
ನವದೆಹಲಿ, ಜು. ೩೦- ಕಳೆದ ೮ ದಿನಗಳಿಂದ ನೀಟ್ ಪ್ರಶ್ನೆ ಪತ್ರಿಕೆ ಗದ್ದಲದಲ್ಲೇ ಮುಳುಗಿದ್ದ ಸಂಸತ್‌ನ ಉಭಯ ಸದನಗಳಲ್ಲಿಂದು ರಾಮಮಂದಿರ ದೇಣಿಗೆ ಕಳ್ಳತನ ಪ್ರತಿಧ್ವನಿಸಿ ಆಡಳಿತ ಪಕ್ಷಗಳ ನಡುವೆ ವಾಕ್ಸಮರ ನಡೆದು ಸದನದಲ್ಲಿ ಗದ್ದಲ, ಕೋಲಾಹಲ ವಾತಾವರಣ ರೂಪುಗೊಂಡು ಸದನವನ್ನು ಮಧ್ಯಾಹ್ನದವರೆಗೂ ಮುಂದೂಡುವಂತಾಯಿತು.
ಪರೀಕ್ಷಾ ಅಕ್ರಮ ತಡೆಗೆ ಕಾನೂನನ್ನು ಮತ್ತಷ್ಟು ಬಿಗಿಗೊಳಿಸುವ ನೂತನ ತಿದ್ದುಪಡಿ ವಿಧೇಯಕಕ್ಕೆ ಲೋಕಸಭೆಯಲ್ಲಿ ಅಂಗೀಕಾರ ದೊರೆಯುತ್ತಿದ್ದಂತೆಯೇ ಇಂದು ಬೆಳಿಗ್ಗೆ ಸದನ ಆರಂಭವಾಗುತ್ತಿದ್ದಂತೆಯೇ ಸಮಾಜವಾದಿ ಪಕ್ಷದ ಸದಸ್ಯರು ಸೇರಿದಂತೆ ಎಲ್ಲ ವಿಪಕ್ಷಗಳ ಸದಸ್ಯರುಗಳು ಅಯೋಧ್ಯೆಯ ರಾಮಮಂದಿರದ ದೇಣಿಗೆ ವಿಚಾರವನ್ನು ಪ್ರಸ್ತಾಪಿಸಿ ಚರ್ಚೆಗೆ ಪಟ್ಟು ಹಿಡಿದರು.
ಈ ಹಂತದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ದೊಡ್ಡ ಮಟ್ಟಿನ ಮಾತಿನ ಚಕಮಕಿ ನಡೆದು ಸದನದಲ್ಲಿ ಗದ್ದಲದ ವಾತಾವರಣ ರೂಪುಗೊಂಡಿತು.
ಸದನದಲ್ಲಿ ಗದ್ದಲ ಕೋಲಾಹಲದ ವಾತಾವರಣ ರೂಪುಗೊಂಡಿದ್ದರಿಂದ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಸದನವನ್ನು ಮಧ್ಯಾಹ್ನ ೨ ಗಂಟೆಗೆ ಮುಂದೂಡಿದರು
ಕಳೆದ ಆರು ದಿನಗಳಿಂದ ಲೋಕಸಭೆಯ ಕಲಾಪ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಕ್ಕೆ ಬಲಿಯಾಗಿತ್ತು ನಿನ್ನೆ ಮಾತ್ರ ಪರೀಕ್ಷಾ ಅಕ್ರಮ ತಡೆ ಮಸೂದೆ ಬಗ್ಗೆ ಚರ್ಚೆ ನಡೆದು ಮಸೂದೆಯನ್ನು ನಿನ್ನೆ ಅಂಗೀಕರಿಸಲಾಗಿತ್ತು.
ಪ್ರಶ್ನೆ ಪತ್ರಿಕೆ ಸೋರಿಕೆ ಮಸೂದೆ ಮಂಡನೆ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರ ನಡುವೆ ದೊಡ್ಡ ಮಟ್ಟದಲ್ಲಿ ಮಾತಿನ ಚಕಮಕಿ ನಡೆದಿತ್ತು. ಇಂದು ಸದನ ಆರಂಭವಾಗುತ್ತಿದ್ದಂತೆಯೇ. ರಾಮಮಂದಿರ ದೇಣಿಗೆ ಕಳ್ಳತನ ವಿಚಾರ ಲೋಕಸಭೆಯಲ್ಲಿ ಪ್ರತಿಧ್ವನಿಸಿ ಬೆಳಗಿನ ಯಾವುದೇ ಕಲಾಪಗಳು ನಡೆಯದೆ ವ್ಯರ್ತವಾದವು.
ಅಯೋಧ್ಯಯ ರಾಮಮಂದಿರದ ದೇಣಿಗೆ ಚರ್ಚೆಗೆ ಅವಕಾಶ ನೀಡಿ ಎಂದು ಸಮಾಜವಾದಿ ಪಕ್ಷದ ಸದಸ್ಯರು ಪಟ್ಟು ಹಿಡಿದು, ಲೋಕಸಭಾಧ್ಯಕ್ಷರ ಮುಂದಿನ ಬಾವಿಗೆ ಆಗಮಿಸಿ ಹೋರಾಟಕ್ಕೆ ಮುಂದಾದರು ಇದರಿಂದ ಸದನದಲ್ಲಿ ದೊಡ್ಡ ಮಟ್ಟದ ಗದ್ದಲ ತಾರಕಕ್ಕೇರಿ ಸದನವನ್ನು ಮುಂದೂಡುವಂತಾಯಿತು.
ರಾಜ್ಯಸಭೆಯಲ್ಲೂ ಮುಂದೂಡಿಕೆ
ರಾಜ್ಯಸಭೆಯಲ್ಲೂ ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ ವಿಚಾರ ಪ್ರಸ್ತಾವವಾಗಿ ಈ ಬಗ್ಗೆ ಚರ್ಚೆ ಆಗಬೇಕು ಎಂದು ಕಾಂಗ್ರೆಸ್‌ನ ರಣದೀಪ್ ಸಿಂಗ್ ಸುರ್ಜೇವಾಲಾ ಒತ್ತಾಯಿಸಿದರು.
ಈ ಹಂತದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸದನದಲ್ಲಿ ಗದ್ದಲದ ವಾತಾವರಣ ರೂಪುಗೊಂಡಿತು. ಆಗ ಸಭಾಪತಿಗಳು ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.


































