Home ಜಿಲ್ಲೆ ಬೆಂಗಳೂರು ಆ.೨ ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆ- ಅಕ್ರಮ ತಡೆಗೆ ಕ್ರಮ

ಆ.೨ ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆ- ಅಕ್ರಮ ತಡೆಗೆ ಕ್ರಮ

ಕೋಲಾರ:ಜು,೩೧-ಜಿಲ್ಲೆಯಲ್ಲಿ ಆಗಸ್ಟ್ ೨, ೨೦೨೬ ರಂದು ನಡೆಯಲಿರುವ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಅತ್ಯಂತ ಪಾರದರ್ಶಕ ಹಾಗೂ ಸುಗಮವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಈ ಕುರಿತು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪರೀಕ್ಷಾ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಯಿತು.


ಪರೀಕ್ಷೆಯು ಆಗಸ್ಟ್ ೨ ರಂದು ಬೆಳಗ್ಗೆ ೧೦:೩೦ ರಿಂದ ಮಧ್ಯಾಹ್ನ ೧೨:೦೦ ರವರೆಗೆ ನಡೆಯಲಿದ್ದು, ಜಿಲ್ಲೆಯಾದ್ಯಂತ ಒಟ್ಟು ೧೬ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಈ ಬಾರಿ ಒಟ್ಟು ೬,೭೦೪ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಪರೀಕ್ಷಾ ಕಾರ್ಯಗಳ ಮೇಲ್ವಿಚಾರಣೆಗಾಗಿ ೧೬ ಜನ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಅಭ್ಯರ್ಥಿಗಳಿಗೆ ಕುಡಿಯುವ ನೀರು, ಶೌಚಾಲಯ ಹಾಗೂ ಅವರ ವಸ್ತುಗಳನ್ನು ಇಡಲು ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.


ಪರೀಕ್ಷಾ ಅಕ್ರಮಗಳನ್ನು ತಡೆಯಲು ಎಲ್ಲಾ ೧೬ ಪರೀಕ್ಷಾ ಕೇಂದ್ರಗಳಲ್ಲಿ ಶೇಕಡಾ ೧೦೦ರಷ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತಿದ್ದು, ಸಿಸಿಟಿವಿ ಇಲ್ಲದ ಕೇಂದ್ರಗಳಿಗೆ ಪೊಲೀಸ್ ಇಲಾಖೆಯಿಂದಲೇ ಅನುದಾನ ಒದಗಿಸಲಾಗುವುದು. ಜೊತೆಗೆ, ಎಲೆಕ್ಟ್ರಾನಿಕ್ ಉಪಕರಣಗಳ ದುರ್ಬಳಕೆ ತಡೆಯಲು ಮೊಬೈಲ್ ಜಾಮರ್ ಅಳವಡಿಕೆ ಹಾಗೂ ಪ್ರವೇಶ ದ್ವಾರದಲ್ಲಿ ಫೇಸ್ ರೆಕಗ್ನಿಷನ್ ತಂತ್ರಾಂಶದ ಮೂಲಕ ಮೂರು ಹಂತದ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುವುದು ಎಂದು ಅವರು ತಿಳಿಸಿದರು.


ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ತರುವುದನ್ನು ಸಂಪೂರ್ಣವಾಗಿ ನಿಷಧಿಸಲಾಗಿದೆ.


ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಕಟ್ಟುನಿಟ್ಟಿನ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ. ಅಭ್ಯರ್ಥಿಗಳು ಪೂರ್ಣ ತೋಳಿನ ಶರ್ಟ್ ಧರಿಸುವಂತಿಲ್ಲ, ಮುಖ, ಕಿವಿ ಅಥವಾ ತಲೆ ಮುಚ್ಚುವಂತಹ ಉಡುಪು ಹಾಗೂ ಶೂಗಳನ್ನು ಧರಿಸುವುದನ್ನು ನಿಷಧಿಸಲಾಗಿದೆ. ಸಾಮಾನ್ಯ ಚಪ್ಪಲಿಗಳಿಗೆ ಮಾತ್ರ ಅವಕಾಶವಿದ್ದು, ಮಂಗಳಸೂತ್ರ ಮತ್ತು ಮೂಗುತಿಯನ್ನು ಹೊರತುಪಡಿಸಿ ಬೇರೆ ಯಾವುದೇ ಲೋಹದ ಆಭರಣಗಳನ್ನು ಧರಿಸುವಂತಿಲ್ಲ. ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಅಭ್ಯರ್ಥಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಹಾಗೂ ಯಾವುದೇ ಭೀತಿ ಹುಟ್ಟಿಸುವ ವಾತಾವರಣ ನಿರ್ಮಿಸಬಾರದು. ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ಸಹಾಯಕರನ್ನು ತುರ್ತು ಔಷಧಗಳೊಂದಿಗೆ ಒದಗಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸಭೆಯಲ್ಲಿ ನಿರ್ದೇಶನ ನೀಡಿದರು.


ಪರೀಕ್ಷಾ ಕೇಂದ್ರದ ೨೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು. ಪರೀಕ್ಷಾ ಕೇಂದ್ರ ಸಂಪೂರ್ಣದಲ್ಲಿ ಸಂಪೂರ್ಣ ವೆಬ್‌ಕ್ಯಾಸ್ಟ್ ಮಾಡಲು ಪೊಲೀಸ್ ಇಲಾಖೆಗೆ ಸೂಚಿಸಿದರು.


ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷಧಿಕಾರಿ ಕನ್ನಿಕಾ ಸಿಕ್ರಿವಾಲ್, ಅಪರ ಜಿಲ್ಲಾಧಿಕಾರಿ ಎಸ್. ಎಂ. ಮಂಗಳ, ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್, ಕೃಷಿ ಜಂಟಿ ನಿರ್ದೇಶಕಿ ಮಂಜುಳ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಮೈಲರಪ್ಪ, ತೋಟಗಾರಿಕೆ ಉಪನಿರ್ದೇಶಕ ಕುಮಾರ ಸ್ವಾಮಿ, ಜಿಲ್ಲಾ ಖಜಾನೆ ಉಪನಿರ್ದೇಶಕ ಮಹೇಂದ್ರ, ಪದವಿ ಪೂರ್ವ ಕಾಲೇಜು ಶಿಕ್ಷಣ ಉಪನಿರ್ದೇಶಕ ರಾಜಶೇಖರ್ ಪಟ್ಟಣಶೆಟ್ಟಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎನ್. ವಿಜಯಲಕ್ಷ್ಮಿ ಸೇರಿದಂತೆ ಎಲ್ಲಾ ನೋಡಲ್ ಅಧಿಕಾರಿಗಳು, ನಿಯೋಜಿತ ಅಧಿಕಾರಿಗಳು ಉಪಸ್ಥಿತರಿದ್ದರು.