಗಿವೆ. ಈ ಹಿನ್ನೆಲೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶವನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಇಂಥ ಸಂಧರ್ಭ ನಮಗೆ ಬರಬಾರದಿತ್ತು. ನಿಜವಾಗಲು ತಮಿಳುನಾಡು ಜೊತೆಗೆ ಯುದ್ಧ ಮಾಡ್ಬೇಕು ಅಂತ ಆಸೆ– ನಮಗಿಲ್ಲ, ನಾವೆಲ್ಲಾ ಮನುಷ್ಯರು, ಒಬ್ಬೊರಿಗಿಬ್ಬರು ಜೊತೆಗೆ ಬದುಕಬೇಕು. ಆದರೆ ತಮಿಳುನಾಡಿನವರು ಮೊದಲಿಂದಲೂ ತೀವ್ರವಾದ ತೊಂದರೆ ಕೊಟ್ಟಿದ್ದಾರೆ.
೧೯೬೭ರಲ್ಲಿ ಕರುಣಾನಿಧಿಯವರು ನಿಜಲಿಂಗಪ್ಪನವರ ಜೊತೆಯಲ್ಲಿ ಮಾತುಕತೆ ಮಾಡಿದ್ರು ಪ್ರೀತಿಯಿಂದ ಅಭಿಮಾನದಿಂದ ತೀರ್ಮಾನ ತಗೋತಿದ್ರು ಒಂದು ದಿನಕ್ಕೆ ೩,೫೦೦ ಕ್ಯೂಸೆಕ್ ನೀರು ಬಿಡೋಕೆ ಹೇಳ್ತಿದ್ದಾರೆ. ಹೀಗಾದ್ರೆ ಕೆಆರ್‌ಎಸ್ ಜಲಾಶಯದಲ್ಲಿ ಸಂಪೂರ್ಣ ಮೈದಾನ ಆಗುತ್ತೆ ಆ ಜಾಗದಲ್ಲಿ ಇಂಟರ್ ನ್ಯಾಷನಲ್ ಸ್ಟೇಡಿಯಂ ಮಾಡಲಿ ನಾವೆಲ್ಲಾ ಸೇರಿ ಕ್ರಿಕೆಟ್ ಆಡೋಣ.
ತಮಿಳುನಾಡಿನ ಸಿಎಂ ವಿಜಯ್ ಬರ್ತಾರಂತೆ ಯಾಕೆ ಬರ್ತಾರೆ ಎಂದು ಸರ್ಕಾರಕ್ಕೆ ಪ್ರಶ್ನಿಸಿದರು. ಆಗಸ್ಟ್ ೧೩ ರಂದು ಬೆಳಿಗ್ಗೆ ೬ರಿಂದ ಸಂಜೆ ೬ರವರೆಗೆ ರಾಜ್ಯವ್ಯಾಪಿ ಬಂದ್ ನಡೆಯಲಿದ್ದು, ಬೆಂಗಳೂರಿನಲ್ಲಿ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ರ್‍ಯಾಲಿ ನಡೆಸಿ, ಬಳಿಕ ಬಹಿರಂಗ ಸಭೆ ಹಾಗೂ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ರಾಜ್ಯದ ಎಲ್ಲ ತಾಲೂಕು ಕೇಂದ್ರಗಳು ಹಾಗೂ ಪ್ರಮುಖ ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಬಂದ್‌ಗೆ ಬೆಂಬಲ ನೀಡಿರುವ ಪ್ರಮುಖ ಸಂಘಟನೆಗಳು
ಕನ್ನಡ ಒಕ್ಕೂಟಗಳು, ರೈತ ಸಂಘಟನೆಗಳು, ಲಾರಿ ಮಾಲೀಕರ ಸಂಘ, ವಕೀಲರ ಸಂಘ, ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿ, ಕನ್ನಡ ಸಾಹಿತ್ಯ ಪರಿಷತ್, ಜಲಮಂಡಳಿ ಕನ್ನಡ ಒಕ್ಕೂಟ, ಜಲಮಂಡಳಿ ನೌಕರರ ಸಂಘ, ಓಲಾ-ಊಬರ್ ಚಾಲಕರ ಸಂಘ, ಆಟೋ ಚಾಲಕರ ಮತ್ತು ಮಾಲೀಕರ ಸಂಘಗಳು, ಹೋಟೆಲ್ ಮಾಲೀಕರ ಸಂಘ, ಕೈಗಾರಿಕಾ ಒಕ್ಕೂಟಗಳು, ಮಾರುಕಟ್ಟೆ ಸಂಘಗಳು, ರಾಜ್ಯ ಒಕ್ಕಲಿಗರ ಒಕ್ಕೂಟ ಸೇರಿದಂತೆ ೮೦ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಘೋಷಿಸಿವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ಬೆಂಬಲ ನೀಡುವ ಸಾಧ್ಯತೆ ಇದೆ.
ಅಗತ್ಯ ಸೇವೆಗಳಿಗೆ ವಿನಾಯಿತಿ:
ಆಸ್ಪತ್ರೆಗಳು, ಮೆಡಿಕಲ್ ಅಂಗಡಿಗಳು, ಬ್ಯಾಂಕ್‌ಗಳು, ಪೆಟ್ರೋಲ್ ಬಂಕ್‌ಗಳು, ಹಾಲು ಸಾಗಣೆ ವಾಹನಗಳು ಹಾಗೂ ಮೆಟ್ರೋ ಸೇವೆ ಮುಂದುವರಿಯುವ ನಿರೀಕ್ಷೆ ಇದೆ. ಬಿಎಂಟಿಸಿ ಸೇವೆ ಕುರಿತು ಇನ್ನೂ ಸ್ಪಷ್ಟತೆ ಇಲ್ಲ.
ಬಂದ್‌ನಿಂದ ಬಾಧಿತವಾಗುವ ಸಾಧ್ಯತೆ ಇರುವ ಸೇವೆಗಳು:
ಸಿನಿಮಾ ಮಂದಿರಗಳು, ಮಾಲ್‌ಗಳು, ಆಟೋ ಸೇವೆ, ಮಾರುಕಟ್ಟೆಗಳು, ಬೇಕರಿಗಳು, ಅಂಗಡಿ-ಮುಂಗಟ್ಟುಗಳು, ಎಪಿಎಂಸಿ ಮಾರುಕಟ್ಟೆಗಳು, ಶಾಲಾ-ಕಾಲೇಜುಗಳು, ಹೋಟೆಲ್‌ಗಳು, ಬೀದಿ ಬದಿ ವ್ಯಾಪಾರ ಹಾಗೂ ಎಲೆಕ್ಟ್ರಿಕಲ್ ಅಂಗಡಿಗಳು ಬಂದ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಐಟಿ ಕಂಪನಿಗಳು, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಹಾಗೂ ಕೆಲವು ಸರ್ಕಾರಿ ನೌಕರರ ಸಂಘಟನೆಗಳ ನಿಲುವು ಇನ್ನೂ ಸ್ಪಷ್ಟವಾಗಿಲ್ಲ.
ಹೆದ್ದಾರಿ, ಟೋಲ್‌ಗಳಲ್ಲಿ ಪ್ರತಿಭಟನೆ:
ರಾಜ್ಯದ ಎಂಟು ದಿಕ್ಕುಗಳಲ್ಲಿ ಮಹಾ ದಿಗ್ಬಂಧನಕ್ಕೆ ಕನ್ನಡ ಸಂಘಟನೆಗಳು ಸಿದ್ಧತೆ ನಡೆಸಿವೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ, ಮಂಡ್ಯ-ಹಾಸನ, ತುಮಕೂರು-ಮೈಸೂರು, ಚಾಮರಾಜನಗರ-ಈರೋಡ್, ನಂಜನಗೂಡು-ಊಟಿ ರಸ್ತೆ ಸೇರಿದಂತೆ ಹಲವು ಪ್ರಮುಖ ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸುವ ಯೋಜನೆ ರೂಪಿಸಲಾಗಿದೆ.
ಬೆಂಗಳೂರು-ನೆಲಮಂಗಲ ನವಯುಗ ಟೋಲ್, ದೇವನಹಳ್ಳಿ ವಿಮಾನ ನಿಲ್ದಾಣ ಟೋಲ್, ಕಣಮಿಣಕಿ ಟೋಲ್, ರಾಮನಗರ, ಶ್ರೀರಂಗಪಟ್ಟಣ, ಟಿ. ನರಸೀಪುರ, ಹಾಸನ-ಬೆಂಗಳೂರು ಹೆದ್ದಾರಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ಟೋಲ್‌ಗಳಲ್ಲಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.
ಬಂದ್‌ಗೆ ಕರವೇ ಬೆಂಬಲವಿಲ್ಲ
ಇನ್ನೊಂದೆಡೆ, ವಾಟಾಳ್ ನಾಗರಾಜ್ ಕರೆ ನೀಡಿರುವ ಬಂದ್‌ಗೆ ತಮ್ಮ ಸಂಘಟನೆಯ ಬೆಂಬಲ ಇಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ.
“ವಾಟಾಳ್ ನಾಗರಾಜ್ ಅವರ ಬಗ್ಗೆ ಅಪಾರ ಗೌರವ ಇದೆ. ಆದರೆ ಪದೇ ಪದೇ ಬಂದ್ ನಡೆಸುವುದರಿಂದ ಸರ್ಕಾರಕ್ಕೂ ಜನರಿಗೂ ನಷ್ಟವಾಗುತ್ತದೆ. ಈ ಬಾರಿ ಕಾವೇರಿ ಹೋರಾಟವನ್ನು ದೆಹಲಿಗೆ ಕೊಂಡೊಯ್ಯುತ್ತೇವೆ. ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಮುಂದಾಗಿದ್ದೇವೆ. ಹೊಸ ತಲೆಮಾರಿನ ಮಾದರಿಯ ಹೋರಾಟ ರೂಪಿಸಲಾಗುವುದು,” ಎಂದು ಅವರು ಹೇಳಿದರು.
ಒಟ್ಟಾರೆ, ಆಗಸ್ಟ್ ೧೩ ರ ಕರ್ನಾಟಕ ಬಂದ್ ಯಶಸ್ವಿಗೊಳಿಸಲು ಕನ್ನಡ ಸಂಘಟನೆಗಳು ವ್ಯಾಪಕ ಸಿದ್ಧತೆ ನಡೆಸಿದ್ದು, ಸಾರ್ವಜನಿಕರ ಸಹಕಾರ ಕೋರಿವೆ. ಆದರೆ ವಿವಿಧ ಸಂಘಟನೆಗಳ ಭಿನ್ನ ನಿಲುವಿನ ನಡುವೆ ಬಂದ್‌ಗೆ ಎಷ್ಟರ ಮಟ್ಟಿನ ಸ್ಪಂದನೆ ಸಿಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ..
೩೧ ಲೀಡ್ ಬಾಕ್ಸ್
ವಿಮಾನ ನಿಲ್ದಾಣ ಮುತ್ತಿಗೆ
ಅಗಸ್ಟ್ ೩ ರಂದು ತಮಿಳುನಾಡಿನ ಸಿಎಂ ವಿಜಯ್ ಬೆಂಗಳೂರಿಗೆ ಭೇಟಿ ನೀಡಿದರೆ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್ ತಿಳಿಸಿದರು.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆ.೧೩ರ ಕರ್ನಾಟಕ ಬಂದ್ ಬಗ್ಗೆ ವಿವರ ನೀಡಿದ ಸಂದರ್ಭದಲ್ಲಿ ಆ,.೩ ರಂದು ವಿಮಾನ ನಿಲ್ದಾಣ ಮುತ್ತಿಗೆ ಹಾಕುವುದಾಗಿ ಪ್ರಕಟಿಸಿದರು.
ಸರ್ವ ಪಕ್ಷ ಸಭೆ ಅಲ್ಲ
ಕಾವೇರಿ ನದಿ ನೀರು ವಿಚಾರ ಸಂಬಂಧ ಇದೇ ಭಾನುವಾರ ಸಿಎಂ ಡಿ.ಕೆ.ಶಿವಕುಮಾರ್ ಸರ್ವ ಪಕ್ಷ ಸಭೆ ಕರೆದಿದ್ದಾರೆ.ಆದರೆ ಇದು ಇದು ಸರ್ವ ಪಕ್ಷ ಸಭೆ ಅಲ್ಲ.ಬದಲಿಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸಭೆಯಾಗಿದೆ.ನಾಡಿನ ಜನರನ್ನು ಕರೆಯದೆ ಏನು ಸಭೆ ಮಾಡುತ್ತಾರೆ.ಇವರು ಇವರೇ ಸೇರಿ ನಂದಿನಿ ಹಾಲು ಕುಡಿದು ಹೊರಟು ಹೋಗುತ್ತಾರೆ ಎಂದು ಟೀಕಿಸಿದರು.
ಆರ್ ಅಶೋಕ್, ಡಿ.ಕೆ.ಶಿವಕುಮಾರ್ ಜೆಡಿಎಸ್‌ನವರು ಮಾತ್ರ ಸಭೆ ಮಾಡುತ್ತಾರೆ.ಆದರೆ ಇದನ್ನು ನಾಡಿನ ಜನತೆ ಖಂಡಿತವಾಗಿಯೂ ಒಪ್ಪುವುದಿಲ್ಲ. ನಿಮ್ಮ ನಾಟಕೀಯ ಸಭೆ ನಾವು ಒಪ್ಪಲ್ಲ ಎಂದು ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ಕನ್ನಡಪರ ಸಂಘಟನೆಗಳು, ರೈತರನ್ನು, ಆಮ್ ಆದ್ಮಿ ಪಾರ್ಟಿ, ಇತರೆ ಕಾರ್ಮಿಕ ಸಂಘಟನೆಗಳು ಹೀಗೆ ಎಲ್ಲಾ ಜನರನ್ನು ಕರೆದು ಸಿಎಂ ಡಿಕೆಶಿವಕುಮಾರ್ ಸಭೆ ಮಾಡಬೇಕು.ಜೊತೆಗೆ ತುರ್ತು ಶಾಸನ ಸಭೆ ಕರೆಯಬೇಕು.ಅಲ್ಲದೆ, ಸಭೆ ಕರೆದು ಅಂತಿಮ ತೀರ್ಮಾನ ಮಾಡಬೇಕು ಎಂದರು.


































