Home ಮುಖಪುಟ ಸುದ್ದಿ ಕ್ಯಾಬ್‌ಗೆ ಕಾಯುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪಿ ಬಂಧನ

ಕ್ಯಾಬ್‌ಗೆ ಕಾಯುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪಿ ಬಂಧನ

ಬೆಂಗಳೂರು,ಜು.೨೮- ರಸ್ತೆಬದಿ ಕ್ಯಾಬ್‌ಗೆ ಕಾಯುತ್ತಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದಾರೆ.


ಕಳೆದ ಜು.೨೬ ರಂದು ರಾತ್ರಿ ಕಲ್ಕೆರೆಯ ಮಂಜುನಾಥ ನಗರದ ಬಳಿ ಸ್ಕೂಟರ್‌ನಲ್ಲಿ ಬಂದಿದ್ದ ಆರೋಪಿ, ಕ್ಯಾಬ್‌ಗಾಗಿ ಕಾಯುತ್ತಿದ್ದ ಮಹಿಳೆಯ ಬಳಿ ಅಸಭ್ಯವಾಗಿ ಮಾತನಾಡಿದ್ದಾನೆ.


ನಾನು ಕ್ಯಾಬ್‌ಗಾಗಿ ಕಾಯುತ್ತಿದ್ದಾಗ ಸ್ಕೂಟರ್‌ನಲ್ಲಿ ಬಂದ ಆರೋಪಿ ಅಸಭ್ಯವಾಗಿ ವರ್ತಿಸಿದ. ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದಾಗ, ನಿಂದಿಸಲು ಪ್ರಾರಂಭಿಸಿದ. ಇಡೀ ಘಟನೆಯನ್ನು ನನ್ನ ಮೊಬೈಲ್ ಫೋನ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ ಆರೋಪಿ, ತಕ್ಷಣವೇ ತನ್ನ ಸ್ಕೂಟರ್‌ನಲ್ಲಿ ಸ್ಥಳದಿಂದ ಹೋಗಿದ್ದಾನೆ” ಎಂದು ದೂರುದಾರ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.


ಘಟನೆಯ ನಂತರ, ವಿಡಿಯೋ ಹಾಗೂ ಆರೋಪಿಯ ಸ್ಕೂಟರ್ ನಂಬರ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಮಹಿಳೆ, “ಈ ನಡವಳಿಕೆಯನ್ನು ಸಾಮಾನ್ಯವೆಂದು ಪರಿಗಣಿಸಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಕಿರುಕುಳದ ವಿರುದ್ಧ ಧ್ವನಿ ಎತ್ತಬೇಕು. ಮೌನವು ಅಪರಾಧಿಗಳನ್ನು ಧೈರ್ಯಗೊಳಿಸುತ್ತದೆ. ಸಾರ್ವಜನಿಕ ಸ್ಥಳಗಳು ಎಲ್ಲರಿಗೂ ಸುರಕ್ಷಿತ ಮತ್ತು ಗೌರವಾನ್ವಿತವಾಗಿರಬೇಕು” ಎಂದು ತಿಳಿಸಿದ್ದಾರೆ.


ಈ ಪೋಸ್ಟ್‌ಗೆ ನಗರ ಪೊಲೀಸರನ್ನು ಟ್ಯಾಗ್ ಮಾಡಿ ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದ ಪೊಲೀಸರು ಮಹಿಳೆಯಿಂದ ದೂರು ಪಡೆದಿದ್ದರು.


ರಾಮಮೂರ್ತಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಅಮಟೆ ಮಾಹಿತಿ ನೀಡಿದ್ದಾರೆ