Home ಜಿಲ್ಲೆ ಕಲಬುರಗಿ ಪಿಸ್ತೂಲ್‍ನಂತೆ ಹೋಲುವ ವಸ್ತು ತೋರಿಸಿ ಕೊಲೆಗೆ ಯತ್ನ: ಇಬ್ಬರ ಬಂಧನ

ಪಿಸ್ತೂಲ್‍ನಂತೆ ಹೋಲುವ ವಸ್ತು ತೋರಿಸಿ ಕೊಲೆಗೆ ಯತ್ನ: ಇಬ್ಬರ ಬಂಧನ

ಕಲಬುರಗಿ,ಜು.29-ಬಾರ್ ಮತ್ತು ರೆಸ್ಟೋರೆಂಟ್ ಮಾಲಿಕನಿಗೆ ಪಿಸ್ತೂಲ್‍ನಂತೆ ಹೋಲುವ ವಸ್ತು ತೋರಿಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ಎಂಎಸ್‍ಕೆ ಮಿಲ್ ಏರಿಯಾದ ಇಕ್ಬಾಲ್ ಕಾಲೋನಿಯ ಸೈಯದ್ ಜಿಲಾನ್ ಅಲಿಯಾಸ್ ರೇತಿ ಬಾಬಾ ತಂದೆ ಸೈಯದ್ ಮುಸ್ತಾಫ್ (36) ಮತ್ತು ಜಾವೇದ್ ಪಟೇಲ್ ತಂದೆ ಉಸ್ಮಾನ್ ಪಟೇಲ್ (35) ಎಂಬುವವರನ್ನು ಬಂಧಿಸಿ ಕೃತ್ಯಕ್ಕೆ ಬಳಕೆ ಮಾಡಿದ ಗ್ರೇ ಕಲರ್ ಪಿಸ್ತೂಲ್‍ನಂತೆ ಕಾಣುವ ಒಂದು ಗ್ಯಾಸ್ ಲೈಟರ್ ಜಪ್ತಿ ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇವರು ಜು.22 ರಂದು ಮಧ್ಯಾಹ್ನ ನಗರದ ಬಿದ್ದಾಪುರ ಕಾಲೋನಿಯ ಅಫಜಲಪುರ ಕ್ರಾಸ್‍ನಲ್ಲಿರುವ ಬಾರ್ ಅಂಡ್ ಗಾರ್ಡನ್ ರೆಸ್ಟೋರೆಂಟ್‍ಗೆ ಊಟಕ್ಕೆ ಹೋಗಿ ಎ.ಸಿ.ರೂಮಿನಲ್ಲಿ ಕುಳಿತು ಗುಟುಕಾ ತಿಂದು ಉಗಿಯುತ್ತ ವೇಟರ್ ಜೊತೆ ತಕರಾರು ಮಾಡಿದ್ದರು. ಈ ವಿಷಯ ಬಾರಿನ ಮ್ಯಾನೇಜರ್ ಗಮನಕ್ಕೆ ತಂದಾಗ ಅವರು ಸಮಾದಾನ ಮಾಡಿ ಕಳುಹಿಸು ಎಂದು ವೇಟರ್‍ಗೆ ಹೇಳಿದ್ದಾರೆ. ಪುನ: ಅವರು ಇದೇ ಕೃತ್ಯವೆಸಗಿದಾಗ ಬಾರ್ ಮಾಲಿಕನ ಸಹೋದರ ಇದನ್ನು ಪ್ರಶ್ನಿಸಿದ್ದು, ಈ ವೇಳೆ ಸೈಯ್ಯದ್ ಜಿಲಾನ್ ತನ್ನ ಹತ್ತಿರವಿದ್ದ ಪಿಸ್ತೂಲ್‍ನಂತೆ ಹೋಲುವ ವಸ್ತು ತೋರಿಸಿ ಕೊಲೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಅವರ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಶಾಲೂ, ಪ್ರವೀಣ್ ಹೆಚ್.ನಾಯಕ್, ಉಪ ಪೊಲೀಸ್ ಆಯುಕ್ತ ಶರಣಬಸಪ್ಪ ಸುಬೇದಾರ, ಅಶೋಕ ನಗರ ಪೊಲೀಸ್ ಠಾಣೆ ಪಿಐ ಸತೀಶ ಕಣಿಮೇಶ್ವರ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ವೈಜಿನಾಥ, ಮಲ್ಲಿಕಾರ್ಜುನ ಮೇತ್ರೆ, ಶಿವಪ್ರಕಾಶ, ಮುಜಾಹಿದ್, ನೀಲಕಂಠರಾಯ ಪಾಟೀಲ, ಚಂದ್ರಶೇಖರ ಹಾಗೂ ಹರಿಕಿಶೋರ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಸಿಸಿಟಿವಿ ಫುಟೇಜ್ ಆದರಿಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೊಲೆಯತ್ನ ಪ್ರಕರಣದಲ್ಲಿನ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಅವರು ಶ್ಲಾಘಿಸಿದ್ದಾರೆ.