
ಕಲಬುರಗಿ ಸೆ. 28 : ಕಲೆಯು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಪ್ರಬಲ ಮಾಧ್ಯಮವಾಗಿದೆ. ಗುಡಿ-ಗೋಪುರಗಳಲ್ಲಿನ ಕಲೆ ನಮ್ಮ ಭವ್ಯ ಸಂಸ್ಕøತಿಯ ಪ್ರತೀಕವಾಗಿದ್ದು, ಇವುಗಳ ವೀಕ್ಷಣೆಯಿಂದ ಮನಸ್ಸಿನಲ್ಲಿ ಭಕ್ತಿ ಮತ್ತು ಶಾಂತಿ ಮೂಡುತ್ತದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಲಲಿತ ಕಲಾ ವಿಭಾಗದ ಪ್ರಾಧ್ಯಾಪಕ ಹಾಗೂ ಚೇರ್ಮನ್ ಡಾ. ಸುಬ್ಬಯ್ಯ ಎಂ. ನೀಲಾ ಅವರು ಅಭಿಪ್ರಾಯಪಟ್ಟರು.
ಅವರು ನಗರದ ಅಡ್ವೋಕೇಟ್ ಕಾಲನಿಯಲ್ಲಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಟ್ರಸ್ಟ್ ಆಯೋಜಿಸಿದ್ದ ‘ಸಾಪ್ತಾಹಿಕ ಸತ್ಸಂಗ’ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.ತಮ್ಮ ಸುದೀರ್ಘ ಕಲಾ ಪಯಣವನ್ನು ಮೆಲುಕು ಹಾಕಿದ ಅವರು, 35 ವರ್ಷಗಳ ಕಾಲ ಶರಣಬಸವೇಶ್ವರ ಕಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅನುಭವ ಹಾಗೂ 2017ರಲ್ಲಿ ವಿಶ್ವವಿದ್ಯಾಲಯವನ್ನು ಆರಂಭಿಸಿದ ಹೆಜ್ಜೆಯನ್ನು ಸ್ಮರಿಸಿದರು.
ಬಾಲ್ಯದಲ್ಲಿ ತಂದೆಯವರ ಶಿಸ್ತುಬದ್ಧ ಮಾರ್ಗದರ್ಶನ ತಮ್ಮ ಕಲಾಭ್ಯಾಸಕ್ಕೆ ಭದ್ರ ಬುನಾದಿ ಒದಗಿಸಿತು ಎಂದ ಅವರು, ಶರಣರ ಕಾಯಕ ಮತ್ತು ದಾಸೋಹ ತತ್ವಗಳನ್ನು ಅಳವಡಿಸಿಕೊಂಡು ಕಲಾಕ್ಷೇತ್ರದಲ್ಲಿ ಮುನ್ನಡೆದಿರುವುದಾಗಿ ತಿಳಿಸಿದರು. ರಾಜಾ ರವಿವರ್ಮ ಹಾಗೂ ಡಾ. ಎಸ್. ಎಂ. ಪಂಡಿತ್ ಅವರಂತಹ ಕಲಾ ದಿಗ್ಗಜರ ಕೊಡುಗೆಗಳನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದರು.
ಆಕರ್ಷಕ ಚಿತ್ರ ಪ್ರದರ್ಶನ:
ವಿಶೇಷ ಉಪನ್ಯಾಸದೊಂದಿಗೆ ಡಾ. ನೀಲಾ ಅವರು ರಚಿಸಿದ ವಿಶಿಷ್ಟ ಕಲಾಕೃತಿಗಳ ಪವರ್ ಪಾಯಿಂಟ್ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಪ್ರಮುಖವಾಗಿ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ‘ಇಳಕಲ್ ಸೀರೆ’ಯ ವರ್ಣಚಿತ್ರ, ಪೂಜ್ಯ ಶರಣಬಸಪ್ಪ ಅಪ್ಪ ಅವರ ಭಾವಚಿತ್ರ, 21 ದಾಸೋಹ ಸೂತ್ರಗಳಾಧಾರಿತ ಕೃತಿಗಳು, ತಾಯಿ-ಮಗುವಿನ ವಾತ್ಸಲ್ಯ, ಕೋವಿಡ್ ಸಮಯದ ಸವಾಲುಗಳ ಚಿತ್ರಣ, ನವದೆಹಲಿಯ ಸಂಸತ್ ಭವನದಲ್ಲಿ ಅನಾವರಣಗೊಂಡ ಬಸವೇಶ್ವರರ ಮೂರ್ತಿಯ ಐತಿಹಾಸಿಕ ನೋಟ, ಕ್ಯಾಲಿಗ್ರಫಿ (ಸುಂದರ ಲಿಪಿ), ಶುದ್ಧ ಚಿನ್ನದ ಲೇಪನವಿರುವ ಮೈಸೂರು-ತಂಜಾವೂರು ಶೈಲಿಯ ಕಲಾಕೃತಿಗಳು ಹಾಗೂ ‘ವಿಕಸಿತ್ ಭಾರತ್’ ಪರಿಕಲ್ಪನೆಯ ಕಲಾಕೃತಿಗಳು ನೋಡುಗರ ಗಮನ ಸೆಳೆದವು. ಇದುವರೆಗೆ ಜಪಾನ್, ಶ್ರೀಲಂಕಾ ಸೇರಿದಂತೆ ವಿಶ್ವದ ಎಂಟು ದೇಶಗಳಲ್ಲಿ ತಮ್ಮ ಕಲಾ ಪ್ರದರ್ಶನ ಜರುಗಿರುವುದಾಗಿ ಅವರು ಮಾಹಿತಿ ನೀಡಿದರು.
ಕಾರ್ಯಕ್ರಮ ಜಗತ್ ಬಡಾವಣೆಯ ಶಿವಲೀಲಾ ಹಾಗೂ ಸಂಗಡಿಗರ ಭಜನೆ ಪದಗಳೊಂದಿಗೆ ಆರಂಭ ವಾಯಿತು.ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಟ್ರಸ್ಟ್‍ನ ಗೌರವಾಧ್ಯಕ್ಷರಾದ ಜಿ. ಎಸ್. ಬಿರಾದಾರ ಅವರು ಸ್ವಾಗತ ಭಾಷಣ ಮಾಡಿದರು. ಸೋಮಶೇಖರ ಎಸ್. ರುಳಿ ಅವರು ಅತಿಥಿಗಳನ್ನು ಸಭಿಕರಿಗೆ ಪರಿಚಯಿಸಿದರು. ಮಂಜುನಾಥ ಜೇವರ್ಗಿ ವಂದನಾರ್ಪಣೆ ಗೈದರು. ಆರ್. ಜೆ. ಭೂಸಾರೆ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಅಶೋಕ ಜೇವರ್ಗಿ, ಜಗದೇವಪ್ಪ ಭೂಸಾರೆ, ಎಸ್ ಜಿ ಪಾಟೀಲ ಓಕಳಿ, ಶರಣಬಸಪ್ಪ ಬಾಬಶೆಟ್ಟಿ , ಸಿದ್ದು ಜಂಗಲೆ,ಭೀಮಾಶಂಕರ ಇಂಗಳೇಶ್ವರ, ಮಹಿಳಾ ಸಂಘದ ಸದಸ್ಯೆಯರು, ಕಾಲನಿಯ ಸದ್ಭಕ್ತರು ಭಾಗವಹಿಸಿದ್ದರು.





















