Home ಜಿಲ್ಲೆ ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರದ ನಿರ್ಲಕ್ಷ್ಯಕ್ಕೆ ಖಂಡನೆ

ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರದ ನಿರ್ಲಕ್ಷ್ಯಕ್ಕೆ ಖಂಡನೆ

ಯಾದಗಿರಿ,ಜು.31-ರಾಜ್ಯದಲ್ಲಿ ಶಾಲೆಗಳು ಆರಂಭವಾಗಿ 2 ತಿಂಗಳು ಕಳೆದಿದೆ. ಆದರೆ ವಿದ್ಯಾರ್ಥಿಗಳಿಗೆ ಅತ್ಯವಶ್ಯಕವಾದ ಅನೇಕ ಮೂಲ ಸೌಲಭ್ಯಗಳು ಇಲ್ಲಿಯವರೆಗೂ ದೊರೆತಿಲ್ಲ. ಇಲ್ಲಿಯವರೆಗೂ ಶೂ ಮತ್ತು ಸಾಕ್ಸ್ ವಿದ್ಯಾರ್ಥಿಗಳಿಗೆ ಲಭ್ಯವಾಗಿಲ್ಲ. ಈ ಶೈಕ್ಷಣಿಕ ವರ್ಷದಿಂದ ಸರ್ಕಾರವೇ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಲ್ಲ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಕೊಡಲು ನಿರ್ಧರಿಸಿತ್ತು. ಆದರೆ ನೋಟ್ ಬುಕ್ ಕೂಡ ಇಲ್ಲಿಯವರೆಗೂ ಶಾಲೆಗಳನ್ನು ತಲುಪಿಲ್ಲ. ಇನ್ನು ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸಲು ಸರ್ಕಾರ ನೀಡುತ್ತಿರುವ ಹಣ ಮಾರುಕಟ್ಟೆ ದರಕ್ಕಿಂತ ಕಡಿಮೆ ಇರುವುದರಿಂದ ಶಿಕ್ಷಕರೇ ತಮ್ಮ ಜೇಬಿನಿಂದ ಹೆಚ್ಚುವರಿ ಹಣವನ್ನು ಭರಿಸುವ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಬೇಕಿದ್ದ ಶಿಕ್ಷಣ ಮಂತ್ರಿಗಳೇ ನಮ್ಮ ರಾಜ್ಯಕ್ಕೆ ಇನ್ನೂ ದೊರೆತಿಲ್ಲ ಸರ್ಕಾರದ ಶಿಕ್ಷಣದ ಬಗೆಗಿನ, ಅದರಲ್ಲೂ ಬಡ ರೈತ ಕಾರ್ಮಿಕರ ಮಕ್ಕಳು ಓದುವ ಸರ್ಕಾರಿ ಶಾಲೆಗಳ ಕುರಿತಾದ ಈ ನಿರ್ಲಕ್ಷ್ಯ ಧೋರಣೆಯನ್ನು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಹಾಗೂ ಎಐಡಿಎಸ್‍ಓ ತೀವ್ರವಾಗಿ ಖಂಡಿಸಿವೆ.
ಕೂಡಲೇ ರಾಜ್ಯಕ್ಕೆ ಶಿಕ್ಷಣ ಮಂತ್ರಿಗಳನ್ನು ನೀಡಬೇಕು ಮತ್ತು ವಿದ್ಯಾರ್ಥಿಗಳಿಗೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸಾರ್ವಜನಿಕ ಶಿಕ್ಷಣ ಉಳಿಸಿ ಕರ್ನಾಟಕ ರಾಜ್ಯ ಸಮಿತಿ ರಾಜ್ಯ ಅಧ್ಯಕ್ಷ ಪ್ರೊ.ಎ.ಮುರಿಗೆಪ್ಪ ಹಾಗೂ ಎಐಡಿಎಸ್‍ಓ ರಾಜ್ಯ ಅಧ್ಯಕ್ಷರಾದ ಅಶ್ವಿನಿ ಕೆ.ಎಸ್. ಆಗ್ರಹಿಸಿದ್ದಾರೆ.