Home ಜಿಲ್ಲೆ ತುಮಕೂರು ಬಡ ವಿದ್ಯಾರ್ಥಿಗಳ ಹಸಿವು ನೀಗಿಸಲು ಅಕ್ಷರ ಅಮೃತ ಯೋಜನೆ ಜಾರಿ

ಬಡ ವಿದ್ಯಾರ್ಥಿಗಳ ಹಸಿವು ನೀಗಿಸಲು ಅಕ್ಷರ ಅಮೃತ ಯೋಜನೆ ಜಾರಿ

ಮಧುಗಿರಿ, ಸೆ. ೪- ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಹಸಿವು ನೀಗಿಸುವ ಉದ್ದೇಶದಿಂದ ಅಕ್ಷರ ಅಮೃತ ಯೋಜನೆ ಜಾರಿಗೆ ತರಲಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್. ರಾಜಣ್ಣ ಹೇಳಿದರು.


ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಕ್ಷರ ಅಮೃತ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಕೂಲಿ ಮಾಡಿ ಶಿಕ್ಷಣ ಕೊಡಿಸುತ್ತಿದ್ದು, ಹಳ್ಳಿಯಿಂದ ಬರುವ ಮಕ್ಕಳು ಹಸಿವಿನಿಂದ ಬಳಲಬಾರದೆಂಬ ಉದ್ದೇಶದಿಂದ ಅಕ್ಷರ ಅಮೃತ ಯೋಜನೆ ಮೂಲಕ ಮಧ್ಯಾಹ್ನದ ಪ್ರಸಾದ ನೀಡುವ ಯೋಜನೆ ಜಾರಿಗೆ ತರಲಾಗಿದೆ ಎಂದರು.


ನಾನು ಚುನಾವಣೆಯಲ್ಲಿ ಮತಕ್ಕಾಗಿ ಇಂತಹ ಯೋಜನೆಗಳನ್ನು ಜಾರಿಗೊಳಿಸು ತ್ತಿಲ್ಲ. ನೀವು ಯಾರಿಗಾದರೂ ಓಟು ಹಾಕಿಕೊಳ್ಳಿ, ಗೆದ್ದರೆ ಕ್ಷೇತ್ರದ ಜನರ ಕೆಲಸ ಮಾಡುತ್ತೇನೆ. ಸೋತರೆ ನನ್ನ ಸ್ವಂತ ಕೆಲಸ ಮಾಡಿಕೊಳ್ಳುತ್ತೇನೆ ಎಂದರು.


ಕ್ಷೇತ್ರದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಏನೇನು ಬೇಕೋ ಅದೆಲ್ಲವನ್ನೂ ನೀಡಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೈಟೆಕ್ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಇರಬೇಕು. ಇದು ನಿಮ್ಮ ಭವಿಷ್ಯವನ್ನು ಹಾಳು ಮಾಡುತ್ತದೆ. ತಾಲ್ಲೂಕಿನಲ್ಲಿ ಯಾವುದೇ ವಿದ್ಯಾರ್ಥಿ ದುಶ್ಚಟಗಳಿಗೆ ಬಲಿಯಾಗಿದ್ದಾನೆ ಎಂಬ ದೂರುಗಳು ಬರದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ವಿದ್ಯಾರ್ಥಿಗಳು ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ ಎಚ್ಚರ ವಹಿಸಿ, ಕ್ರಿಮಿನಲ್ ಕೇಸ್‌ನಲ್ಲಿ ಸೇರಿಕೊಂಡರೆ ನಿಮ್ಮ ಭವಿಷ್ಯವೇ ಮುಗಿದಂತೆ. ಆಗ ಯಾವುದೇ ಶಿಕ್ಷಣವಿದ್ದರೂ ಪ್ರಯೋಜನಕ್ಕೆ ಬರುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.


ಅಕ್ಷರ ಅಮೃತ ಯೋಜನೆಗೆ ಸ್ವಾಮಿ ಜಪಾನಂದ್ ಮಹಾರಾಜ್ ಮತ್ತು ತಂಡದವರು ತುಮಕೂರು ವಿವಿಯಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಅನ್ನ ಪ್ರಸಾದ ಯೋಜನೆ ನನಗೆ ಪ್ರೇರಣೆಯಾಗಿದ್ದು, ನಮ್ಮ ಕ್ಷೇತ್ರದಲ್ಲೂ ಯೋಜನೆ ಜಾರಿಗೊಳಿಸಲು ಸಹಕಾರಿ ಯಾಯಿತು. ಮಧುಗಿರಿ ಬರಪೀಡಿತ ಪ್ರದೇಶವಾಗಿದ್ದು, ಶಿಕ್ಷಣದಿಂದ ಮಾತ್ರ ಬಡತನ ನಿವಾರಣೆ ಸಾಧ್ಯ. ಭೂಮಿ ಇದ್ದರೂ ಮಳೆ ಬರದಿದ್ದರೆ ಯಾವುದೇ ಬೆಳೆ ಬೆಳೆಯಲು ಸಾದ್ಯವಿಲ್ಲ. ಆದ್ದರಿಂದ ಗುಣಮಟ್ಟದ ಶಿಕ್ಷಣ ಪಡೆದು ಸಮಾಜಕ್ಕೆ ಆಸ್ತಿಯಾಗಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.


ಸಮಾರಂಭದ ದಿವ್ಯ ಸಾನಿದ್ಯ ವಹಿಸಿದ್ದ ಪಾವಗಡ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಜಪಾನಂದ ಮಹಾರಾಜ್ ಮಾತನಾಡಿ, ಇಡೀ ರಾಜ್ಯವೇ ಮಧುಗಿರಿಯ ಕಡೆ ತಿರುಗಿ ನೋಡುತ್ತಿದೆ. ೧೦ ಜನರಿಗೆ ಊಟ ನೀಡುವುದೇ ಕಷ್ಟವಾಗಿರುವ ಇಂತಹ ಪರಿಸ್ಥಿತಿಯಲ್ಲಿ ಪ್ರತೀ ದಿನ ೧ ಸಾವಿರ ಜನರಿಗೆ ಊಟ ನೀಡುವುದು ಕಷ್ಟದ ಕೆಲಸ. ಜೀವ ಇರುವವರೆಗೂ ಅಕ್ಷರ ಅಮೃತ ಯೋಜನೆ ಮುಂದುವರಿಯಲಿದೆ ಎಂದು ರಾಜೇಂದ್ರ ಹೇಳಿರುವುದು ನಮ್ಮ ಮನಸ್ಸು ಗೆದ್ದಿದೆ. ರಾಜ್ಯದ ಎಲ್ಲ ಶಾಸಕರು ತಮ್ಮ ಕ್ಷೇತ್ರದಲ್ಲಿ ಇಂತಹ ಯೋಜನೆಗಳನ್ನು ಜಾರಿಗೆ ತಂದರೆ ನಮ್ಮಂತಹ ಸ್ವಾಮೀಜಿಗಳು ಹಿಮಾಲಯಕ್ಕೆ ಹೋಗಬೇಕಾಗಬಹುದು. ಇಂತಹ ಕಾರ್ಯಕ್ರಮಗಳಿಗೆ ಮಾತ್ರ ರಾಜಣ್ಣನವರು ಮೀಸಲಾಗಿಲ್ಲ, ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲ ಸೇವೆಯಲ್ಲೂ ರಾಜಣ್ಣ ತಮ್ಮನ್ನು ತೊಡಗಿಸಿಕೊಂಡಿದ್ದು, ಇದೊಂದು ಕ್ರಾಂತಿಕಾರಿ ಯೋಜನೆ. ಈ ಹಿಂದೆ ಮಧುಗಿರಿಯಲ್ಲಿ ಉಪವಿಭಾಗಾಧಿಕಾರಿಯಾಗಿದ್ದ ಮಾಸ್ತಿಯವರು ಪ್ರಾರಂಭಿಸಿದ ದಾರಿಯನ್ನು ರಾಜಣ್ಣನವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದು ಊಟ ಅಲ್ಲ ಪ್ರಸಾದ. ಈ ಯೋಜನೆಯನ್ನು ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ನೆನೆಯಲಿದ್ದು, ಮುಂದೆ ಉನ್ನತ ಹುದ್ದೆಗಳನ್ನು ಅಲಂಕರಿಸಿ ರಾಜಣ್ಣನವರ ಋಣ ತೀರಿಸುತ್ತೇವೆ ಎಂದು ಯುವ ವಿದ್ಯಾರ್ಥಿಗಳು ಪಣ ತೊಡಬೇಕು. ಇಂತಹ ಯೋಜನೆಗಳಿಂದ ಮಕ್ಕಳ ಕಲಿಕೆಯಲ್ಲಿ ಹೆಚ್ವಳವಾಗಿದ್ದು, ಇದು ಕೇವಲ ಊಟ ನೀಡುವ ಯೋಜನೆಯಲ್ಲ, ದೇಶವನ್ನು ಕಟ್ಟುವ ಮಹತ್ತರ ಕೆಲಸ ಎಂದರು.


ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ರಾಜಣ್ಣ ನವರು ಮಧುಗಿರಿ ತಾಲ್ಲೂಕಿನಲ್ಲಿ ಅಕ್ಷರ ಅಮೃತ ಯೋಜನೆ ಜಾರಿಗೆ ತಂದಿದ್ದಾರೆ. ಸರ್ಕಾರ ಮಾಡಬಹುದಾದ ಕಾರ್ಯವನ್ನು ರಾಜಣ್ಣ ಮಾಡಿದ್ದಾರೆ. ಸಮಾಜದಲ್ಲಿ ಹಣದ ಶ್ರೀಮಂತಿಕೆ ಇರುವವರು ಬಹಳಷ್ಟು ಜನರಿದ್ದು, ಆದರೆ ಹೃದಯ ಶ್ರೀಮಂತಿಕೆ ಇರುವವರು ಸಿಗುವುದು ವಿರಳ, ಅಂತಹ ಹೃದಯ ಶ್ರೀಮಂತಿಕೆ ರಾಜಣ್ಣನವರಿಗೆ ಇದೆ ಎಂದು ಹೇಳಿದರು.ದೇವರು ಅಧಿಕಾರ ನೀಡಿದಾಗ ಇಂತಹ ಪುಣ್ಯದ ಕೆಲಸದಲ್ಲಿ ತೊಡಗಿಕೊಳ್ಳಬೇಕು. ತಂದೆ-ತಾಯಿಯ ಆಸ್ತಿಗಳಿಗೆ ಮಕ್ಕಳು ವಾರಸದಾರರಾಗುತ್ತಾರೆ. ಆದರೆ ಧಾರ್ಮಿಕ ಕಾರ್ಯಗಳಿಗೆ ವಾರಸುದಾರರಾಗುವುದಿಲ್ಲ. ಆದರೆ ರಾಜೇಂದ್ರ ಜೀವ ಇರುವವರೆಗೂ ಯೋಜನೆ ಇರುತ್ತದೆ ಎಂದು ಘೋಷಣೆ ಮಾಡಿರುವುದು, ಅವರ ಸೇವೆಯ ಬಗ್ಗೆ ಇರುವ ಕಾಳಜಿ ತೋರಿಸುತ್ತದೆ. ನಾನು ರಾಜಕೀಯವಾಗಿ ಈ ಮಾತು ಹೇಳುತ್ತಿಲ್ಲ. ಅವರ ವ್ಯಕ್ತಿತ್ವವನ್ನು ನೋಡಿ ಹೇಳುತ್ತಿದ್ದೇನೆ ಕೆ.ಎನ್. ರಾಜಣ್ಣನಂತವರ ಅವಶ್ಯಕತೆ ಕ್ಷೇತ್ರಕ್ಕೆ ಅಗತ್ಯ ಎಂದರು.


ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ ಅಧ್ಯಕ್ಷೆ, ಕೆ.ಎನ್.ಆರ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಶಾಂತಲಾ ರಾಜಣ್ಣ, ಸದಸ್ಯರಾದ ರಶ್ಮಿ ರಾಜಣ್ಣ, ರವೀಂದ್ರ ರಾಜಣ್ಣ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ ರಾಜಣ್ಣ, ನಿರ್ದೇಶಕ ಬಿ ನಾಗೇಶ್ ಬಾಬು, ಪುರಸಭೆ ಮಾಜಿ ಅಧ್ಯಕ್ಷರಾದ ಎನ್ ಗಂಗಣ್ಣ, ಎಂ ಕೆ ನಂಜುಂಡಯ್ಯ, ಲಾಲಾಪೇಟೆ ಮಂಜುನಾಥ್, ಕೆ ಪ್ರಕಾಶ್, ಮಹಮ್ಮದ್ ಆಯುಬ್, ತಾ.ಪಂ ಮಾಜಿ ಅಧ್ಯಕ್ಷೆ ಇಂದಿರಾ ದೇನಾನಾಯ್ಕ, ಮಾಜಿ ಸದಸ್ಯೆ ಸುವರ್ಣಮ್ಮ, ಟಿಎಪಿಸಿಎಂಎಸ್ ಅಧ್ಯಕ್ಷ ಎಂಎಸ್ ಮಲ್ಲಿಕಾರ್ಜುನಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಆದಿ ನಾರಾಯಣ ರೆಡ್ಡಿ, ಜಿ.ಪಂ ಮಾಜಿ ಸದಸ್ಯ ಚೌಡಪ್ಪ, ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ನಂದಿನಿ, ತಾ.ಪಂ ಉತ್ತಮ್, ಡಿವೈಎಸ್ಪಿ ಮಂಜುನಾಥ್ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರಂಗಪ್ಪ ಮತ್ತಿತರರು ಭಾಗವಹಿಸಿದ್ದರು.