
ಕರಜಗಿ : ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ 2026-27ನೇ ಸಾಲಿನ ಕಬ್ಬು ಹಂಗಾಮು ಆರಂಭವಾಗಿದ್ದು, ಕಬ್ಬು ಕಟಾವು ಮಾಡುವ ಹೆಸರಿನಲ್ಲಿ ಕೆಲವು ಗ್ಯಾಂಗ್‍ಮ್ಯಾನ್‍ಗಳು ರೈತರಿಂದ ಪ್ರತಿ ಎಕರೆಗೆ 5,000 ರಿಂದ 6,000 ವರೆಗೆ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಈಗಾಗಲೇ ಕೃಷಿ ವೆಚ್ಚದ ಹೊರೆಯಿಂದ ಸಂಕಷ್ಟದಲ್ಲಿರುವ ರೈತರು ಮತ್ತಷ್ಟು ಆರ್ಥಿಕ ತೊಂದರೆಗೆ ಸಿಲುಕುವಂತಾಗಿದೆ.
ರೈತರು ಬಿತ್ತನೆ, ಗೊಬ್ಬರ, ಔಷಧಿ, ನೀರಾವರಿ ಹಾಗೂ ಕೂಲಿ ಕಾರ್ಮಿಕರಿಗಾಗಿ ಅಪಾರ ಪ್ರಮಾಣದ ಹಣ ಖರ್ಚು ಮಾಡಿ ಕಬ್ಬು ಬೆಳೆದಿರುತ್ತಾರೆ. ಇಂತಹ ಸಂದರ್ಭದಲ್ಲಿ ಕಬ್ಬು ಕಟಾವು ಮಾಡುವ ನೆಪದಲ್ಲಿ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡುತ್ತಿರುವುದು ಎಷ್ಟರ ಮಟ್ಟಿಗೆ ನ್ಯಾಯಸಮ್ಮತ ಎಂಬ ಪ್ರಶ್ನೆ ರೈತ ವಲಯದಲ್ಲಿ ಮೂಡಿದೆ.
ಕಬ್ಬು ಕಟಾವಿನ ಹೆಸರಿನಲ್ಲಿ ರೈತರಿಂದ ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿರುವವರ ವಿರುದ್ಧ ಸಂಬಂಧಪಟ್ಟ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಜನಸೈನ್ಯ ಸಂಘಟನೆಯ ತಾಲೂಕು ಅಧ್ಯಕ್ಷ ಉಮೇಶ ಎಸ್. ಅಂದೋಡಗಿ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಬೆವರಿನ ಹಣವನ್ನು ಅನಧಿಕೃತವಾಗಿ ವಸೂಲಿ ಮಾಡುವುದನ್ನು ಕರ್ನಾಟಕ ಜನಸೈನ್ಯ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಈ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಕಬ್ಬು ಕಟಾವು ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವುದರ ಜೊತೆಗೆ ರೈತರಿಗೆ ಅನ್ಯಾಯವಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತರ ಹಿತ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕಬ್ಬು ಕಟಾವಿನ ಹೆಸರಿನಲ್ಲಿ ರೈತರನ್ನು ಸುಲಿಗೆ ಮಾಡುವ ಪ್ರಯತ್ನ ನಡೆದರೆ ಕರ್ನಾಟಕ ಜನಸೈನ್ಯ ಕಾನೂನುಬದ್ಧವಾಗಿ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.





















