Home Lead News ವಿವಿಧತೆಯಲ್ಲಿ ಏಕತೆ ಪ್ರತಿಪಾದನೆ

ವಿವಿಧತೆಯಲ್ಲಿ ಏಕತೆ ಪ್ರತಿಪಾದನೆ

ನ್ಯೂಯಾರ್ಕ್/ಹೊಸದೆಹಲಿ,ಆ. ೩೦- ಯಾರಾದರೂ ಒಬ್ಬ ಹಿಂದೂ, ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಭಾವಿಸಿದರೆ, ಅವನು ನಿಜವಾದ ಹಿಂದೂ ಆಗಿರಲು ಸಾಧ್ಯವೇ ಇಲ್ಲ,” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರ ಸಂಘಚಾಲಕ ಮೋಹನ್ ಭಾಗವತ್ ಅವರು ಸ್ಪಷ್ಟ ನುಡಿಗಳಲ್ಲಿ ಪ್ರತಿಪಾದಿಸಿದ್ದಾರೆ.

ಆರ್‌ಎಸ್‌ಎಸ್‌ನ ಶತಮಾನೋತ್ಸವದ ಅಂಗವಾಗಿ ಅಮೆರಿಕ, ಕೆನಡಾ ಮತ್ತು ಬ್ರಿಟನ್ ಸೇರಿದಂತೆ ಕೈಗೊಂಡಿರುವ ಜಾಗತಿಕ ಸಂಪರ್ಕ ಅಭಿಯಾನದ ಭಾಗವಾಗಿ ಅಮೆರಿಕಕ್ಕೆ ಭೇಟಿ ನೀಡಿರುವ ಅವರು, ನ್ಯೂಯಾರ್ಕ್‌ನಲ್ಲಿ ’ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್‌ಮೆಂಟ್ ಅಂಡ್ ಡೈಲಾಗ್’ ಸಂಸ್ಥೆ ಆಯೋಜಿಸಿದ್ದ ‘ಒಂದು ಜಗತ್ತು, ಒಂದೇ ಮಾನವೀಯತೆ’ ಹಾಗೂ ವಿಶ್ವ ಏಕತಾ ಸಂಭ್ರಮದ ರಕ್ಷಾಬಂಧನ ಸಮಾವೇಶದಲ್ಲಿ ಪ್ರಮುಖ ಭಾಷಣ ಮಾಡಿದರು.

ಸಮಾವೇಶದಲ್ಲಿ ಭಾಗವಹಿಸಿದ್ದ ಧಾರ್ಮಿಕ ಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ ಭಾಗವತ್, “ಹಿಂದೊಮ್ಮೆ ಸಂವಾದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಸಹೋದರರು ನನ್ನ ಬಳಿ ಬಂದು, ’ನೀವು ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುತ್ತೀರಲ್ಲಾ, ನಮ್ಮಂತ ಮುಸ್ಲಿಮರ ಗತಿಯೇನು. ನಮ್ಮನ್ನು ದೇಶದಿಂದ ಹೊರಹಾಕುತ್ತೀರಾ?’ ಎಂದು ಕೇಳಿದ್ದರು. ಅದಕ್ಕೆ ನಾನು ಖಂಡಿತ ಇಲ್ಲ, ಅದು ಹಿಂದುತ್ವದ ತತ್ವವೇ ಅಲ್ಲ. ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಬಯಸುವವನು ಹಿಂದೂ ಆಗಿರಲು ಸಾಧ್ಯವಿಲ್ಲ’ ಎಂದು ಉತ್ತರಿಸಿದ್ದೆ” ಎಂದು ಸ್ಮರಿಸಿಕೊಂಡರು.

“ಅಮೆರಿಕದ ಉಲ್ಲೇಖ ಬಂದಾಗ ‘ಬಹುತ್ವ’ ಎಂಬ ಪದ ಪ್ರಸ್ತಾಪವಾಗುತ್ತದೆ. ಭಾರತದ ವಿಚಾರ ಬಂದಾಗ ’ವೈವಿಧ್ಯತೆಯಲ್ಲಿ ಏಕತೆ’ ಎಂಬ ಮಾತು ಬರುತ್ತದೆ. ಈ ಎರಡೂ ಮೌಲ್ಯಗಳು ಭಾರತೀಯ ಸಂಸ್ಕೃತಿಯ ರಕ್ತದಲ್ಲೇ ಹಾಸುಹೊಕ್ಕಾಗಿವೆ,” ಎಂದರು.

ಜಗತ್ತಿನಲ್ಲಿ ಧರ್ಮಗಳು ಮತ್ತು ಆಚರಣೆಗಳು ವಿಭಿನ್ನವಾಗಿದ್ದರೂ ಮಾನವೀಯತೆ ಒಂದೇ. ಸತ್ಯ ಒಂದೇ ಆಗಿದ್ದು, ಅದನ್ನು ಅರ್ಥೈಸಿಕೊಳ್ಳುವ ಮತ್ತು ವಿವರಿಸುವ ಮಾರ್ಗಗಳು ಬೇರೆ ಬೇರೆಯಾಗಿವೆ. ಎಲ್ಲ ಧಾರ್ಮಿಕ ಮಾರ್ಗಗಳೂ ಅಂತಿಮವಾಗಿ ಒಂದೇ ಪರಮಾತ್ಮನೆಡೆಗೆ ಸಾಗುತ್ತವೆ ಎಂದು ನಂಬುವುದೇ ಹಿಂದುತ್ವ ಎಂದರು.

ಸಮಾವೇಶದಲ್ಲಿದ್ದ ಅಮೆರಿಕದ ಅನಿವಾಸಿ ಭಾರತೀಯರು (ಡಯಾಸ್ಪೊರಾ), ಉದ್ಯಮಿಗಳು ಹಾಗೂ ಸಮುದಾಯದ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಅವರು, “ನೀವು ಪ್ರಸ್ತುತ ನೆಲೆಸಿರುವ ಅಮೆರಿಕವೇ ನಿಮ್ಮ ಕರ್ಮಭೂಮಿ. ಆದ್ದರಿಂದ ಆ ದೇಶಕ್ಕೆ ನಿಷ್ಠೆಯಿಂದಿರುವುದು ಮತ್ತು ಅಲ್ಲಿನ ಪ್ರಗತಿಗೆ ಶ್ರಮಿಸುವುದು ನಿಮ್ಮ ಮೊದಲ ಕರ್ತವ್ಯ. ಅದೇ ವೇಳೆ ನಿಮ್ಮ ಮೂಲ ತಾಯ್ನಾಡಾದ ಭಾರತದ ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಗಿ,” ಎಂದು ಕರೆ ನೀಡಿದರು.

“ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ರಾಜಕೀಯದಿಂದ ಸಾಧ್ಯವಿಲ್ಲ. ಪ್ರಸ್ತುತ ರಾಜಕೀಯವು ಸ್ವಾರ್ಥದ ಆಟವಾಗಿದೆ. ‘ನಾನು’ ಮತ್ತು ‘ನನ್ನದು’ ಎಂಬಲ್ಲಿ ಸಮಸ್ಯೆಗೆ ಪರಿಹಾರವಿಲ್ಲ; ‘ನಾವು’ ಮತ್ತು ‘ನಮ್ಮದು’ ಎಂದಾಗ ಮಾತ್ರ ಪರಿಹಾರ ಸಿಗುತ್ತದೆ,” ಎಂದು ಅಭಿಪ್ರಾಯಪಟ್ಟರು.

೧೯೯೬ರಲ್ಲಿ ಹರಿಯಾಣದ ಚಾರ್ಖಿ ದಾದ್ರಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಅರಬ್ ದೇಶಗಳ ಮುಸ್ಲಿಂ ಪ್ರಯಾಣಿಕರೇ ಹೆಚ್ಚಾಗಿದ್ದರು. ಆಗ ಯಾವುದೇ ಲಾಭದ ಅಪೇಕ್ಷೆಯಿಲ್ಲದೆ ಆರ್‌ಎಸ್‌ಎಸ್ ಸ್ವಯಂಸೇವಕರು ಅಹೋರಾತ್ರಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

’ವಸುಧೈವ ಕುಟುಂಬಕಂ’ (ಇಡೀ ಜಗತ್ತೇ ಒಂದು ಕುಟುಂಬ) ಎಂಬ ಭಾರತೀಯ ಸನಾತನ ಪರಿಕಲ್ಪನೆಯನ್ನು ಬಲವಾಗಿ ಪ್ರತಿಪಾದಿಸಿದ ಭಾಗವತ್, ಕೃತಕವಾಗಿ ಸೃಷ್ಟಿಸಲಾದ ಭೇದಭಾವಗಳನ್ನು ಮರೆತು ಮಾನವೀಯತೆಯ ಬಂಧವನ್ನು ಬಲಪಡಿಸಲು ಕರೆ ನೀಡಿದರು. ಸಮಾರಂಭದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಭಾಗವತ್ ಹೇಳಿಕೆ ಇಬ್ಬಂದಿತನದಿಂದ ಕೂಡಿದೆ: ಪ್ರಿಯಾಂಕ್

ಯಾವುದೇ ಹಿಂದೂ ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಭಾವಿಸಿದರೆ, ಅವನು ಹಿಂದೂವೇ ಅಲ್ಲ” ಎಂದು ಹೇಳಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಅವರ ಹೇಳಿಕೆ ಇಬ್ಬಂದಿತನದಿಂದ ಕೂಡಿದೆ ಎಂದು ಸಚಿವ ಪ್ರಿಯಾಂಕ್‌ಖರ್ಗೆ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಚಿವರು, ಕಳೆದ ೧೦೦ ವರ್ಷಗಳಿಂದ ನೊಂದಾಯಿತವಲ್ಲದ ಈ ಸಂಸ್ಥೆಯು ಭಾರತದಲ್ಲಿ ‘ಹಿಂದೂ ರಾಷ್ಟ್ರ’ದ ಪರಿಕಲ್ಪನೆಯನ್ನು ಬಿತ್ತುತ್ತಾ ಬಂದಿದೆ. ಆದರೆ, ದೇಶದಲ್ಲೊಂದು,ವಿದೇಶಲ್ಲೊಂದು ನೀತಿ ಪ್ರದರ್ಶಿಸುತ್ತಿದೆ ಎಂದು ಟೀಕಿಸಿದ್ದಾರೆ.

ಶ್ರೋತೃಗಳು ಬದಲಾದಂತೆ ಸಂಸ್ಥೆಯ ಭಾಷೆಯೂ ಬದಲಾಗುತ್ತದೆ ಎಂದು ಖರ್ಗೆ ಟೀಕಿಸಿದ್ದಾರೆ.ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಿದ್ಧಾಂತ ಹಾಗೂ ಅದರ ಅಂತರರಾಷ್ಟ್ರೀಯ ಚಟುವಟಿಕೆಗಳ ವಿರುದ್ಧ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶದೊಳಗೆ ಹಾಗೂ ವಿದೇಶಗಳಲ್ಲಿ ಆರ್‌ಎಸ್‌ಎಸ್ ಪ್ರದರ್ಶಿಸುವ ಇಬ್ಬಂದಿ ನೀತಿಯನ್ನು ಪ್ರಶ್ನಿಸಿದ್ದಾರೆ.

ನೂರು ವರ್ಷ ಕಳೆದರೂ ಆರ್‌ಎಸ್‌ಎಸ್ ಇನ್ನೂ ನೋಂದಾಯಿತ ಸಂಸ್ಥೆಯಾಗಿಲ್ಲ. ಈ ಕೂಡಲೇ ಇದನ್ನು ಕಾನೂನುಬದ್ಧವಾಗಿ ನೋಂದಾಯಿಸಬೇಕು ಎಂದು ಸಚಿವರು ಆಗ್ರಹಿಸಿದ್ದಾರೆ. ಅಮೆರಿಕ ಸೇರಿದಂತೆ ವಿದೇಶಗಳಲ್ಲಿ “ಸಾರ್ವತ್ರಿಕ ಏಕತೆ” ಮತ್ತು ಧಾರ್ಮಿಕ ಸಾಮರಸ್ಯದ ಹೆಸರಿನಲ್ಲಿ ಭಾರತೀಯ ಮೂಲದವರಿಂದ ಕೋಟ್ಯಂತರ ರೂಪಾಯಿ ನಿಧಿ ಸಂಗ್ರಹಿಸಲಾಗುತ್ತಿದೆ. ಈ ಹಣವು ಸಮಾಜದಲ್ಲಿ ಕೋಮು ದ್ವೇಷ ಬಿತ್ತುವ ಕೆಲಸಕ್ಕೆ ಬಳಕೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಹಿಂದು ಸ್ವಯಂಸೇವಕ ಸಂಘ ಹಾಗೂ ‘ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್‌ಮೆಂಟ್ ಅಂಡ್ ಡೈಲಾಗ್’ ನಂತಹ ಸಂಸ್ಥೆಗಳು ಆರ್‌ಎಸ್‌ಎಸ್ ನೆರಳಿನಲ್ಲೇ ಕಾರ್ಯಾಚರಿಸುತ್ತಿದ್ದು, ವಿದೇಶಗಳಲ್ಲಿ ಮುಖವಾಡ ಧರಿಸಿ ಅಂತರಧರ್ಮೀಯ ಸಂವಾದ ಮಾತನಾಡುತ್ತಿವೆ ಎಂದು ಹೇಳಿದ್ದಾರೆ.

“ದೇಶದೊಳಗೆ ’ಹಿಂದೂ ರಾಷ್ಟ್ರ’ದ ಜಪ ಮಾಡುವವರು ವಿದೇಶಕ್ಕೆ ಹೋದ ತಕ್ಷಣ ’ಧಾರ್ಮಿಕ ಸಹಿಷ್ಣುತೆ’ ಮತ್ತು ’ಏಕತೆ’ಯ ಮಾತುಗಳನ್ನು ಏಕೆ ಆಡುತ್ತಾರೆ ಇದರ ಹಿಂದಿರುವ ಆರ್ಥಿಕ ಜಾಲ ಹಾಗೂ ನಿಧಿ ಸಂಗ್ರಹಣೆಯ ನೈಜ ಸ್ವರೂಪ ಹೊರಬರಬೇಕಾಗಿದೆ” ಎಂದು ಖರ್ಗೆ ತಮ್ಮ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.